ADVERTISEMENT

ಗೊಲ್ಲರಹಟ್ಟಿ: ದೇವಸ್ಥಾನದ ಬೀಗ ಒಡೆದು ದಲಿತರಿಗೆ ಪ್ರವೇಶ

ಗೊಲ್ಲರಹಟ್ಟಿ ಪ್ರವೇಶ ಮಾಡಿದ್ದಕ್ಕೆ ಹಲ್ಲೆಗೆ ಒಳಗಾಗಿದ್ದ ಮಾರುತಿಯಿಂದ ಗರ್ಭಗುಡಿಯಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 21:23 IST
Last Updated 9 ಜನವರಿ 2024, 21:23 IST
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಗೇರುಮರಡಿ ಗೊಲ್ಲರಹಟ್ಟಿಯಲ್ಲಿನ ರಂಗನಾಥಸ್ವಾಮಿ ದೇಗುಲ ಪ್ರವೇಶ ಬಳಿಕ ಹೊರ ಬಂದು ದಲಿತ ಮುಖಂಡರು ಮಾತನಾಡಿದರು. ಉಪವಿಭಾಗಾಧಿಕಾರಿ ಕೆ.ಜಿ.ಕಾಂತರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃ‌ಷ್ಣಮೂರ್ತಿ ಇದ್ದರು
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಗೇರುಮರಡಿ ಗೊಲ್ಲರಹಟ್ಟಿಯಲ್ಲಿನ ರಂಗನಾಥಸ್ವಾಮಿ ದೇಗುಲ ಪ್ರವೇಶ ಬಳಿಕ ಹೊರ ಬಂದು ದಲಿತ ಮುಖಂಡರು ಮಾತನಾಡಿದರು. ಉಪವಿಭಾಗಾಧಿಕಾರಿ ಕೆ.ಜಿ.ಕಾಂತರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃ‌ಷ್ಣಮೂರ್ತಿ ಇದ್ದರು   

ಚಿಕ್ಕಮಗಳೂರು: ಗೊಲ್ಲರಹಟ್ಟಿಗೆ ದಲಿತ ಯುವಕ ಪ್ರವೇಶ ಮಾಡಿದ ಕಾರಣಕ್ಕೆ ಮೈಲಿಗೆಯಾಗಿದೆ ಎಂದು ಪೂಜೆ ನಿಲ್ಲಿಸಿ ಹಾಕಿದ್ದ ಬೀಗವನ್ನು ತಾಲ್ಲೂಕು ಆಡಳಿತದ ಅಧಿಕಾರಿಗಳೇ ಒಡೆಸಿ ದಲಿತರಿಗೆ ಪ್ರವೇಶ ಕೊಡಿಸಿದರು.

ರಾಜ್ಯದ ಹಲವೆಡೆಯಿಂದ ಮಂಗಳವಾರ ತರೀಕೆರೆಗೆ ಬಂದಿದ್ದ ದಲಿತ ಸಂಘಟನೆಗಳ ಮುಖಂಡರು, ಭಾರತೀಯ ಪರಿವರ್ತನಾ ಸಂಘದ ಅಧ್ಯಕ್ಷ ಹರಿರಾಮ್, ಮುಖಂಡರಾದ ಬಿ.ಆರ್.ಭಾಸ್ಕರ ಪ್ರಸಾದ್ ಸುದ್ದಿಗೋಷ್ಠಿ ನಡೆಸಿದರು. ಬಳಿಕ ದಲಿತ ಸಂಘಟನೆಗಳ ಸ್ವಾಭಿಮಾನ ಒಕ್ಕೂಟದ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ದಲಿತ ಯುವಕ ಮಾರುತಿ ಮೇಲೆ ಹಲ್ಲೆ ನಡೆಸಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು, ಗೊಲ್ಲರಹಟ್ಟಿಯಲ್ಲಿರುವ ಕಂಬದ ರಂಗನಾಥಸ್ವಾಮಿ ದೇಗುಲಕ್ಕೆ ದಲಿತರಿಗೆ ಪ್ರವೇಶ ಕೊಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಉಪವಿಭಾಗಾಧಿಕಾರಿ ಕೆ.ಜಿ. ಕಾಂತರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ, ಡಿವೈಎಸ್‌ಪಿ ಹಾಲಮೂರ್ತಿ ರಾವ್, ತಹಶೀಲ್ದಾರ್ ವಿ.ಎಸ್. ರಾಜೀವ್ ಅವರು ಪ್ರತಿಭಟನೆನಿರತರ ಮನವೊಲಿಸಲು ಪ್ರಯತ್ನಿಸಿದರು. ದೇಗುಲಕ್ಕೆ ಹಾಕಿರುವ ಬೀಗ ತೆಗೆಸಿ ಪ್ರವೇಶ ಕೊಡಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಪಟ್ಟು ಹಿಡಿದರು.

ಪೊಲೀಸ್ ಬಂದೋಬಸ್ತ್ ಕಲ್ಪಿಸಿ ಹೋರಾಟಗಾರರೊಂದಿಗೆ ಗೊಲ್ಲರಹಟ್ಟಿಗೆ ತೆರಳಿದ ಅಧಿಕಾರಿಗಳು, ದೇಗುಲದ ಬೀಗದ ಕೀ ನೀಡುವಂತೆ ಗೊಲ್ಲರಹಟ್ಟಿ ನಿವಾಸಿಗಳನ್ನು ಕೇಳಿದರು. ಯಾರೂ ಕೊಡಲು ಮುಂದೆ ಬಾರದಿದ್ದಾಗ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ತಾಲ್ಲೂಕು ಆಡಳಿತದ ಸಿಬ್ಬಂದಿ ಗೇಟ್ ಮತ್ತು ಬಾಗಿಲ ಬೀಗಗಳನ್ನು ಒಡೆದರು.

ಹಲ್ಲೆಗೆ ಒಳಗಾಗಿದ್ದ ದಲಿತ ಯುವಕ ಮಾರುತಿ ಮೂಲಕವೇ ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಗಳಿಗೆ ಪೂಜೆ ಮಾಡಿಸಲಾಯಿತು. ಬಳಿಕ ಹೊರ ಬಂದು ದೇವಸ್ಥಾನದ ಎದುರು ಸಂವಿಧಾನದ ಪೀಠಿಕೆ ಬೋಧಿಸಲಾಯಿತು.

ಗೊಲ್ಲರಹಟ್ಟಿಯ ಜನರಿಗೆ ಸಂವಿಧಾನದ ಅರಿವಿಲ್ಲದಿದ್ದರೆ ಜಾಗೃತಿ ಮೂಡಿಸುವ ಕೆಲಸವನ್ನು ಸಮಾಜ ಕಲ್ಯಾಣ ಇಲಾಖೆ ಮಾಡಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಗೊಲ್ಲರಹಟ್ಟಿಗೆ ದಲಿತ ಯುವಕ ಪ್ರವೇಶ ಮಾಡಿದ ಬಳಿಕ ದೇಗುಲಕ್ಕೆ ಬೀಗ ಹಾಕಿರುವ ಬಗ್ಗೆ ಜ.5ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.