ಚಿಕ್ಕಮಗಳೂರು: ಊರು ಅದೇ, ಅರಣ್ಯವೂ ಅದೇ, ಕಂದಾಯ ಭೂಮಿಯೂ ಅದೇ, ಪರಿಭಾವಿತ ಅರಣ್ಯವೂ ಅದೆ... ಒಂದೇ ಜಾಗ ಆರು ರೀತಿಯ ದಾಖಲೆಗಳು ಸೃಷ್ಟಿ...
ಇದು ಜಿಲ್ಲೆಯ ಅರಣ್ಯ ಮತ್ತು ಕಂದಾಯ ಭೂಮಿಯ ಗೊಂದಲದ ಪರಿ. ಜಿಲ್ಲೆಯಲ್ಲಿನ ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಬಿಡಿಸಲಾಗದ ಕಗ್ಗಂಟಾಗಿದೆ. ಒಂದೇ ಸರ್ವೆ ನಂಬರ್, ಒಂದೇ ಜಾಗ ಆರು ರೀತಿಯ ದಾಖಲೆಗಳು ಸೃಷ್ಟಿಯಾಗಿವೆ. ಈ ಗೊಂದಲ ಬಿಡಿಸುವ ಹರಸಾಹಸದ ಕೆಲಸಕ್ಕೆ ಜಿಲ್ಲಾಡಳಿತ ಕೈಹಾಕಿದೆ.
ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಪರಿಹಾರಕ್ಕೆ ಜಂಟಿ ಸರ್ವೆ ಕಾರ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆರಂಭಿಸಿದ್ದಾರೆ. ಸರ್ವೆ ನಂಬರ್ ಆಧರಿಸಿ ಪರಿಶೀಲನೆ ಆರಂಭಿಸಿದಾಗ ಗೊಂದಲಗಳ ಸರಮಾಲೆಯೇ ಅಧಿಕಾರಿಗಳ ಮುಂದೆ ತೆರೆದುಕೊಂಡಿದೆ. ಉದಾಹರಣೆಗೆ ಒಂದು ನಿರ್ದಿಷ್ಟ ಸರ್ವೆ ನಂಬರ್‌ನಲ್ಲಿ 500 ಎಕರೆ ಜಾಗವಿದ್ದರೆ ಅದಕ್ಕೆ ಐದಾರು ರೀತಿಯ ದಾಖಲೆಗಳು ಸೃಷ್ಟಿಯಾಗಿವೆ.
ಜಾಗ ಇರುವುದೇ 500 ಎಕರೆಯಾದರೆ ಅಷ್ಟನ್ನೂ ಒಮ್ಮೆ ಮೀಸಲು ಅರಣ್ಯ, ಮತ್ತೊಮ್ಮೆ ಜಿಲ್ಲಾ ಅರಣ್ಯ, ಮಗದೊಮ್ಮೆ ಪರಿಭಾವಿತ ಅರಣ್ಯ, ಇನ್ನೊಮ್ಮೆ ಜಿಲ್ಲಾಧಿಕಾರಿ ಕಾಯ್ದಿರಿಸಿದ ಅರಣ್ಯ, ಮತ್ತೊಂದು ಬಾರಿ ಕಿರು ಅರಣ್ಯ, ಇನ್ನೊಂದು ಬಾರಿ ಅರಣ್ಯ ಇಲಾಖೆ ಸ್ವಾಧೀನಕ್ಕೆ ಸೆಕ್ಷನ್ 4 ಪ್ರಕ್ರಿಯೆ ಆರಂಭಿಸಿರುವ ಜಾಗ ಎಂಬುದಾಗಿ ದಾಖಲೆಗಳು ಸೃಷ್ಟಿಯಾಗಿವೆ.
