ADVERTISEMENT

ಸಶಸ್ತ್ರ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಬಂದಿರುವ ಮಾಜಿ ನಕ್ಸಲರಿಗೆ ಜೋಪಡಿ ಜೀವನ!

ವಾರವಿಡೀ ನ್ಯಾಯಾಲಯ ಸುತ್ತಾಟ; ವಕೀಲರಿಗೆ ಶುಲ್ಕ ಕೊಡಲು ಪರದಾಟ

ವಿಜಯಕುಮಾರ್ ಎಸ್.ಕೆ.
Published 21 ನವೆಂಬರ್ 2024, 19:04 IST
Last Updated 21 ನವೆಂಬರ್ 2024, 19:04 IST
<div class="paragraphs"><p>ಪರಶುರಾಮ ಮತ್ತು ನಿಲಗುಳಿ ಪದ್ಮನಾಭ್ ದಂಪತಿ ಅಂದಿನ ಚಿಕ್ಕಮಗಳೂರು ಜಿಲ್ಲಾಧಿಕಾರಿ ಜಿ.ಸತ್ಯವತಿ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದಾಗಿನ ಚಿತ್ರ. </p></div>

ಪರಶುರಾಮ ಮತ್ತು ನಿಲಗುಳಿ ಪದ್ಮನಾಭ್ ದಂಪತಿ ಅಂದಿನ ಚಿಕ್ಕಮಗಳೂರು ಜಿಲ್ಲಾಧಿಕಾರಿ ಜಿ.ಸತ್ಯವತಿ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದಾಗಿನ ಚಿತ್ರ.

   

ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯ ಜೊತೆಗಿದ್ದರು

ಚಿಕ್ಕಮಗಳೂರು: ‘ಸಶಸ್ತ್ರ ಹೋರಾಟ ಬಿಟ್ಟು ಪ್ರಜಾತಂತ್ರದ ಮುಖ್ಯವಾಹಿನಿಗೆ ಮರಳಿದ ಹಲವರ ಬದುಕು ದಯನೀಯ ಸ್ಥಿತಿಯಲ್ಲಿದೆ. ಜೋಪಡಿಯ ಜೀವನ, ವಾರದಲ್ಲಿ ನಾಲ್ಕು– ದಿನ ಕೋರ್ಟ್‌ ಅಲೆದಾಟ, ಹೆಂಡತಿ–ಮಕ್ಕಳಿಗೆ ಅರೆಹೊಟ್ಟೆಯ ಜೀವನ ನಮ್ಮದಾಗಿದೆ’ ಎನ್ನುತ್ತಾರೆ ಕೆಲ ಮಾಜಿ ನಕ್ಸಲರು.

ADVERTISEMENT

2014-2018 ರವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 13 ಜನ ನಕ್ಸಲ್ ಹಾದಿ ತೊರೆದು ಮುಖ್ಯವಾಹಿನಿಗೆ ಬಂದರು. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಪ್ರಯತ್ನ ಹಾಗೂ ಕಸ್ತೂರಿ ರಂಗನ್ ವರದಿ ಹೇರಿಕೆಗೆ ವಿರೋಧಿಸಿ, ದುಡಿಯುವ ಕೈಗಳಿಗೆ ಉದ್ಯೋಗ ಕೊಡಬೇಕು, ಜಮೀನ್ದಾರಿ ಪದ್ಧತಿ ಕಡೆಯಾಗಬೇಕು, ಭೂಮಿ ಹಂಚಿಕೆಯಾಗಬೇಕು ಎಂಬ ಬೇಡಿಕೆ ಮುಂದಿಟ್ಟು ನಡೆಸಿದ ಹೋರಾಟಗಳಲ್ಲಿ ಇದ್ದವರು ಕೊನೆಗೆ ನಕ್ಸಲ್ ಹಾದಿ ಸೇರಿಕೊಂಡರು.  

