ADVERTISEMENT

ಶೃಂಗೇರಿ: ಹಂಸವಾಹನ (ಬ್ರಾಹ್ಮೀ) ಅಲಂಕಾರದಲ್ಲಿ ಕಂಗೊಳಿಸಿದ ಶಾರದೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 15:45 IST
Last Updated 26 ಸೆಪ್ಟೆಂಬರ್ 2022, 15:45 IST
ಶೃಂಗೇರಿ ಶಾರದ ಮಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೋಮವಾರ ಹಂಸವಾಹನ (ಬ್ರಾಹ್ಮೀ) ಅಲಂಕಾರದಲ್ಲಿ ಕಂಗೊಳಿಸಿದ ಶಾರದೆ.
ಶೃಂಗೇರಿ ಶಾರದ ಮಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೋಮವಾರ ಹಂಸವಾಹನ (ಬ್ರಾಹ್ಮೀ) ಅಲಂಕಾರದಲ್ಲಿ ಕಂಗೊಳಿಸಿದ ಶಾರದೆ.   

ಶೃಂಗೇರಿ: ಶಾರದಾ ಮಠದಲ್ಲಿ ಶಾರದೆ ಪ್ರತಿಷ್ಠೆಯ ಧಾರ್ಮಿಕ ವಿಧಿಯ ಬಳಿಕ ಶಾರದಾ ದೇವಿ ಸೋಮವಾರ ಕೈಯಲ್ಲಿ ಕಮಂಡಲು, ಅಕ್ಷರಮಾಲೆ, ಪುಸ್ತಕ, ಪಾಶ ಮತ್ತು ಚಿನ್ನದ ಮುದ್ರೆಗಳನ್ನು ಧರಿಸಿ ಹಂಸವಾಹನಾರೂಢಳಾಗಿ ಹಂಸವಾಹನ (ಬ್ರಾಹ್ಮೀ) ಅಲಂಕಾರದಲ್ಲಿ ಕಂಗೊಳಿಸಿದಳು.

ಶಾರದ ಮಠದಲ್ಲಿ ಶ್ರೀಸೂಕ್ತಜಪ, ಭುವನೇಶ್ವರಿ ಜಪ, ದುರ್ಗಾ ಜಪಗಳ ಬಳಿಕ ಶಾರದೆಯ ಆವಾಸ ಸ್ಥಾನ ಎಂಧು ಶಾಸ್ತ್ರದಲ್ಲಿ ಹೇಳಿದಂತೆ ಶ್ರೀಚಕ್ರಕ್ಕೆ ನವಾಹರಣ ಪೂಜೆ, ಮಧ್ಯಾಹ್ನ 12 ಗಂಟೆಗೆ ಕುಮಾರಿ ಪೂಜೆ, ಸುವಾಸಿನೀ ಪೂಜೆ, ಭಕ್ತಾದಿಗಳಿಂದ ವಿಶೇಷ ಪೂಜೆ ನೆರವೇರಿತು.

ಶಾರದಾ ಮಠದಲ್ಲಿ ಸಂಜೆ 6ಗಂಟೆಗೆ ನಡೆದ ಬೀದಿ ಉತ್ಸವದಲ್ಲಿ ಶೃಂಗೇರಿ ತಾಲ್ಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಉತ್ಸಾಹದಿಂದ ಭಾಗವಹಿಸಿದರು. ಎನ್.ಆರ್ ಪುರ, ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ, ಯುವ ವಿಪ್ರ ವೇದಿಕೆ, ಕಾವಡಿ ಅಗ್ರಹಾರದ ಉಮಾ ಮಹೇಶ್ವರ ಸೇವಾ ಸಮಿತಿ, ಹೆಗ್ಗದ್ದೆ ಅನಂತ ಪದ್ಮನಾಭ ಸೇವಾ ಸಮಿತಿ, ನೇತ್ರವಳ್ಳಿ ದುರ್ಗಾಪರಮೇಶ್ವರಿ ಭಕ್ತ ಮಂಡಳಿ, ಉಳುವೇಬೈಲು ಜೈಶಂಕರ್ ಯುವಕ ಸಂಘ, ಅಡ್ಡಗದ್ದೆ ವಿನಾಯಕ ಯುವಕ ಸಂಘ, ಕೆಳಕೊಪ್ಪ ವಿನಾಯಕ ಸೇವಾ ಸಮಿತಿ, ಕೊಪ್ಪ ಶ್ರೀನಿಕೇತನ ಭಜನಾ ಮಂಡಳಿ, ಹಿಂದೂ ಜಾಗರಣ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಗಳ ಒಕ್ಕೂಟ, ಪ್ರಕೃತಿ ರೈತ ಮಿತ್ರಕೂಟ, ಗ್ರಾಮಪಂಚಾಯಿತಿಯ ವಿವಿಧ ಸಂಘ-ಸಂಸ್ಥೆಗಳು, ಶಾಲಾ ಕಾಲೇಜುಗಳು ಬೀದಿ ಉತ್ಸವದಲ್ಲಿ ಪಾಲ್ಗೊಂಡರು.

ADVERTISEMENT

ಶಾರದ ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಂಜೆ 6ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಡಿ.ಆರ್.ನಿರಂಜನ್ ದಿಂದೋಡಿ ಮತ್ತು ಸಂಗಡಿಗರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.

ವಿಧುಶೇಖರ ಭಾರತೀ ಸ್ವಾಮೀಜಿ ಶಾರದ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೇಶ್ವರ ತೊಟ್ಟಿಯಿಂದ ಶಾರದಾಮ್ಮನವರ ದೇವಾಲಯಕ್ಕೆ ಉತ್ಸವದಲ್ಲಿ ಬಂದರು.

ಸಿಂಹಾಸನದಲ್ಲಿರುವ ಶಾರದೆಯ ಉತ್ಸವ ಮೂರ್ತಿಯನ್ನು ಬಂಗಾರದ ರಥದಲ್ಲಿ ಇಡಲಾಯಿತು. ವೇದ, ವಾದ್ಯ ಫೋಷಗಳೊಂದಿಗೆ, ಛತ್ರ-ಛಾಮರಗಳೊಂದಿಗೆ ಶಾರದಾ ದೇವಸ್ಥಾನದ ಒಳಪ್ರಾಂಗಣದಲ್ಲಿ ದೇವಾಲಯಕ್ಕೆ ಮೂರು ಸುತ್ತು ಉತ್ಸವ ನೇರವೆರಿತು.

ಉತ್ಸವದ ಬಳಿಕ ಕಿರಿಯ ಸ್ವಾಮೀಜಿ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಆಸೀನರಾದರು. ಸಪ್ತಶತಿ ಪಾರಾಯಣದ ಅಧ್ಯಯನ, ಅಮ್ಮನವರಿಗೆ ಮಂಗಳಾರತಿ, ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.