ADVERTISEMENT

ಒತ್ತುವರಿ ತೆರವಿಗೆ ಬೆಳೆಗಾರರ ವಿರೋಧ: ಶೃಂಗೇರಿ ಕ್ಷೇತ್ರ ಸಂಪೂರ್ಣ ಬಂದ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 0:50 IST
Last Updated 18 ಆಗಸ್ಟ್ 2024, 0:50 IST
<div class="paragraphs"><p>ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಸಾವಿರಾರು ಬೆಳೆಗಾರರು ಪಾಲ್ಗೊಂಡಿದ್ದರು</p></div>

ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಸಾವಿರಾರು ಬೆಳೆಗಾರರು ಪಾಲ್ಗೊಂಡಿದ್ದರು

   

ಚಿಕ್ಕಮಗಳೂರು: ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಆರಂಭಿಸಿರುವ ಅರಣ್ಯ ಇಲಾಖೆ ವಿರುದ್ಧ ಕರೆ ನೀಡಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬೆಳೆಗಾರರ ಮುಖಂಡರು, ರೈತ ಮುಖಂಡರು, ಸಂಸದರು, ಶಾಸಕರು ಸೇರಿ ಎಲ್ಲಾ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ ಒತ್ತುವರಿ ತೆರವು ವಿರುದ್ಧ ಆಕ್ರೋಶ ಮೊಳಗಿಸಿದರು.

ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಬಂದ್‌ಗೆ ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಬಾಳೆಹೊನ್ನೂರು, ಜಯಪುರ ಸೇರಿ ಕ್ಷೇತ್ರ ವ್ಯಾಪ್ತಿಯ ಎಲ್ಲೆಡೆ ಬೆಂಬಲ ವ್ಯಕ್ತವಾಯಿತು. ಎಲ್ಲಾ ಕಡೆಗಳಲ್ಲೂ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳ ಬಾಗಿಲನ್ನೂ ಮುಚ್ಚಿಸಿ ಬಂದ್ ನಡೆಸಲಾಯಿತು.

ADVERTISEMENT

ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲೂ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ತೀರ್ಥಹಳ್ಳಿ, ಮಂಗಳೂರು, ಶಿವಮೊಗ್ಗ, ಮೂಡಿಗೆರೆ, ಚಿಕ್ಕಮಗಳೂರು ಸಂಪರ್ಕದ ಎಲ್ಲಾ ರಸ್ತೆಗಳಲ್ಲೂ ವಾಹನಗಳನ್ನು ಗಡಿಯಲ್ಲಿ ತಡೆದು ವಾಪಸ್ ಕಳುಹಿಸಲಾಯಿತು. ಬೇರೆ ಬೇರೆ ಊರಿಗೆ ತೆರಳಬೇಕಿದ್ದ ಪ್ರಯಾಣಿಕರು ಗಡಿಯಲ್ಲೇ ಇಳಿದು ಪರದಾಡಬೇಕಾಯಿತು.

ಶೃಂಗೇರಿ, ಎನ್.ಆರ್.ಪುರ, ಬಾಳೆಹೊನ್ನೂರು, ಜಯಪುರದಿಂದ ಬೈಕ್ ಮತ್ತು ಕಾರುಗಳಲ್ಲಿ ರ್‍ಯಾಲಿ ಮೂಲಕ ಬಂದ ಬೆಳೆಗಾರರು ಕೊಪ್ಪದಲ್ಲಿ ಸಮಾವೇಶಗೊಂಡರು. 

‘ಅರಣ್ಯ ಕಾಯ್ದೆಗಳ ಹೆಸರಿನಲ್ಲಿ ಮಲೆನಾಡು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಒತ್ತುವರಿ ತೆರವು ಮಾಡಲು ಅವಕಾಶ ನೀಡುವುದಿಲ್ಲ’ ಎಂದು ಪ್ರತಿಭಟನಕಾರರು ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದಲ್ಲಿ ಸರ್ವ‍ಪಕ್ಷಗಳ ನಿಯೋಗ ತೆರಳಿ ಮನವರಿಕೆ ಮಾಡಿಸಬೇಕು. ಕೇಂದ್ರ ಸರ್ಕಾರಕ್ಕೆ ನನ್ನ ನೇತೃತ್ವದಲ್ಲೇ ನಿಯೋಗ ಹೋಗೊಣ’ ಎಂದು ಹೇಳಿದರು.

ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ‘ಮಲೆನಾಡಿನ ಬೆಳೆಗಾರರು ಪರಿಸರ ರಕ್ಷಣೆ ಮಾಡಿದ್ದಾರೆಯೇ ಹೊರತು ಹಾಳು ಮಾಡಿಲ್ಲ. ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರ ಭೇಟಿಗೆ ದಿನಾಂಕ ನಿಗದಿ ಮಾಡಿ ಸರ್ವಪಕ್ಷಗಳ ನಿಯೋಗ ಕರೆದೊಯ್ಯುವ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ’ ಎಂದರು.

ಬಿಜೆಪಿ ಮುಖಂಡ ಜೀವರಾಜ್, ಜೆಡಿಎಸ್ ಮುಖಂಡ ಸುಧಾಕರ ಶೆಟ್ಟಿ ಸೇರಿ ಎಲ್ಲಾ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.