ಆ ನಂತರ ಎಚ್.ಎಸ್.ದೊರೆಸ್ವಾಮಿ, ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯ ನೇತೃತ್ವದಲ್ಲಿ ಹಲವರು ಮುಖ್ಯವಾಹಿನಿಗೆ ಬರಲು ಒಪ್ಪಿದರು. ಬಂದವರನ್ನು ಹೂವಿನ ಹಾರ ಹಾಕಿ ಅಂದಿನ ಅಧಿಕಾರಿಗಳು ಬರಮಾಡಿಕೊಂಡರು.

‘ಮುಖ್ಯವಾಹಿನಿಗೆ ಬಂದರೆ ಭೂಮಿ, ವಸತಿ, ಉದ್ಯೋಗ ನೀಡುತ್ತೇವೆ. ಎಲ್ಲಾ ಪ್ರಕರಣ ವಾಪಸ್ ಪಡೆಯುತ್ತೇವೆ ಎಂದು ಸರ್ಕಾರ ನಂಬಿಸಿತ್ತು. ಕೊಟ್ಟ ಭರವಸೆಗಳು ಇಂದಿಗೂ ಕಡತಗಳಿಗಷ್ಟೇ ಸೀಮಿತವಾಗಿವೆ’ ಎಂದು 2016ರ ನ.15ರಂದು ಮುಖ್ಯವಾಹಿನಿಗೆ ಮರಳಿದ ನಿಲಗುಳಿ ಪದ್ಮನಾಭ್–ರೇಣುಕಾ ದಂಪತಿ ಹೇಳುತ್ತಾರೆ.

‘ಹೋರಾಟ ಬಿಟ್ಟು ಹೆಂಡತಿ–ಮಕ್ಕಳೊಂದಿಗೆ ಜೀವನ ನಡೆಸಬೇಕು ಎಂದು ಬಂದೆವು. ಆದರೆ, ಮೊದಲಿಗೆ ಒಂದಷ್ಟು ದಿನ ಜೈಲಿನಲ್ಲಿ ಕೊಳೆಯಬೇಕಾಯಿತು. ಈಗ ನ್ಯಾಯಾಲಯದಲ್ಲಿ ಗೋಡೆಗಳ ನಡುವೆ ದಿನ ಕಳೆಯುವಂತಾಗಿದೆ. ವಕೀಲರಿಗೆ ಶುಲ್ಕ ನೀಡಲು ಹಣವಿಲ್ಲದ ಸ್ಥಿತಿ ಇದೆ. ವಾರದಲ್ಲಿ ನಾಲ್ಕೈದು ದಿನ ನ್ಯಾಯಾಲಯದಲ್ಲೇ ಇದ್ದರೆ ದುಡಿಮೆ ಯಾವಾಗ ಮಾಡಬೇಕು’ ಎಂಬುದು ಅವರ ಪ್ರಶ್ನೆ.

‘ಅಂಗವಿಕಲ ಎಂಬ ಕಾರಣಕ್ಕೆ 2 ಎಕರೆ ಜಮೀನು ಕೇಳಿದ್ದೆವು. ಜಾಗ ಗುರುತಿಸಲು ಅಧಿಕಾರಿಗಳು ತಿಳಿಸಿದ್ದರು. ಗುರುತಿಸಿ 5 ವರ್ಷಗಳಾಗಿವೆ. ಅದನ್ನು ಕೊಡುವ ಮನಸ್ಸನ್ನು ಸರ್ಕಾರ ಮಾಡಲಿಲ್ಲ. ವಾಸವಿರಲು ಮನೆ ಕೇಳಿದ್ದೆವು, ಅದನ್ನೂ ಕೊಟ್ಟಿಲ್ಲ. ಕೊಪ್ಪ ತಾಲ್ಲೂಕಿನ ನಿಲುಗಳಿಯಲ್ಲಿ ಈಗ ಗುಡಿಸಲಿನಲ್ಲಿ ಇದ್ದೇವೆ. ಆಗ ಕತ್ತಲಕೋಣೆಯ ಜೈಲು ವಾಸ, ಈಗ ವಿದ್ಯುತ್ ಇಲ್ಲದ ಜೋಪಡಿಯಲ್ಲಿ ಜೀವನ’ ಎಂದು ಪದ್ಮನಾಭ್ ಕಣ್ಣೀರು ಸುರಿಸುತ್ತಾರೆ.

