ಮೂಡಿಗೆರೆ: ಶಾಲಾ ಅವಧಿಯಲ್ಲಿ ಮಕ್ಕಳ ಎದುರು ಜಗಳವಾಡಿ, ಕರ್ತವ್ಯಲೋಪ ಎಸಗಿದ್ದ ತಾಲ್ಲೂಕಿನ ಕಿರುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕಿಯರನ್ನು ಡಿಡಿಪಿಐ ಜಿ.ಕೆ.ಪುಟ್ಟರಾಜು ಅಮಾನತುಗೊಳಿಸಿದ್ದಾರೆ.
ಶಿಕ್ಷಕಿಯರಾದ ಕಮಲಮ್ಮ, ವೀಣಾ ಮತ್ತು ಸುಶೀಲಾ ಅಮಾನತುಗೊಂಡವರು. ಶಿಕ್ಷಕಿಯರು ಪ್ರತಿನಿತ್ಯ ಶಾಲೆಯಲ್ಲಿ ಮಕ್ಕಳ ಎದುರು ಜಗಳವಾಡುತ್ತಾರೆ. ಮಕ್ಕಳಿಗೆ ಪಾಠ ಮಾಡದೆ ಶೈಕ್ಷಣಿಕ ಚಟುವಟಿಕೆಗಳಿಂದ ದೂರವಿದ್ದು, ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು ಆರೋಪಿಸಿದ್ದರು. ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಶಾಲೆಗೆ ಪರಿಶೀಲನೆಗೆ ಬಂದಾಗ, ಮಕ್ಕಳ ಬಿಸಿಯೂಟದ ಸಾಮಗ್ರಿಗಳನ್ನು ಸಾಗಿಸುವ ಸಲುವಾಗಿ ಶಿಕ್ಷಕಿ ಬೇರೊಂದು ಕೊಠಡಿಯಲ್ಲಿ ಶೇಖರಿಸಿಟ್ಟಿದ್ದನ್ನು ಸಾರ್ವಜನಿಕರ ಎದುರು ಪತ್ತೆ ಹಚ್ಚಿದ್ದರು. ಮುಖ್ಯ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜನೆ ಮೇಲೆ ವರ್ಗಾವಣೆ ಮಾಡಲಾಗಿತ್ತು. ಜೂನ್‌ನಿಂದ ಮತ್ತೆ ಇದೇ ಶಾಲೆಗೆ ಬಂದ ಮುಖ್ಯ ಶಿಕ್ಷಕಿ ಕಮಲಮ್ಮ ಮತ್ತೆ ಸಹ ಶಿಕ್ಷಕಿಯರೊಂದಿಗೆ ಜಗಳ ಮುಂದುವರಿಸಿದ್ದರು. ಸರಿಯಾಗಿ ಪಾಠ ನಡೆಯದ ಕಾರಣ ಪಾಲಕರು ಮಕ್ಕಳ ಟಿಸಿ ಪಡೆದುಕೊಂಡು ಬೇರೆ ಶಾಲೆಗಳಿಗೆ ದಾಖಲಿಸಿದ್ದರು. ಇದರಿಂದ 150 ಇದ್ದ ವಿದ್ಯಾರ್ಥಿಗಳ ಸಂಖ್ಯೆ 34ಕ್ಕೆ ಇಳಿದಿತ್ತು.
ಗ್ರಾಮಸಭೆಯಲ್ಲಿ ಶಾಲೆಯ ಸಮಸ್ಯೆ ಬಗ್ಗೆ ಚರ್ಚೆ ನಡೆದು ಮೂವರು ಶಿಕ್ಷಕಿಯರನ್ನು ಅಮಾನತುಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಎಸ್‌ಡಿಎಂಸಿ ಹಾಗೂ ಮಕ್ಕಳ ಪೋಷಕರು, ಹಳೆಯ ವಿದ್ಯಾರ್ಥಿಗಳು ನೀಡಿದ ದೂರಿನಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ 2 ಬಾರಿ ತನಿಖೆ ನಡೆಸಿ ವರದಿ ನೀಡಿದ್ದರು. ಡಿಡಿಪಿಐ ಅಮಾನತು ಆದೇಶ ಸಿದ್ಧಪಡಿಸಿದ್ದರೂ,ಕೊನೆಯ ಕ್ಷಣದಲ್ಲಿ ಆದೇಶವನ್ನು ಶಿಕ್ಷಕಿಯರಿಗೆ ಜಾರಿಗೊಳಿಸದಂತೆ ತಡೆಯಲಾಗಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಎಸ್‌ಡಿಎಂಸಿ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಮುಂದಾಗಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಿಳಿದುಕೊಂಡ ಅಧಿಕಾರಿಗಳು ಗುರುವಾರ ಮೂವರು ಶಿಕ್ಷಕಿಯರಿಗೆ ಅಮಾನತು ಆದೇಶವನ್ನು ಜಾರಿಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.