ADVERTISEMENT

ಚಿಕ್ಕಮಗಳೂರು: ಗಾಂಧೀಜಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ಬದುಕೇ ಜಗತ್ತಿಗೆ ಸಂದೇಶ

ಜಯಂತ್ಯುತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 19:45 IST
Last Updated 2 ಅಕ್ಟೋಬರ್ 2019, 19:45 IST
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಒಳಾಂಗಣ ಆವರಣದಲ್ಲಿ ಏರ್ಪಿಡಿಸಿದ್ದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್‌ ಶಾಸ್ತ್ರಿ ಜಯಂತ್ಯುತ್ಸವದಲ್ಲಿ ಸಚಿವ ರವಿ ಮಾತನಾಡಿದರು.
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಒಳಾಂಗಣ ಆವರಣದಲ್ಲಿ ಏರ್ಪಿಡಿಸಿದ್ದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್‌ ಶಾಸ್ತ್ರಿ ಜಯಂತ್ಯುತ್ಸವದಲ್ಲಿ ಸಚಿವ ರವಿ ಮಾತನಾಡಿದರು.   

ಚಿಕ್ಕಮಗಳೂರು: ‘ಬದುಕಿನ ರೀತಿಯಿಂದಲೇ ಜಗತ್ತಿಗೆ ಸಂದೇಶವನ್ನು ಮಹಾತ್ಮ ಗಾಂಧಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ನೀಡಿದ್ದಾರೆ. ಅವರ ಕೆಲ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ದೇಶದ ಆತ್ಮಶಕ್ತಿಯ ಜಾಗೃತಿಯಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ– ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿ ಒಳಾಂಗಣ ಆವರಣದಲ್ಲಿ ಏರ್ಪಡಿಸಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ 115ನೇ ಹಾಗೂ ಗಾಂಧೀಜಿ 150ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ನಂತರ ನಾವು ಗಾಂಧೀಜಿ ಅವರ ವಿಚಾರದ ಬಗ್ಗೆ ಕೊಟ್ಟ ಪ್ರಾಮುಖ್ಯತೆಗಿಂತ ಗಾಂಧಿ ನೋಟಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟೆವೇನೊ ಅನಿಸುತ್ತಿದೆ. ಭಾರತದ ಆತ್ಮವಿಶ್ವಾಸ ಬಡಿದೆಬ್ಬಿಸಲು, ಆತ್ಮಜಾಗೃತಿ ಮೂಡಿಸಲು ಇರುವ ಏಕೈಕ ಮಾರ್ಗ ಅವರ ವಿಚಾರಧಾರೆಗಳನ್ನು ರೂಢಿಸಿಕೊಳ್ಳುವುದು. ಆ ಮಾರ್ಗದ ಮೂಲಕ ದೇಶದ ಜನರಲ್ಲಿ ಸ್ವಚ್ಛತೆ ಅರಿವು ಮೂಡಿಸಿ, ಸಾಮರಸ್ಯದ ಸಂದೇಶ ಸಾರೋಣ ಎಂದು ಆಶಿಸಿದರು.

‘ಗಾಂಧೀಜಿ ನೇತೃತ್ವ ವಹಿಸುವುದಕ್ಕೆ ಮುಂಚೆ ಸಂಘಟನೆಯನ್ನು ಹೋರಾಟ ವೇದಿಕೆಯಾಗಿ ಗೋಖಲೆ, ಲಾಲ್–ಬಾಲ್‌–ಪಾಲ್‌ ರೂಪಿಸಿದರು. ಅದನ್ನು ಜನಸಾಮಾನ್ಯರ ಆಂದೋಲನವಾಗಿ ರೂಪಿಸಿದ ಕೀರ್ತಿ ಗಾಂಧೀಜಿಗೆ ಸಲ್ಲುತ್ತದೆ. ಇಂಥವರೂ ಒಬ್ಬರಿದ್ದರಾ ಎಂದು ಮುಂದಿನ ಪೀಳಿಗೆಗೆ ಅನಿಸಬಹುದು’ ಎಂದು ಹೇಳಿದರು.

ADVERTISEMENT

ಗಾಂಧೀಜಿ ಅವರು ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಚಲೇ ಜಾವ್‌ ಚಳಿವಳಿ ರೂಪಿಸಿದರು. ಸಾಮಾನ್ಯ ಸಂಗತಿಗಳನ್ನೇ ಬ್ರಹ್ಮಾಸ್ತ್ರವಾಗಿ ಬಳಸಿದರು. ಉಪ್ಪನ್ನೇ ಹೋರಾಟದ ಅಸ್ತ್ರವಾಗಿಸಿದ್ದರು. ಸತ್ಯ, ಅಹಿಂಸೆ ಮತ್ತು ಸರಳತೆಯೇ ಅವರ ಸಾಮರ್ಥ್ಯವಾಗಿತ್ತು ಎಂದರು.

ಪರಿಸರವಾದಿ ಸ.ಗಿರಿಜಾಶಂಕರ್‌ ಮಾತನಾಡಿ, ಗಾಂಧೀಜಿ ಅವರು ಅಹಿಂಸೆ ಮತ್ತು ಸತ್ಯಾಗ್ರಹ ಅಸ್ತ್ರಗಳ ಮೂಲಕ ಬ್ರಿಟಿಷರನ್ನು ಓಡಿಸಿದರು. ಬದುಕನ್ನು ಸತ್ಯದ ಪ್ರಯೋಗಶಾಲೆಯಾಗಿ ಮಾಡಿಕೊಂಡಿದ್ದರು ಎಂದರು.

‘ಗಾಂಧೀಜಿ ಅವರು ಎಂದಿಗೂ ಮಕ್ಕಳಿಗಾಗಿ, ಕುಟುಂಬಕ್ಕಾಗಿ ರಾಜಿಯಾಗಲಿಲ್ಲ. ಅವರ ತತ್ವಗಳು, ಆದರ್ಶಗಳು ಇಡೀ ವಿಶ್ವ ಪ್ರಸ್ತುತ. ಅವುಗಳನ್ನು ಹೃದಯದಲ್ಲಿ ಬಿತ್ತುವ ಕೆಲಸ ಆಗಬೇಕಿದೆ’ ಎಂದರು.

‘ಪಾಪು ಬಾಪು’ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ವಿಧಾನ ಪರಿಷತ್ತಿನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಸಾಮಾಜಿಕನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಗಯ್ಯ, ಸದಸ್ಯ ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಅಶ್ವತಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ, ಡಾ.ಡಿ.ಎಲ್‌.ವಿಜಯಕುಮಾರ್‌ ಇದ್ದರು. ಮೂಗ್ತಿಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ‘ಗಾಂಧಿ ನಡಿಗೆ ಸ್ವಚ್ಛತೆ ಕಡೆಗೆ’ ಘೋಷವಾಕ್ಯದಡಿ ಜಾಥಾ ನಡೆಯಿತು.

‘ಮಹನೀಯರಿಗೆ ಅವಹೇಳನ ಮಾಡುವವರು ದೇಶದೋಹಿಗಳು’

ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ,‘ಗಾಂಧೀಜಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರಂಥ ಮಹನೀಯರು ಕರ್ಮದಲ್ಲಿ ನಂಬಿಕೆ ಇಟ್ಟಿದ್ದರು. ಫಲವನ್ನು ನಿರೀಕ್ಷಿಸಿದವರಲ್ಲ’ ಎಂದು ಹೇಳಿದರು.

‘ಕರ್ಮದ ಫಲವಾಗಿ ಮಹಾತ್ಮರು ಎನಿಸಿಕೊಂಡಿದ್ದಾರೆ. ಮಹಾತ್ಮರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರು ದೇಶದ್ರೋಹಿಗಳು. ಅಂಥ ಮಾತುಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಅವಹೇಳನಕಾರಿಯಾಗಿ ಮಾತನಾಡುವವರಿಗೆ ತಿಳಿವಳಿಕೆ ಹೇಳಬೇಕು’ ಎಂದು ಸಲಹೆ ನೀಡಿದರು.

‘ಮಹನೀಯರ ಆದರ್ಶ, ತತ್ವಗಳಿಗೆ ಒತ್ತು ನೀಡಬೇಕು. ಅವುಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.