ಒಂದು ನಿರ್ದಿಷ್ಟ ಜಾಗದ ಎಲ್ಲಾ ದಾಖಲೆಗಳನ್ನು ನೋಡಿದರೆ 2 ಸಾವಿರಕ್ಕೂ ಹೆಚ್ಚು ಜಾಗ ಇರಬೇಕು. ಆದರೆ, ವಾಸ್ತವವಾಗಿ ಅಲ್ಲಿ 500 ಎಕರೆಯಷ್ಟೇ ಜಾಗವಿದೆ. ಎಲ್ಲರ ಬಳಿಯೂ ದಾಖಲೆಗಳಿವೆಯಷ್ಟೆ, ಜಾಗ ಯಾವುದು, ಗಡಿ ಯಾವುದು ಎಂಬುದು ಯಾರಿಗೂ ಗೊತ್ತಿಲ್ಲ. ಎರಡೂ ಇಲಾಖೆಗಳ ಹಿಂದಿನ ಹಲವು ವರ್ಷಗಳ ಅಧಿಕಾರಿಗಳು ಸ್ಥಳ ಪರಿಶೀಲಿಸದೆ ಕಚೇರಿಯಲ್ಲಿ ಕುಳಿತು ಕಡತಗಳಿಗೆ ಸಹಿ ಹಾಕಿರುವುದು ಇಷ್ಟೆಲ್ಲಾ ಗೊಂದಲಗಳನ್ನು ಹುಟ್ಟು ಹಾಕಿದೆ.
ಈ ರೀತಿ ಒಂದೇ ಜಾಗಕ್ಕೆ ಹಲವು ದಾಖಲೆಗಳು ಸೃಷ್ಟಿಯಾಗಿರುವ 1800ಕ್ಕೂ ಹೆಚ್ಚು ಪ್ರಕರಣಗಳಿವೆ ಎಂಬುದು ಜಂಟಿ ಸರ್ವೆ ವೇಳೆ ಗೊತ್ತಾಗಿದೆ. ಈ ಗೊಂದಲಗಳ ಸುಕ್ಕು ಬಿಡಿಸುವ ಕಾರ್ಯಕ್ಕೆ ಈಗ ಜಿಲ್ಲಾಡಳಿತ ಮುಂದಾಗಿದೆ. ಒಂದೊಂದೇ ಸರ್ವೆ ನಂಬರ್ ಆಧರಿಸಿ ವಿಂಗಡಣೆ ಮಾಡುವ ಕೆಲಸ ಈಗ ಆಗಬೇಕಿದೆ. ಅದಕ್ಕೆ ಜಿಲ್ಲಾಡಳಿತ ತಯಾರಿ ಆರಂಭಿಸಿದೆ.
ಪ್ರತಿ ಸರ್ವೆ ನಂಬರ್‌ನ ದಾಖಲೆಗಳನ್ನು ಹಿಡಿದು ಸ್ಥಳಕ್ಕೆ ತೆರಳಿ ಜಾಗ ಅಳತೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ಕಾರ್ಯ ಆರಂಭಿಸಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಪಡೆ ರಚನೆಯಾಗಬೇಕಿದೆ. 2004–05ನೇ ಸಾಲಿನಲ್ಲಿ ರಚನೆಯಾಗಿದ್ದ ರೀತಿಯ ಕಾರ್ಯಪಡೆ ರಚನೆ ಮಾಡುವಂತೆ ಕೋರಿ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ಕಾರ್ಯಪಡೆ ರಚಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದರೆ ಮೂರ್ನಾಲ್ಕು ತಿಂಗಳಲ್ಲಿ ಒಂದಷ್ಟು ಗೊಂಲಗಳ ಪರಿಹಾರ ಸಾಧ್ಯವಾಗಲಿದೆ. ಸುಪ್ರೀಂ ಕೋರ್ಟ್‌ಗೂ ಮನವರಿಕೆ ಮಾಡಿಕೊಡಲು ಸಾಧ್ಯವಿದೆ. ಜನರ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅರಣ್ಯ ವ್ಯಾಪ್ತಿಯಲ್ಲೇ ಹಲವು ಪ್ರಮುಖ ಊರುಗಳು ಜನವಸತಿ ಸೇರಿಕೊಂಡಿರುವುದು ಕೂಡ ಜಂಟಿ ಸರ್ವೆ ವೇಳೆ ಗೊತ್ತಾಗಿದೆ. ಜನವಸತಿ ಗ್ರಾಮ ಠಾಣ ಅಂಗವಾಡಿ ಶಾಲೆ ಬಸ್ ನಿಲ್ದಾಣಗಳೇ ಮೀಸಲು ಅರಣ್ಯ ಎಂಬಂತೆ ದಾಖಲೆಗಳು ಸೃಷ್ಟಿಯಾಗಿವೆ. ಎನ್.ಆರ್.ಪುರ ಕೊಪ್ಪ ಚಿಕ್ಕಮಗಳೂರು ಶೃಂಗೇರಿ ಕಡೂರು ತಾಲ್ಲೂಕಿನಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.