ADVERTISEMENT

ಕಡೂರು: ಮಳೆಯಿಂದಾಗಿ ರೈತರ ಶ್ರಮ‌ ಮಣ್ಣುಪಾಲು, 15 ಸಾವಿರ ಹೆಕ್ಟೇರ್‌ ಬೆಳೆ ನಷ್ಟ

ನೆಲಕಚ್ಚಿದ ಬೆಳೆ, ತರಕಾರಿಗಳು

ಬಾಲು ಮಚ್ಚೇರಿ
Published 26 ನವೆಂಬರ್ 2021, 19:30 IST
Last Updated 26 ನವೆಂಬರ್ 2021, 19:30 IST
ಮಳೆಯ ಕಾರಣ ತೇವಾಂಶ ಹೆಚ್ಚಾಗಿ ರಾಗಿ ತೆನೆ ಮೊಳಕೆಯೊಡೆದಿರುವುದು
ಮಳೆಯ ಕಾರಣ ತೇವಾಂಶ ಹೆಚ್ಚಾಗಿ ರಾಗಿ ತೆನೆ ಮೊಳಕೆಯೊಡೆದಿರುವುದು   

ಕಡೂರು: ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಗೆ ರೈತರು ಬೆಳೆದ ರಾಗಿ ಮತ್ತು ತರಕಾರಿ ಬೆಳೆಗಳು ನೆಲಕಚ್ಚಿವೆ. ಮತ್ತೊಂದೆಡೆ ಕೆರೆಕಟ್ಟೆಗಳು ಭರ್ತಿಯಾಗುವ ಜತೆಗೆ ಹಳ್ಳ–ಕೊಳ್ಳಗಳು ಸಮೃದ್ಧವಾಗಿವೆ.

ಮಳೆ ಬಿಟ್ಟರೂ ನೀರಿನ ಹರಿವು ಕಡಿಮೆಯಾಗಿಲ್ಲ. ತೋಟಗಳಲ್ಲಿ ನೀರು ತುಂಬಿದೆ. ಕೊಯಿಲಿಗೆ ಬಂದಿದ್ದ ರಾಗಿ ಹೊಲಗಳು ಜಲಾವೃತವಾಗಿ ಪೈರು ಕಟಾವಿಗೆ ತೊಂದರೆಯಾಗಿದೆ. ತೇವಾಂಶ ಹೆಚ್ಚಾಗಿ ರಾಗಿ ಬೆಳೆ ಮೊಳಕೆಯೊಡೆಯಲು ಆರಂಭವಾದರೆ ಹುಲ್ಲು ಕಪ್ಪು ಬಣ್ಣಕ್ಕೆ ತಿರುಗಿದೆ. ಒಟ್ಟಾರೆ ರಾಗಿ ಬೆಳೆ ಮತ್ತು ಹುಲ್ಲಿನ ಗುಣಮಟ್ಟ ಕಡಿಮೆಯಾಗಿದೆ ಎಂಬುದು ಬೆಳೆಗಾರರ ಅಳಲು.

ತಾಲ್ಲೂಕಿನಲ್ಲಿ 31,500 ಸಾವಿರ ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿಯಿತ್ತಾದರೂ ಅದನ್ನುಮೀರಿ 36,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈಗ ಸುರಿದ ಮಳೆಯಿಂದ 14,000 ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆದುನಿಂತ ರಾಗಿ ಬೆಳೆಯು ನೆಲಕಚ್ಚಿದೆ. ಅಳಿದುಳಿದ ರಾಗಿಯನ್ನು ಬಿಸಿಲಿಗೆ ಒಣಗಿಸಿ ಮನೆಗೆ ತುಂಬಿಸಿಕೊಳ್ಳುವ ಪ್ರಯತ್ನದಲ್ಲಿ ರೈತರಿದ್ದಾರೆ.

ADVERTISEMENT

ಕೊಳೆಯುತ್ತಿವೆ ತೋಟಗಾರಿಕೆ ಬೆಳೆಗಳು: ಮತ್ತೊಂದೆಡೆ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. ತೋಟಗಾರಿಕಾ ಇಲಾಖೆಯ ಪ್ರಾಥಮಿಕ ವರದಿಯಲ್ಲಿ ಟೊಮೊಟೊ (85 ಹೆಕ್ಟೇರ್,)ಮೆಣಸು (75 ಹೆಕ್ಟೇರ್), ಬದನೆ (10 ಹೆಕ್ಟೇರ್), ಶುಂಠಿ (10 ಹೆಕ್ಟೇರ್), ಬೀನ್ಸ್ (6 ಹೆಕ್ಟೇರ್), ಆಲೂಗೆಡ್ಡೆ (5 ಹೆಕ್ಟೇರ್), ಈರುಳ್ಳಿ (20 ಹೆಕ್ಟೇರ್) ಪ್ರದೇಶಗಳಲ್ಲಿ ಹಾನಿಗೊಂಡ ಪರಿಣಾಮ ತರಕಾರಿ ಬೆಲೆ ಕೂಡ ಗಗನಮುಖಿಯಾಗಿದೆ.

ತಾಲ್ಲೂಕಿನಲ್ಲಿರುವ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ 30 ಕೆರೆಗಳಲ್ಲಿ 26 ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದ್ದರೆ, ವಿಷ್ಣು ಸಮುದ್ರ ಕೆರೆ ಮತ್ತು ಚೌಡ್ಲಾಪುರ, ಯಗಟಿ ಗ್ರಾಮದ ಕೆರೆಗಳಲ್ಲಿ ಶೇ 50ರಷ್ಟು ಅಧಿಕ ನೀರು ತುಂಬಿದೆ.

ಒಟ್ಟಾರೆ ತಾಲ್ಲೂಕಿನಲ್ಲಿ ಅಧಿಕ ಮಳೆಯಿಂದ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕೊಳಗಾದರೆ ಮತ್ತೊಂದೆಡೆ ಕೆರೆಗಳು ತುಂಬಿರುವುದು ಭವಿಷ್ಯದ ಬೆಳೆಗೆ ಆಶಾಕಿರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.