ADVERTISEMENT

ಗಿರಿಶ್ರೇಣಿ: 300 ವಾಹನ ಪ್ರವೇಶ ಮಿತಿ ನಿರ್ಬಂಧ, ನೂರಾರು ವಾಹನ ವಾಪಸ್‌

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 10:21 IST
Last Updated 14 ಆಗಸ್ಟ್ 2021, 10:21 IST
ಕೈಮರ ಚೆಕ್‌ಪೋಸ್ಟ್‌ನಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು
ಕೈಮರ ಚೆಕ್‌ಪೋಸ್ಟ್‌ನಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು   

ಚಿಕ್ಕಮಗಳೂರು: ಗಿರಿಶ್ರೇಣಿ ಪ್ರವಾಸಿ ತಾಣಗಳಿಗೆ ನಿತ್ಯ 300ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಗದಿಪಡಿಸಿದ ಮಿತಿಯಷ್ಟು ವಾಹನಗಳು ತೆರಳಿದ ಬಳಿಕ ಪ್ರವೇಶ ನಿರ್ಬಂಧಿಸಿದ್ದರಿಂದ ನೂರಾರು ವಾಹನಗಳು ಕೈಮರ ಚೆಕ್‌ಪೋಸ್ಟ್‌ನಿಂದ ವಾಪಸ್‌ ತೆರಳಿದವು.

ಕೈಮರ ಚೆಕ್‌ಪೋಸ್ಟ್‌ನಿಂದ ಹಿಂದಕ್ಕೆ (ಚಿಕ್ಕಮಗಳೂರು ಕಡೆಗೆ) ಸುಮಾರು ಒಂದೂವರೆ ಕಿಲೋಮೀಟರ್‌ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರವೇಶ ಮಿತಿ ವಿಚಾರ ತಿಳಿದು ಹಲವರು ವಾಪಸ್‌ ಹೋದರು. ಮತ್ತೆ ಕೆಲವರು ಗಿರಿಗೆ ತೆರಳಲು ಅವಕಾಶ ನೀಡುವಂತೆ ಚೆಕ್‌ ಪೋಸ್ಟ್‌ ಸಿಬ್ಬಂದಿಯನ್ನು ಒತ್ತಾಯಿಸುತ್ತಿದ್ದು ಕಂಡುಬಂತು.

ಬಾಬಾಬುಡನ್‌ಗಿರಿ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಮಾಣಿಕ್ಯ ಧಾರಾ ಝರಿ ಭಾಗಗಳಿಗೆ ಎರಡು ಪಾಳಿಯಲ್ಲಿ (ಬೆಳಿಗ್ಗೆ 6ರಿಂದ 9 ಗಂಟೆ ಹಾಗೂ ಮಧ್ಯಾಹ್ನ 2ರಿಂದ 4 ಗಂಟೆ) ತಲಾ 150 ವಾಹನಗಳು, ಒಟ್ಟು 1,200 ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.

ಗಿರಿ ಶ್ರೇಣಿಯ ಪ್ರೇಕ್ಷಣಿಯ ಸ್ಥಳಗಳಿಗೆ ಸಾಮಾನ್ಯವಾಗಿ ವಾರಾಂತ್ಯದ ದಿನಗಳಲ್ಲಿ ಸುಮಾರು 1,500ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಬಂದುಹೋಗುತ್ತವೆ. ಈಗ ನಿರ್ಬಂಧ ವಿಧಿಸಿರುವುದು ಪ್ರವಾಸಿಗರಿಗೆ ‘ಬಿಸಿತುಪ್ಪ’ವಾಗಿ ಪರಿಣಮಿಸಿದೆ.

ಅಲ್ಲಂಪುರ ಸಮೀಪ ಪೊಲೀಸರು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು. ಮಾಸ್ಕ್‌ ಧರಿಸದಿದ್ದವರಿಗೆ ದಂಡ ವಿಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.