ನರಸಿಂಹರಾಜಪುರ: ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿಗೆ 3ನೇ ಬಾರಿ ‘ಗಾಂಧಿ ಗ್ರಾಮ’ ಪುರಸ್ಕಾರ ಲಭಿಸಿದೆ. ಜಿಲ್ಲೆಯಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ 9 ಗ್ರಾಮ ಪಂಚಾಯಿತಿಗಳಲ್ಲಿ ನಾಗಲಾಪುರ ಕೂಡ ಒಂದು.
ಕಂದಾಯ ವಸೂಲಾತಿ, ನರೇಗಾ ಯೋಜನೆ, 15ನೇ ಹಣಕಾಸು ಯೋಜನೆ, ಘನತ್ಯಾಜ್ಯ ವಿಲೇವಾರಿಯ ಸಮರ್ಪಕ ನಿರ್ವಹಣೆ, ಸಕಾಲ ಸೇವೆಗಳು, ಗ್ರಾಮ ಸಭೆ, ಪಂಚಾಯಿತಿ ಸಾಮಾನ್ಯ ಸಭೆ ಇತರೆ ಉಪಸಮಿತಿಗಳ ಸಭೆಗಳನ್ನು ಕಾಲಾವಧಿಯಲ್ಲಿ ಆಯೋಜಿಸಿ, ಅನುದಾನ ಸದ್ಬಳಕೆ ಮತ್ತು ಅಭಿವೃದ್ಧಿಗೆ ಕೈಗೊಂಡ ಕ್ರಮಗಳಿಂದ ಪಂಚಾಯಿತಿಗೆ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಮಟ್ಟದಲ್ಲೂ ಉತ್ತಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ನಾಗಲಾಪುರ ಗ್ರಾಮ ಪಂಚಾಯಿತಿ ಪಾತ್ರವಾಗಿದೆ.
‘ಸರ್ಕಾರದ ಎಲ್ಲ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಿದ್ದರಿಂದ ಗಾಂಧಿ ಗ್ರಾಮ ಪುರಸ್ಕಾರ ಪಡೆಯಲು ಸಾಧ್ಯವಾಗಿದೆ.ಇದಕ್ಕೆ ಆಡಳಿತ ಮಂಡಳಿ, ಸಿಬ್ಬಂದಿ ಪರಿಶ್ರಮ ಹಾಗೂ ಗ್ರಾಮಸ್ಥರ ಸಹಕಾರ ಕಾರಣ. ಇನ್ನೂ ಉತ್ತಮವಾಗಿ ಕೆಲಸ ಮಾಡಲು ಪುರಸ್ಕಾರ ಸ್ಫೂರ್ತಿ ತುಂಬಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಮಂಜುಳಾ ಹೇಳಿದರು.
ನರೇಗಾ, ಕುಡಿಯುವ ನೀರು, ನೈರ್ಮಲ್ಯ ಸೇರಿದಂತೆ ಎಲ್ಲಾ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಿ ಯೋಜನೆಯನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಎಲ್ಲಾ ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಇದು ಜವಾಬ್ಧಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.