ಮಂಗಳೂರು: ಸರ್ಕಾರಿ ಪಿಯು ಕಾಲೇಜು ಸೇರಿದಂತೆ ನಾಲ್ಕು ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ 70 ಶಿಕ್ಷಕರು ಹಾಗೂ 620 ಹಳೇ ವಿದ್ಯಾರ್ಥಿಗಳನ್ನು ಒಗ್ಗೂಡಿಸಿದ, ಮೂಡಿಗೆರೆ ತಾಲ್ಲೂಕಿನ ಕುದುರೆಮುಖದಲ್ಲಿ ನಡೆದ ‘ಗುರುವಂದನಾ–2022’ ಕಾರ್ಯಕ್ರಮವು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿದೆ.
ಭಾನುವಾರ ಕುದುರೆಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊರನಾಡು ಕ್ಷೇತ್ರದ ಧರ್ಮಕರ್ತ ಜಿ. ಭೀಮೇಶ್ವರ ಜೋಶಿ ಅವರು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪರವಾಗಿ ನವೀನ್ ಜಾಂಬಳೆ ಹಾಗೂ ಬೆಸ್ಟೀಸ್ ಫಾರೆವರ್ ವೆಲ್‌ಫೇರ್ ಟ್ರಸ್ಟ್‌ನ 17 ಸದಸ್ಯರಿಗೆ ಪದಕ ನೀಡಿ ಗೌರವಿಸಿದರು.
ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ಪುನರ್‌ಮಿಲನ ಕಾರ್ಯಕ್ರಮವು ಗಾಯಕ ಮತ್ತು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಕುದುರೆಮುಖ ಗೀತೆ ‘ಗುಮ್ಮಲಾಡಿ’ ಮತ್ತು ಬೆಸ್ಟೀಸ್ ಫಾರೆವರ್ ವೆಲ್‌ಫೇರ್ ಟ್ರಸ್ಟ್‌ನ ಲೋಗೊ ಬಿಡುಗಡೆಗೆ ಸಾಕ್ಷಿಯಾಯಿತು. ಗುರುವಂದನಾ ಸಮಾರಂಭದಲ್ಲಿ 70 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಗಿರಿಜ್ಯೋತಿ ಕಾನ್ವೆಂಟ್‌ನಲ್ಲಿ 18 ವರ್ಷಗಳಿಂದ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡಿದ ಪಂಕಜಾ ಚಂದ್ರಶೇಖರ್ ಮಾತನಾಡಿ, ‘ಕುದುರೆಮುಖವು ಸ್ವಚ್ಛ ಮತ್ತು ನಿರ್ಮಲ ಪರಿಸರದಿಂದ ಸಿಂಗಾಪುರದಂತೆ ಕಾಣುತ್ತಿದೆ’ ಎಂದು ನೆನಪಿಸಿಕೊಂಡರು.
‘ನಾನು ಕಲಿಸುವ ಉತ್ಸಾಹವನ್ನು ಉಳಿಸಿಕೊಂಡಿದ್ದರೆ, ಅದಕ್ಕೆ ಜಿಜೆಸಿಎಸ್‌ನಲ್ಲಿರುವ ವಿದ್ಯಾರ್ಥಿಗಳೇ ಕಾರಣ ಎಂದು ಚಿಕ್ಕಮಗಳೂರಿನಲ್ಲಿ ಶಾಲೆಯನ್ನು ನಡೆಸುತ್ತಿರುವ ಪಂಕಜಾ ಹೇಳಿದರು.
‘ನಮ್ಮ ಟ್ರಸ್ಟ್ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಜಾಂಬಳೆ ಸುತ್ತಮುತ್ತಲಿನ ಶಾಲೆಗಳ ಅಗತ್ಯವನ್ನು ಪೂರೈಸಲಿದೆ’ ಎಂದು ನವೀನ್ ಜಾಂಬಳೆ ಹೇಳಿದರು. ಭೀಮೇಶ್ವರ ಜೋಶಿ ಮಾತನಾಡಿ, ಅನೇಕರು ತಮ್ಮ ಶಿಕ್ಷಕರನ್ನು ಸ್ಮರಿಸದೇ ಇರುವ ಯುಗದಲ್ಲಿ ಗುರುವಂದನಾ ಕಾರ್ಯಕ್ರಮ ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮವು ಹಳೆಯ ಸ್ನೇಹಿತರನ್ನು ಒಗ್ಗೂಡಿಸಿದ್ದಲ್ಲದೆ, ಮಕ್ಕಳು, ಹಿರಿಯರು ಒಟ್ಟಾಗಿ ಸಂಭ್ರಮಿಸಲು ಅನುವು ಮಾಡಿಕೊಟ್ಟಿತು. ಹಳೇ ವಿದ್ಯಾರ್ಥಿಗಳು ಅನೇಕರು ಕುದುರೆಮುಖದ ತಮ್ಮ ನೆಚ್ಚಿನ ಪ್ರದೇಶಗಳಿಗೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.