ವರದಿ: ರಘು ಕೆ.ಜಿ
ಚಿಕ್ಕಮಗಳೂರು: ಭಾದ್ರಪದ ಶುಕ್ಲ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ಗೌರಿ–ಗಣೇಶ ಚತುರ್ಥಿ ಆಚರಣೆಗೆ ಕೆಲ ದಿನಗಳಷ್ಟೇ ಬಾಕಿ ಇದೆ. ವರಪುತ್ರ ವಿನಾಯಕ ಮೂರ್ತಿಯನ್ನು ದೇವಾಲಯ, ಮನೆಗಳಲ್ಲಿ ಅದ್ಧೂರಿಯಾಗಿ ಪ್ರತಿಷ್ಠಾಪಿಸಲು ಭಕ್ತರು ಕಾತುರರಾಗಿದ್ದರೆ. ಮತ್ತೊಂದೆಡೆ ಅಂತಿಮ ರೂಪ ಪಡೆದ ಬಣ್ಣ ಬಣ್ಣದ ಗೌರಿ–ಗಣೇಶ ವಿಗ್ರಹ ಮೂರ್ತಿಗಳು ಮಾರುಕಟ್ಟೆಗೆ ಬರಲು ಸಜ್ಜಾಗುತ್ತಿವೆ.
ನಗರದ ಕುಂಬಾರ ಬೀದಿಯ ಕೆಲವು ಮನೆಗಳಲ್ಲಿ ಶಿಲ್ಪಿಗಳ ಕರಕುಶಲದಿಂದ ವಿವಿಧ ರೂಪದ ಗೌರಿ–ಗಣೇಶ ಮೂರ್ತಿಗಳು ತಯಾರಾಗಿವೆ. ಕನಿಷ್ಠ ಅರ್ಧ ಅಡಿಯಿಂದ ಗರಿಷ್ಠ ಐದೂವರೆ ಅಡಿಯವರೆಗೂ ಇರುವ ಆಕರ್ಷಕ ಗಣಪನ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುವಂತಿವೆ.
‘ಪೂರ್ವಜರು ಗಣಪತಿ ಮೂರ್ತಿ ತಯಾರಿ ಕೆಲಸ ಮಾಡುತ್ತಿದ್ದರು. ಸುಮಾರು 60 ವರ್ಷದಿಂದ ಅದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಪ್ರತಿ ವರ್ಷ ನಗರದ ಬೋಳರಾಮೇಶ್ವರ ದೇವಾಲಯ ಆವರಣದಲ್ಲಿ ಪ್ರತಿಷ್ಠಾಪಿಸುವ ದೊಡ್ಡ ಗಣಪತಿ ಮೂರ್ತಿ ತಯಾರಿಸುವುದು ನಾನೇ. ಈ ಬಾರಿ 40ನೇ ವರ್ಷ ಎಂಬುದು ಖುಷಿ ತಂದಿದೆ’ ಎಂದು ವಿಗ್ರಹ ಶಿಲ್ಪಿ ಸಿ.ಎಸ್.ಏಕಾಂತರಾಮು ಹೇಳಿದರು.
‘ಮೂಗ್ತಿಹಳ್ಳಿ ಸಮೀಪ ಮತ್ತಾವರ ಕೆರೆಯಿಂದ ಮಡಿಕೆ ಮಣ್ಣು ತಂದು ಕಲಸಿ ಹದಗೊಳಿಸುತ್ತೇವೆ. ಬಳಿಕ ನಿರ್ಮಾಣ ಕೆಲಸ ಆರಂಭವಾಗಲಿದೆ. 2 ರಿಂದ 3 ದಿನಗಳಲ್ಲಿ ಒಂದು ದೊಡ್ಡ ಗಣೇಶ ಮೂರ್ತಿ ನಿರ್ಮಿಸುತ್ತೇವೆ. ಈ ಬಾರಿ ಹಬ್ಬಕ್ಕೆ ಪ್ರಸನ್ನ ಗಣಪತಿ, ಸುಬ್ರಹ್ಮಣ್ಯ ಗಣಪತಿ ಸೇರಿ ಇನ್ನೂರಕ್ಕೂ ಹೆಚ್ಚು ಗೌರಿ–ಗಣೇಶ ಮೂರ್ತಿಗಳನ್ನು ತಯಾರಿಸಿದ್ದೇವೆ. ಗ್ರಾಹಕರಿಂದಲೂ ಹೆಚ್ಚು ಬೇಡಿಕೆ ಇದೆ’ ಎಂದರು.
‘ಕುಟುಂಬದವರ ಜತೆಗೂಡಿ ಸುಮಾರು 35 ವರ್ಷದಿಂದ ಯಾವುದೇ ರಾಸಯನಿಕ ಬಣ್ಣ ಬಳಸದೆ ಮಣ್ಣಿನ ಗಣಪನ ಮೂರ್ತಿ ನಿರ್ಮಾಣ ಮಾಡಿಕೊಂಡು ಬಂದಿದ್ದೇವೆ. ಹಿಂದೆ ಅಜ್ಜಂದಿರು ಮಡಕೆ ವ್ಯಾಪಾರದೊಂದಿಗೆ ಗಣೇಶ ಮೂರ್ತಿ ನಿರ್ಮಿಸಿ ಮಾರಾಟ ಮಾಡುತ್ತಿದ್ದರು. ಅದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಕಡೂರು, ಹೊಸದುರ್ಗ, ಅರಸೀಕೆರೆ ಸೇರಿದಂತೆ ವಿವಿಧೆಡೆ ಗ್ರಾಹಕರು ಇಲ್ಲಿಗೆ ಬರುತ್ತಾರೆ. ಮುಂಗಡ ಬೇಡಿಕೆಗೆ ಅನುಗುಣವಾಗಿ ಗಣಪತಿ ಮೂರ್ತಿ ತಯಾರಿಸಲಾಗುವುದು’ ಎಂದು ಗಣೇಶ ಮೂರ್ತಿ ತಯಾರಕ ಸಿದ್ದೇಶ್ ತಿಳಿಸಿದರು.
ಗಣೇಶ ಮೂರ್ತಿಯನ್ನು ಮನೆ, ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿ ಅದ್ಧೂರಿ ಉತ್ಸವ, ಸಡಗರ, ಸಂಭ್ರಮದಿಂದ ಆಚರಿಸಲು ತಯಾರಿ ನಡೆಯುತ್ತಿದ್ದರೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಪರಿಸರ ಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಜತೆಗೆ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲವು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಮಳೆ ಕಡಿಮೆಯಾಗಿ ಬರಗಾಲದ ಛಾಯೆ ಆವರಿಸಿದೆ. ಕೆರೆಗಳಲ್ಲಿ ನೀರು ಇಲ್ಲವಾಗಿದೆ. ನಗರದಲ್ಲಿ ನಗರಸಭೆ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗೆ ಕಲ್ಯಾಣಿ ನಿರ್ಮಿಸಿರುವುದು ಒಳ್ಳೇಯದು. ಪ್ರತಿಯೊಬ್ಬರು ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು.– ಚೇತನ್ ಏಕಾಂತ ರಾಮು, ವಿಗ್ರಹ ಶಿಲ್ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.