ಕಡೂರು: ತಾಲ್ಲೂಕಿನ ಎಮ್ಮೆದೊಡ್ಡಿ ಪ್ರದೇಶದಲ್ಲಿ ಅತಿಕ್ರಮಣಕ್ಕೊಳಗಾಗಿದ್ದ ಅರಣ್ಯ ಭೂಮಿಯನ್ನು ಇಲಾಖೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದ್ದಾರೆ.
ಎಮ್ಮೆದೊಡ್ಡಿ ಸರ್ವೆ ನಂ.70ರಲ್ಲಿ 10 ಎಕರೆ ಅರಣ್ಯ ಜಾಗವನ್ನು ಕೆಲವರು ಅತಿಕ್ರಮಿಸಿ ಅಲ್ಲಿ ಮನೆ, ಕೋಳಿ ಶೇಡ್ ನಿರ್ಮಿಸಿ ಅಡಿಕೆ ಗಿಡಗಳನ್ನು ನೆಟ್ಟಿದ್ದರು. ಕಡೂರು ಪುರಸಭೆ ಅಧಿಕಾರಿಯೊಬ್ಬರು ಈ ಜಾಗವನ್ನು ಅತಿಕ್ರಮಿಸಿದ್ದಾರೆ ಎಂದು ಹಲವರು ದೂರು ಸಲ್ಲಿಸಿದ್ದರು. ವರ್ಷದ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿ ರಮೇಶ್, ತನಿಖೆಗೆ ತಹಶೀಲ್ದಾರ್‌ಗೆ ಸೂಚಿಸಿದ್ದರು.
ಈ ಬಗ್ಗೆ ವರದಿ ಸಿದ್ಧಪಡಿಸಿ, ಅರಣ್ಯ ಇಲಾಖೆ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅಂತಿಮವಾಗಿ ಎಸಿಎಫ್ ನ್ಯಾಯಾಲಯದ 60ಎ ಆದೇಶದನ್ವಯ ಈ ಭೂಮಿಯನ್ನು ತೆರವುಗೊಳಿಸಲಾಗಿದೆ. ತೆರವಿಗೆ ಮುನ್ನ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅತಿಕ್ರಮಣ ಮಾಡಿದ ಎಚ್.ಎನ್.ಮಂಜುನಾಥ್, ಮುಸ್ಲಾಪುರದ ಪರಮೇಶ್ವರಪ್ಪ, ಜಾಹೀದಾಬಾನು, ಆಶಾ ರಮೇಶ್ ಎಂಬುವವರಿಗೆ ಸೂಚಿಸಲಾಗಿತ್ತು ಎಂದು ಇಲಾಖೆ ಮೂಲಗಳು ತಿಳಿಸಿವೆ.
ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ನೇತೃತ್ವದಲ್ಲಿ ಶನಿವಾರ ಅರಣ್ಯ ಇಲಖೆ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ತೆರವುಗೊಳಿಸಿದರು.
ಕಡೂರು ವಲಯದ ಅರಣ್ಯಾಧಿಕಾರಿ ರಜಾಕ್ ಸಾಬ್ ನದಾಫ್, ಪಿಎಸ್‌ಐಗಳಾದ ದನಂಜಯ, ಅಜರುದ್ದೀನ್ ಇದ್ದರು.
ಅತಿಕ್ರಮಣ ತೆರವುಗೊಳಿಸದ ಬಗ್ಗೆ ಶುಕ್ರವಾರ ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಖಂಡನೆ ವ್ಯಕ್ತವಾಗಿತ್ತು. ಶಾಸಕ ಕೆ.ಎಸ್.ಆನಂದ್ ವಿಷಯ ಪ್ರಸ್ತಾಪಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತೆರವು ಕಾರ್ಯ ನಡೆಸಲು ಸೂಚನೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.