ಶೃಂಗೇರಿ: ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸವನ್ನು ಗ್ರಾಮ ಪಂಚಾಯಿತಿಯವರು ಅನಧಿಕೃತವಾಗಿ ಕುಂತೂರು ಗ್ರಾಮದ ಜನವಸತಿ ಇರುವ ರಂಜದ ತೋಟದ ಪ್ರದೇಶದಲ್ಲಿ ಮಾಡುತ್ತಿದ್ದು, ಸ್ಥಳೀಯರು ರೋಗ ಹರಡಬಹುದೆಂಬ ಆತಂಕದಲ್ಲಿದ್ದಾರೆ.
ಗ್ರಾಮದಲ್ಲಿ 14 ಜಾನುವಾರುಗಳು ಮೃತಪಟ್ಟಿವೆ. ಇದು ಕಸದ ರಾಶಿಯಲ್ಲಿನ ವಿಷ ಪದಾರ್ಥ ಸೇವಿಸಿ ಆಗಿರುವ ಸಾಧ್ಯತೆ ಇದೆ. ಪ್ರತಿದಿನ 8 ಗೂಡ್ಸ್ ಕಸ ಸಂಗ್ರಹಿಸಿ, ರಂಜದ ತೋಟದಲ್ಲಿ ವಿಲೇವಾರಿ ಮಾಡಿ ಅಲ್ಲಿ ಒಣ ಕಸ, ಹಸಿಕಸವನ್ನು ಬೇರ್ಪಡಿಸದೆ ಹಾಕಲಾಗುತ್ತಿದೆ. 1,435 ಮನೆಗಳಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6,215 ಜನಸಂಖ್ಯೆ ಇದೆ. ಕಸ ವಿಲೇವಾರಿ ಮಾಡಲು ಕಾರ್ಮಿಕರು ಇಲ್ಲದೆ, ಗ್ರಾಮ ಗಬ್ಬೆದ್ದು ಹೋಗಿದೆ. ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ, ತೋಟ, ಜಮೀನುಗಳಲ್ಲಿ ಸಂಗ್ರಹಗೊಳ್ಳುತ್ತದೆ. ನೀರಿನ ಮೂಲ ಕಲುಷಿತಗೊಳ್ಳುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.
ಗ್ರಾಮ ಪಂಚಾಯಿತಿ ಸದಸ್ಯರಾದ ಕವಿತಾ ಕಣದಮನೆ, ಶ್ಯಾಮಣ್ಣ ಹಿಂಡ್ರವಳ್ಳಿ, ಅಶೋಕ ಮತ್ತು ಸ್ಥಳಿಯ ನಿವಾಸಿಗಳಾದ ಅರುಣಾ ಭಟ್, ಉದಯ್ ಭಟ್ ರಂಜದ ತೋಟ, ರತ್ನಾಕರ ಕುಂತೂರು, ಆದೇಶ ಕೂಡ್ಲುಮಕ್ಕಿ, ಅವಿನಾಶ್ ಹೊಸಕೊಪ್ಪ, ಶಶಿಕ್, ಲಕ್ಷ್ಮಣ ಅವರು ಕಸ ತರುವ ವಾಹನವನ್ನು ತಡೆದು ಪ್ರತಿಭಟಿಸಿದ್ದಾರೆ. ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರು ತುರ್ತು ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವವರೆಗೆ ಕಸವನ್ನು ಈ ಸ್ಥಳಕ್ಕೆ ತರುವುದಿಲ್ಲ ಎಂಬ ಒಪ್ಪಿಗೆಯ ಮೇಲೆ ಕಸದ ಸಮೇತ ವಾಹನವನ್ನು ವಾಪಸ್ ಕಳಿಸಿದ್ದಾರೆ.
ಮೆಣಸೆ ಗ್ರಾಮ ಪಂಚಾಯಿತಿಯವರು ಅನಧಿಕೃತವಾಗಿ ಕುಂತೂರು ಗ್ರಾಮದ ರಂಜದ ತೋಟದ ಸಮೀಪ ಜನ ವಸತಿ ಇರುವ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡಿದ್ದರಿಂದ ಜನರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಚಾಯಿತಿ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಪಂಚಾಯಿತಿ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಮಲೆನಾಡು ಮತ್ತು ಕರಾವಳಿ ಜನಪರ ಹೋರಾಟ ಸಮಿತಿಯ ಅನಿಲ್ ಹೊಸಕೊಪ್ಪ ಎಚ್ಚರಿಸಿದ್ದಾರೆ.
‘ಕಸ ವಿಲೇವಾರಿ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಚ್.ಸುದೀಪ್ ಹೇಳಿದರು.
ಕಸ ವಿಲೇವಾರಿ ಸಮಮರ್ಪಕ ಆರೋಪ ಕಾರ್ಮಿಕರ ಕೊರತೆ: ಪರಿಸರ ದುರ್ವಾಸನೆ ಗ್ರಾ.ಪಂ. ವಿರುದ್ಧ ಹೋರಾಟದ ಎಚ್ಚರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.