ADVERTISEMENT

ಧರ್ಮದ ಹೆಸರಿನಲ್ಲಿ ಅಭಿವೃದ್ಧಿ ಮರೆತ ಸರ್ಕಾರ: ಅಬ್ದುಲ್ ಲತೀಫ್

ಎಸ್‌ಡಿಪಿಐ ಸಮಾವೇಶ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 13:44 IST
Last Updated 6 ಮಾರ್ಚ್ 2024, 13:44 IST
ಮೂಡಿಗೆರೆಯ ಜಾಮಿಯಾ ಶಾದಿ ಮಹಲ್‌ನಲ್ಲಿ ಗುರುವಾರ ನಡೆದ ಎಸ್‌ಡಿಪಿಐ ಕ್ಷೇತ್ರ ಸಮಿತಿ ಸಮಾವೇಶದಲ್ಲಿ ಪದಾಧಿಕಾರಿಗಳು ಕೈಕೈ ಹಿಡಿದು ಒಗ್ಗಟ್ಟಿನ ಪ್ರದರ್ಶನ ಮಾಡಿದರು
ಮೂಡಿಗೆರೆಯ ಜಾಮಿಯಾ ಶಾದಿ ಮಹಲ್‌ನಲ್ಲಿ ಗುರುವಾರ ನಡೆದ ಎಸ್‌ಡಿಪಿಐ ಕ್ಷೇತ್ರ ಸಮಿತಿ ಸಮಾವೇಶದಲ್ಲಿ ಪದಾಧಿಕಾರಿಗಳು ಕೈಕೈ ಹಿಡಿದು ಒಗ್ಗಟ್ಟಿನ ಪ್ರದರ್ಶನ ಮಾಡಿದರು   

ಮೂಡಿಗೆರೆ: ‘ರಾಜಕೀಯ ಲಾಭ ಪಡೆಯುವ ಸಲುವಾಗಿ ಧರ್ಮದ ಹೆಸರಿನಲ್ಲಿ ದೇಶದ ಅಭಿವೃದ್ಧಿಯನ್ನೇ ಸರ್ಕಾರ ಮರೆತಿದೆ’ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹೇಳಿದರು.

ಪಟ್ಟಣದ ಜಾಮಿಯಾ ಶಾದಿಮಹಲ್‌ನಲ್ಲಿ ಗುರುವಾರ ಎಸ್‌ಡಿಪಿಐ ಕ್ಷೇತ್ರ ಸಮಿತಿಯಿಂದ ಏರ್ಪಡಿಸಿದ್ದ ಎಸ್‌ಡಿಪಿಐ ಸಮಾವೇಶ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರಗಳು ಜಾತಿ, ಧರ್ಮಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಅಭಿವೃದ್ಧಿಯನ್ನು ಪ್ರಶ್ನಿಸದಂತೆ ಬೇರೆ ವಿಚಾರಗಳನ್ನು ವೈಭವೀಕರಿಸಿ, ಜನರಿಂದ ಅಭಿವೃದ್ಧಿ ವಿಚಾರಗಳನ್ನು ಮರೆಯಾಗಿಸಲಾಗುತ್ತಿದೆ. ದೇಶಕ್ಕೆ ಅಭಿವೃದ್ಧಿಯೇ ಮೂಲಮಂತ್ರವಾಗಬೇಕು’ ಎಂದರು.

ADVERTISEMENT

ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಅಂಗಡಿ ಚಂದ್ರು ಮಾತನಾಡಿ, ಇಂದು ಯುವಜನರು ಎಸ್‌ಡಿಪಿಐ ತತ್ವ ಸಿದ್ಧಾಂತಕ್ಕೆ ಆಕರ್ಷಿತರಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಹುಟ್ಟಿದ ಮನುಷ್ಯ ತಕ್ಷಣವೇ ಎದ್ದು ನಿಲ್ಲಲು ಸಾಧ್ಯವಿಲ್ಲ. ಆದರೆ, ಮುಂದೊಂದು ದಿನ ದೇಶವೇ ತಿರುಗಿ ನೋಡುವಂತೆ ಸಾಧನೆ ಮಾಡುವ ಶಕ್ತಿ ಆ ವ್ಯಕ್ತಿಯಲ್ಲಿ ಅಡಗಿರುತ್ತದೆ. ಇದು ಎಸ್‌ಡಿಪಿಐ ಪಕ್ಷಕ್ಕೆ ಅನ್ವಹಿಸುತ್ತದೆ ಎಂದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಝ್ಮತ್ ಪಾಷಾ, ಮುಬಾರಕ್, ಜಿಲ್ಲಾ ಕಾರ್ಯದರ್ಶಿ ರಿಜ್ವಾನ್ ಹುಸೇನ್, ಜಿಲ್ಲಾ ಕೋಶಾಧಿಕಾರಿ ಕೆ.ಪಿ.ಖಾಲಿದ್, ಜಿಲ್ಲಾ ಸಮಿತಿ ಸದಸ್ಯರಾದ ಮುಸ್ತಫಾ ಆಲ್ದೂರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ರಿಜ್ವಾನ್ಫಲ್ಗುಣಿ, ಪದಾಧಿಕಾರಿಗಳಾದ ಸಿಕಂದರ್, ನಾಗೇಶ್ ಸಾಲುಮರ, ಸಂತೋಷ್, ಜಾವೀದ್, ಮಹಮ್ಮದ್ ರಫೀಕ್ ಇದ್ದರು.

‘ಉತ್ತಮ ರಾಜಕೀಯಕ್ಕಾಗಿ ಎಸ್‌ಡಿಪಿಐ ಸೇರಿ’

ದೇಶದಲ್ಲಿ ರಾಜಕೀಯ ಪಕ್ಷಗಳು ತಮ್ಮ ಮೂಲ ಧ್ಯೇಯ ಸಿದ್ಧಾಂತಗಳನ್ನೇ ತುಳಿದು ಆಡಳಿತ ನಡೆಸುತ್ತಿವೆ. ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡಬಲ್ಲೆವು ಎಂಬ ತತ್ವವನ್ನು ರಾಜಕೀಯ ಪಕ್ಷಗಳು ಅನುಸರಿಸುತ್ತಿವೆ. ಯಾವುದೇ ಆರೋಪ ಬಂದರೂ ಇತರೆ ಪಕ್ಷಗಳ ಮೇಲೆ ಬೆರಳು ತೋರಿಸುವ ಕೃತ್ಯ ನಡೆಸುತ್ತಿದ್ದು ಇದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ. ಸ್ವಾಭಿಮಾನದ ರಾಜಕೀಯಕ್ಕಾಗಿ ಎಸ್‌ಡಿಪಿಐ ಸೇರಬೇಕಿದೆ ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.