ಚಿಕ್ಕಮಗಳೂರು: ಮಲೆನಾಡಿನಲ್ಲಿ ಧಾರಾಕಾರ ಮಳೆಯಾಗಿದ್ದರೆ, ಬಯಲು ಸೀಮೆಯಲ್ಲೂ ಮಳೆ ಈ ಬಾರಿ ತಂಪೆರೆದಿದೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಇಡೀ ಜಿಲ್ಲೆಗೆ ಜೀವಕಳೆ ಬಂದಿದೆ.
ಮುಂಗಾರು ಪೂರ್ವ ಮಳೆಯಲ್ಲೇ ಹಲವು ಕೆರೆಗಳು ಭರ್ತಿಯಾಗಿದ್ದವು. ಚಿಕ್ಕಮಗಳೂರು ತಾಲ್ಲೂಕಿನ ತವರೆಕಟ್ಟೆ ಕೆರೆ, ದೊಡ್ಡಬೀಕನಕಟ್ಟೆ, ಕಳ್ಳಿಕಟ್ಟೆ, ಮಠದ ಕಟ್ಟೆ, ಹಾಲೆಕಟ್ಟೆ, ದೊಡ್ಡಕೆರೆ, ಹುಲಿಚಿಕ್ಕನಹಳ್ಳಿ ಗುಂಡಿಶಾಸ್ತ್ರ ಕೆರೆ, ಮಾವಿನಕಟ್ಟೆ, ಹರಿಹರದಹಳ್ಳಿ ಭೂವನಕಟ್ಟೆ, ಭೈರದೇವಕಟ್ಟೆ, ಜಡಗನಹಳ್ಳಿಯ ಕುನ್ನಾರಕಟ್ಟೆ, ರಾಮನಹಳ್ಳಿ ಯಮನಕಟ್ಟೆ, ಹೊಸಕೆರೆ ಸಂಪೂರ್ಣ ಭರ್ತಿಯಾಗಿದ್ದವು.
ಅಂಬಳೆದೊಡ್ಡಕೆರೆ, ಹಿರೇಮಗಳೂರು ದೊಡ್ಡಕೆರೆ, ಹುಣಸವಳ್ಳಿ ಕೆರೆ, ಲಕ್ಷ್ಮೀಪುರ ಕೋಡಿಕೆರೆ, ಕಡೂರು ತಾಲ್ಲೂಕಿನ ಕಲ್ಲಳ್ಳಿ ಸಮುದ್ರಕೆರೆಗಳು ಭರ್ತಿಯಾಗಿದ್ದವು.
ಜಿಲ್ಲೆಯಲ್ಲಿ ಒಟ್ಟಾರೆ 1853 ಕೆರೆಗಳಿದ್ದು, 1729 ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 124 ಕೆರೆಗಳಿವೆ. ಬಹುತೇಕ ಎಲ್ಲವೂ ಭರ್ತಿಯಾಗಿವೆ.
ನಗರದ ದಂಟರಮಕ್ಕಿ ಕೆರೆಗೂ ಈ ಬಾರಿ ನೀರು ಹರಿದು ಬಂದಿದ್ದು, ನಗರದಲ್ಲೂ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ನಗರಕ್ಕೆ ನೀರೊಗಿಸುವ ಹಿರೇಕೊಳಲೆ ಕೆರೆ ಈ ಬಾರಿ ಜುಲೈನಲ್ಲೇ ಭರ್ತಿಯಾಗಿದೆ. ಐತಿಹಾಸಿಕ ಅಯ್ಯನಕೆರೆ, ಮಧಗದ ಕೆರೆ, ತರೀಕೆರೆಯ ದೊಡ್ಡಕೆರೆ, ಜಂಬದಹಳ್ಳಿ ಜಲಾಶಯಗಳು ಭರ್ತಿಯಾಗಿರುವುದು ಸುತ್ತಮುತ್ತಲ ಹಳ್ಳಿಗಳ ಜನರಲ್ಲಿ ಸಂತಸ ಮೂಡಿಸಿದೆ.
ಕಡೂರು ತಾಲ್ಲೂಕಿನ ಹಲವು ಕೆರೆಗಳು ಇನ್ನೂ ಭರ್ತಿಯಾಗಬೇಕಿದ್ದು, ಈ ಪ್ರಮುಖ ಕೆರೆಗಳು ತುಂಬಿ ಕೋಡಿಯಲ್ಲಿ ನೀರು ಹರಿಯುತ್ತಿರುವುದರಿಂದ ತರೀಕೆರೆ ಮತ್ತು ಕಡೂರು ತಾಲ್ಲೂಕಿನ ಬೇರೆ ಕೆರೆಗಳಿಗೆ ನೀರು ಹರಿಯುತ್ತಿದೆ. ಇನ್ನೊಂದೆಡೆ ಅಜ್ಜಂಪುರ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗಿದೆ. ಆದರೆ, ಬುಕ್ಕಂಬುಧಿ ದೊಡ್ಡಕೆರೆ ಇನ್ನೂ ಭರ್ತಿಯಾಗಿಲ್ಲ. ಶೇ 60 ರಷ್ಟು ನೀರು ಬಂದಿದೆ. ಅಜ್ಜಂಪುರದ ಪರ್ವತರಾಯನ ಕೆರೆ ತುಂಬಿ ಕೋಡಿ ಬಿದ್ದಿದೆ. ಬಹುತೇಕ ಕೆರೆಗಳು ಇನ್ನು ಭರ್ತಿ ಆಗಬೇಕಿದೆ.
ಕಳೆದ ವರ್ಷ ಬರ ಪರಿಸ್ಥಿತಿ ಇದ್ದುದರಿಂದ ಬಹುತೇಕ ಎಲ್ಲಾ ಕೆರೆಗಳು ಖಾಲಿಯಾಗಿ ಅಂತರ್ಜಲ ಪಾತಾಳ ಸೇರಿತ್ತು. ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ಅಂತರ್ಜಲವೇ ಇಲ್ಲವಾಗಿತ್ತು. ಅಡಿಕೆ ಬೆಳೆ ಉಳಿಸಿಕೊಳ್ಳಲು ರೈತರು ಸಾಕಷ್ಟು ಪರದಾಡಿದ್ದರು. ಬುಕ್ಕಂಬುಧಿ ಕೆರೆ ಖಾಲಿಯಾಗಿ ಶಿವನಿ ಹೋಬಳಿ ರೈತರು ತೊಂದರೆಗೆ ಸಿಲುಕಿದ್ದರು. ಈ ವರ್ಷ ಉತ್ತಮ ಮಳೆಯಾಗಿರುವುದು ಬಯಲು ಸೀಮೆಯ ರೈತರಲ್ಲಿ ನೆಮ್ಮದಿ ತರಿಸಿದೆ.
ಪೂರಕ ಮಾಹಿತಿ: ಬಾಲು ಮಚ್ಚೇರಿ, ಕೆ.ನಾಗರಾಜ್, ಜೆ.ಒ.ಉಮೇಶ್‌ಕುಮಾರ್
ಅಂಕಿ–ಅಂಶ 1,853ಜಿಲ್ಲೆಯಲ್ಲಿರುವ ಒಟ್ಟು ಕೆರೆ 124 ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳು 1729ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.