‘ಅತಂತ್ರರಾಗಿರುವ ನಮಗೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಕೋರಿ ಇತ್ತೀಚೆಗೆ ಸಿರಿಮನೆ ನಾಗರಾಜ್, ಗೌಸ್ ಮೊಹಿಯುದ್ದೀನ್, ದಿನೇಶ್ ಪಟವರ್ದನ್ ನೇತೃತ್ವದ ನಿಯೋಗದೊಂದಿಗೆ ಜಿಲ್ಲಾಧಿಕಾರಿಗೆ ಮನವಿಯನ್ನೂ ಸಲ್ಲಿಸಿದ್ದೆವು. ಪ್ರಯೋಜನ ಮಾತ್ರ ಆಗಲಿಲ್ಲ’ ಎನ್ನುತ್ತಾರೆ ಅವರು.

ಕೊಪ್ಪ ತಾಲ್ಲೂಕಿನ ನಿಲಗುಳಿ ಬಳಿ ಪದ್ಮನಾಭ್ ನಿರ್ಮಿಸಿಕೊಂಡಿರುವ ಮನೆ

ಕನ್ಯಾಕುಮಾರಿಗೆ ಜೈಲೇ ‘ಮುಖ್ಯವಾಹಿನಿ’

ಮುಖ್ಯವಾಹಿನಿಗೆ ಬಂದ 13 ಜನರ ಪೈಕಿ ಕನ್ಯಾಕುಮಾರಿ ಅವರು ಏಳೂವರೆ ವರ್ಷಗಳಿಂದ ಜೈಲಿನಲ್ಲೇ ಇದ್ದಾರೆ. ಇದು ಮುಖ್ಯವಾಹಿನಿಯೇ ಎಂಬುದು ಸಶಸ್ತ್ರ ಬಿಟ್ಟು ಬಂದವರು ಕೇಳುವ ಪ್ರಶ್ನೆ. ಮೂಡಿಗೆರೆ ತಾಲ್ಲೂಕಿನ ಹಳುವಳ್ಳಿಯ ಕನ್ಯಾಕುಮಾರಿ ಮತ್ತು ಬೆಂಗಳೂರಿನ ಶಿವ ಜ್ಞಾನದೇವ್ ದಂಪತಿ 2017ರ ಜೂನ್ 5ರಂದು ಮುಖ್ಯ ವಾಹಿನಿಗೆ ಬಂದರು. ಆಗ ಅವರಿಗೆ ಆರು ತಿಂಗಳ ಮಗ ಇದ್ದ. ಕನ್ಯಾಕುಮಾರಿ ಅವರ ವಿರುದ್ಧ ಕರ್ನಾಟಕ ಮತ್ತು ಕೇರಳದಲ್ಲಿ 64 ಪ್ರಕರಣಗಳು ದಾಖಲಾಗಿದ್ದವು.  ‘ಎಲ್ಲ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಈಗ ಏಳೂವರೆ ವರ್ಷ ಕಳೆದಿವೆ. ಪ್ರಕರಣಗಳನ್ನು ಪೂರ್ಣಗೊಳಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಶಿವು ಜ್ಞಾನದೇವ್ ಬೇಸರ ವ್ಯಕ್ತಪಡಿಸಿದರು. ‘ಕೆಲವು ಪ್ರಕರಣಗಳಲ್ಲಿ ಕರ್ನಾಟಕದ ಪೊಲೀಸರು ಇನ್ನೂ ಆರೋಪ ಪಟ್ಟಿಯನ್ನೇ ಸಿದ್ಧಪಡಿಸಿಲ್ಲ. ಅವುಗಳು ವಿಚಾರಣೆಗೆ ಬಂದು ಇತ್ಯರ್ಥವಾಗುವುದು ಯಾವಾಗ’ ಎಂದು ಅವರು ಪ್ರಶ್ನಿಸಿದರು. ‘ಬೆಂಗಳೂರಿನಲ್ಲಿ ಬಾಡಿಗೆಗೆ ಆಟೊರಿಕ್ಷಾ ಪಡೆದು ಓಡಿಸುತ್ತಿದ್ದೇನೆ. ಐದೂವರೆ ವ‌ರ್ಷ ತಾಯಿಯೊಂದಿಗೆ ಜೈಲಿನಲ್ಲೇ ಇದ್ದ ಮಗ ಈಗ ಮನೆಗೆ ಬಂದಿದ್ದಾನೆ. ಮಗನ ಜವಾಬ್ದಾರಿ ನ್ಯಾಯಾಲಯ ಮತ್ತು ಜೈಲಿಗೆ ತಿರುಗಾಡಿ ರೋಸಿ ಹೋಗಿದ್ದೇನೆ’ ಎಂದರು. ‘ಕರ್ನಾಟಕ ಮತ್ತು ತಮಿಳುನಾಡು ಎರಡೂ ಕಡೆ ಪ್ರಕರಣಗಳಿವೆ. ಮುಖ್ಯವಾಹಿನಿಗೆ ಬರುವಾಗ ನಮಗೆ ನೀಡಿದ ಭರವಸೆ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ. ಪ್ರಕರಣಗಳು ಸದ್ಯಕ್ಕೆ ಇತ್ಯರ್ಥವಾಗುವ ಯಾವ ಲಕ್ಷಣಗಳೂ ಇಲ್ಲ. ವಕೀಲರಿಗೆ ಕೊಡಲು ಕಾಸಿಲ್ಲ ಹೆಂಡತಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರೆ ನಾವಿಬ್ಬರು ಹೊರಗಿದ್ದೇ ಶಿಕ್ಷೆ ಅನುಭವಿಸುತ್ತಿದ್ದೇವೆ’ ಎಂದು ವಿವರಿಸಿದರು. ‘ಯಾಕಾದರೂ ಮುಖ್ಯವಾಹಿನಿಗೆ ಬಂದೆವೊ ಎನಿಸುತ್ತಿದೆ. ಇಲ್ಲಿ ದಿನವೂ ಶಿಕ್ಷೆ ಅನುಭವಿಸುವ ಬದಲು ಒಂದು ದಿನದ ಶಿಕ್ಷೆಯೇ ಲೇಸು ಎನ್ನಿಸುತ್ತಿದೆ. ದೈಹಿಕ ಹಿಂಸೆಯಾಗಿದ್ದರೆ ತಡೆಯಬಹುದಿತ್ತು. ಮಾನಸಿಕ ಹಿಂಸೆ ಅನುಭವಿಸಲಾರೆ’ ಎಂದು ಗದ್ಗದಿತರಾದರು ಶಿವು. ‘ಕರ್ನಾಟಕ ಮತ್ತು ಕೇರಳದಲ್ಲಿ 10–15 ನ್ಯಾಯಾಲಯಗಳಿಗೆ ಸುತ್ತಾಡಬೇಕು. ಆಟೊರಿಕ್ಷಾ ಓಡಿಸುವ ನಾನು ಹಣ ಎಲ್ಲಿಂದ ತರಬೇಕು ಇದನ್ನು ಮುಖ್ಯವಾಹಿನಿ ಎಂದು ಕರೆಯಬೇಕೆ’ ಎಂದು ಪ್ರಶ್ನಿಸಿದರು.

ಮುಖ್ಯ ವಾಹಿನಿಗೆ ಬಂದವರು

ಹಾಗಲಗಂಜಿ ವೆಂಕಟೇಶ್, ಮಲ್ಲಿಕಾ (ಕವಿತಾ), ಕೋಮಲಾ ಹೊರ್ಲೆ, ಜಯಾ ಸಿರಿಮನೆ, ನಾಗರಾಜ್ ನೂರ್, ಶ್ರೀಧರ್ ನಿಲಗುಳಿ, ಪದ್ಮನಾಭ್, ಭಾರತಿ (ರೇಣುಕಾ,) ರಿಜ್ವಾನಾ ಬೇಗಂ(ಕಾವೇರಿ), ಕನ್ಯಾಕುಮಾರಿ, ಶಿವು, ಚನ್ನಮ್ಮ(ಸುಮಾ) ಪರಶುರಾಮ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.