ADVERTISEMENT

ಶುಂಠಿ, ಭತ್ತದ ಗದ್ದೆ ಜಲಾವೃತ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:10 IST
Last Updated 26 ಜುಲೈ 2024, 14:10 IST
ಮೂಡಿಗೆರೆ ತಾಲ್ಲೂಕಿನ ಹಿರೇಶಿಗರ ಗ್ರಾಮದ ಪ್ರದೀಪ್ ಎಂಬುವರ ಮನೆ ಮಳೆಯಿಂದ ಹಾನಿಯಾಗಿದ್ದು ಅಧಿಕಾರಿಗಳು  ಪರಿಶೀಲನೆ ನಡೆಸಿದರು
ಮೂಡಿಗೆರೆ ತಾಲ್ಲೂಕಿನ ಹಿರೇಶಿಗರ ಗ್ರಾಮದ ಪ್ರದೀಪ್ ಎಂಬುವರ ಮನೆ ಮಳೆಯಿಂದ ಹಾನಿಯಾಗಿದ್ದು ಅಧಿಕಾರಿಗಳು  ಪರಿಶೀಲನೆ ನಡೆಸಿದರು   

ಮೂಡಿಗೆರೆ: ತಾಲ್ಲೂಕಿನಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಶುಕ್ರವಾರ ಬಿಸಿಲು ಕಾಣಿಸಿಕೊಂಡಿತು. ಆದರೆ, ಅರ್ಧ ಗಂಟೆಯಲ್ಲಿಯೇ ಬಿಸಲು ಕಣ್ಮರೆಯಾಗಿ ಮಳೆ ಬೋರ್ಗೆರೆಯಿತು. ಸಂಜೆಯ ಬಳಿಕ ಮಳೆಯ ಬಿರುಸು ಇಳಿಮುಖವಾಗಿತ್ತು.

ಮಳೆಯಿಂದ ಬಿಳ್ಳೂರು ಗ್ರಾಮದ ಸಿಗಡಿ ಮೂಲೆಯಲ್ಲಿ ಭತ್ತ, ಶುಂಠಿ ಗದ್ದೆ  ಜಲಾವೃತಗೊಂಡಿದೆ. ಮೂರು ದಿನಗಳಿಂದ ಗದ್ದೆಗಳಲ್ಲಿ ನೀರು ನಿಂತಿರುವುದರಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಹಂತೂರು ಗ್ರಾಮ ಪಂಚಾಯಿತಿಯ ಅಕ್ಕಿರುದ್ದಿ ಗ್ರಾಮದ ಬಳಿ ಜಪಾವತಿ ನದಿಯು ಉಕ್ಕಿ ಹರಿದಿದ್ದರಿಂದ ರಸ್ತೆ ಸಂಪರ್ಕ ಕಡಿತವಾಗಿತ್ತು,ಹೇಮಾವತಿ ನದಿಯು ಉಗ್ಗೆಹಳ್ಳಿ ಕಾಲೋನಿ ಬಳಿಯ ಗದ್ದೆ ಬಯಲಿನವರೆಗೂ ಬಂದು  ಆತಂಕ ಸೃಷ್ಟಿಯಾಗಿತ್ತು.

ಮಳೆಯಿಂದ ತ್ರಿಪುರ ಗ್ರಾಮದ ಪಟ್ಟದೂರು ಚಂದ್ರಮ್ಮ, ಊರುಬಗೆ ಗ್ರಾಮದ ಹೊಸ್ಕೆರೆ ವಿಜಯಕುಮಾರ್, ಬಿದರಹಳ್ಳಿಯ ಲಿಂಗಪ್ಪ, ಹಿರೇಶಿಗರದ ಪ್ರದೀಪ್ ಎಂಬುವವರ ಮನೆಗಳು  ಜಖಂಗೊಂಡಿವೆ. ಮನೆ ಹಾನಿಯಾದ ಕುಟುಂಬಗಳ ಸ್ಥಳಾಂತರಕ್ಕಾಗಿ, ಮೂಡಿಗೆರೆ ಪಟ್ಟಣ, ಗೋಣಿಬೀಡು, ಬಣಕಲ್, ಬಾಳೂರು ಗ್ರಾಮಗಳಲ್ಲಿರುವ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರಯಲಾಗಿದ್ದು, ಮನೆ ಕಳೆದುಕೊಂಡ ನಿರಾಶ್ರಿತರನ್ನು ಕಾಳಜಿ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗುತ್ತಿದೆ.

ADVERTISEMENT

ತಾಲ್ಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ ಗೋಣಿಬೀಡಿನಲ್ಲಿ 20 ಸೆ.ಮೀ ಮಳೆಯಾಗಿದ್ದು, ಪ್ರಸಕ್ತ ವರ್ಷದಲ್ಲಿ 24 ಗಂಟೆಗಳಲ್ಲಿ ದಾಖಲಾಗಿರುವ ಗರಿಷ್ಠ ಮಳೆ ಇದಾಗಿದೆ. ಕೊಟ್ಟಿಗೆಹಾರ 14.3, ಮೂಡಿಗೆರೆ 6.5, ಜಾವಳಿ 13.1, ಹೊಸ್ಕೆರೆ 19, ಬಿಳ್ಳೂರು 18.2 ಸೆ.ಮೀ ನಷ್ಟು ಮಳೆಯಾಗಿದೆ. ನಿರಂತರವಾಗಿ ಮಳೆಯಾತ್ತಿರುವುದರಿಂದ ಕಾಫಿ, ಕಾಳುಮೆಣಸು, ಭತ್ತ, ಶುಂಠಿ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.

ಮೂಡಿಗೆರೆ ತಾಲ್ಲೂಕಿನ ಬಕ್ಕಿ ಗ್ರಾಮದ ಬಳಿ ವಿದ್ಯುತ್ ಕಂಬ ತುಂಡಾಗಿ ಪೂರೈಕೆ ಸ್ಥಗಿತವಾಗಿದ್ದು ಶುಕ್ರವಾರ ಮೆಸ್ಕಾಂ ಸಿಬ್ಬಂದಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯಕರ್ತರು ಜೊತೆಗೂಡಿ ಕಂಬ ಸಾಗಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.