ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರ, ಬಾಳೂರು ಸುತ್ತಮುತ್ತ ಸೋಮವಾರ ಧಾರಾಕಾರ ಮಳೆ ಸುರಿಯಿತು. ಸೋಮವಾರ ಸಂತೆ ದಿನವಾದ್ದರಿಂದ ಸಂತೆಗೆ ಬಂದ ಜನರು ಮಳೆಯಿಂದ ತೊಂದರೆ ಅನುಭವಿಸಿದರು.
ಚಾರ್ಮಾಡಿ ಘಾಟಿಯಲ್ಲಿ ನಿರಂತರ ಮಳೆಯಿಂದ ಮಂಜು ಮುಸುಕಿದ ವಾತಾವರಣ ಕಂಡು ಬಂತು. ವಾಹನ ಸವಾರರು ರಸ್ತೆ ಕಾಣದೆ ವಾಹನ ಚಲಾಯಿಸಲು ಪರದಾಡಿದರು. ಬಣಕಲ್ ಸಮೀಪದ ಕೋಗಿಲೆ ರಸ್ತೆಯಲ್ಲಿ ಮರ ರಸ್ತೆಗೆ ಉರುಳಿ ಸಂಚಾರಕ್ಕೆ ಅಡ್ಡಿಯಾಯಿತು. ಕೋಗಿಲೆಯ ಗ್ರಾಮಸ್ಥರು ಮರ ತೆರವುಗೊಳಿಸಿದರು. ಬಣಕಲ್ ಸಮೀಪದ ಗುಡ್ಡಹಟ್ಟಿ ಬಳಿ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದು ಕಂಬ ತುಂಡಾಗಿ ಹಾನಿಯಾಗಿದೆ.
ಬಣಕಲ್ ರಾಷ್ಟ್ರೀಯ ಹೆದ್ದಾರಿಯ ಹಳೆ ಅಂಚೆ ಕಚೇರಿ ಬಳಿ ಚರಂಡಿ ಮುಚ್ಚಿರುವುದರಿಂದ, ಮಳೆ ನೀರು ಹೆದ್ದಾರಿಯ ಮೇಲೆ ಹರಿಯಿತು. ವಾಹನ ಸವಾರರು ಪರದಾಡಿದರು. ಕೆಲವು ದಿನಗಳ ಹಿಂದೆ ಇಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿತ್ತು. ಹಳೆ ಅಂಚೆ ಕಚೇರಿ ರಸ್ತೆಯಿಂದ ಹೆದ್ದಾರಿವರೆಗೆ ನೀರು ಹರಿಯುತ್ತಿದೆ. ಹೆದ್ದಾರಿ ಮೇಲೆ ನೀರು ಹರಿಯದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.