ಜಯಪುರ(ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಗುಡ್ಡೆತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೆಯರ ಮಠ, ಹಣತಿ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಗೈತಿಹಾಸಿಕ ಕಾಲದ ಅವಶೇಷಗಳು ಪತ್ತೆಯಾಗಿವೆ ಎಂದು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ತಿಳಿಸಿದ್ದಾರೆ.
ವಡೆಯರ ಮಠ ಮತ್ತು ಹಣತಿ ಬೆಟ್ಟಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂತನ ಶಿಲಾಯುಗ ಕಾಲಮಾನಕ್ಕೆ ಸೇರುವ ರಿಂಗ್ ಸ್ಟೋನ್‌ಗಳು, (ಉಂಗುರಾಕೃತಿ ಕಲ್ಲು) ಹಾಗೂ ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ವೃತ್ತ ಸಮಾಧಿ ಮತ್ತು ನಿಲಸುಗಲ್ಲು ಮಾದರಿಯ ಸಮಾಧಿಗಳು ಪತ್ತೆಯಾಗಿವೆ.
ನಿಲಸುಗಲ್ಲು 5 ಅಡಿ ಎತ್ತರವಾಗಿದ್ದು, ವೃತ್ತ ಸಮಾಧಿಗಳು ಇದೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಪತ್ತೆಯಾಗಿವೆ. ಸುಮಾರು 12ರಿಂದ 16 ಕಲ್ಲುಗಳನ್ನು ಬಳಸಿ ವೃತ್ತಸಮಾಧಿಯನ್ನು ನಿರ್ಮಾಣ ಮಾಡಿದ್ದು ಇಂತಹ ಮೂರು ಸಮಾಧಿಗಳು ಇಲ್ಲಿ ಕಂಡುಬಂದಿವೆ.
ನೂತನ ಶಿಲಾಯುಗ ಮತ್ತು ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ಪ್ರಾಕ್ತನ ಅವಶೇಷಗಳು ಪತ್ತೆಯಾಗಿರುವುದರಿಂದ ಇದು ಶಿಲಾಯುಗದ ಮಾನವನ ನೆಲೆಯಾಗಿರಬಹುದು. ಈ ನೆಲೆಯು ಸುಮಾರು 5,000 ವರ್ಷಗಳಷ್ಟು ಪ್ರಾಚೀನತೆಯನ್ನು ಹೊಂದಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಕಾರ್ಯ ಶೋಧನೆಯಲ್ಲಿ ಸುನಿಲ್ .ಕೆ.ವಡೆಯರಮಠ ಸಹಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.