ಮೂಡಿಗೆರೆ: ಪಟ್ಟಣದ ಹೊಯ್ಸಳ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದೆ. ಸೌಲಭ್ಯಗಳ ಕೊರತೆಯಿಂದಾಗಿ ಕ್ರೀಡಾಪಟುಗಳ ಅಭ್ಯಾಸ, ಆಟೋಟ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ.
ಓಟ ಪಥದಲ್ಲಿ (ಟ್ರ್ಯಾಕ್) ಅಳವಡಿಸಿದ್ದ ಇಟ್ಟಿಗೆಗಳು ಬಹುತೇಕ ಮಾಯವಾಗಿವೆ. ಮಣ್ಣಿನಲ್ಲೇ ಓಡಬೇಕಾದ ಸ್ಥಿತಿ ಇದೆ. ಟ್ರ್ಯಾಕ್ ನೀರು ಚರಂಡಿಗೆ ಹರಿಯಲು ವ್ಯವಸ್ಥೆ ಕಲ್ಪಿಸಿಲ್ಲ. ಮಳೆಗೆ ಟ್ರ್ಯಾಕ್‌ನಲ್ಲಿ ನೀರು ನಿಲ್ಲುತ್ತದೆ. ಒಟ್ಟಿನಲ್ಲಿ ಟ್ರ್ಯಾಕ್ ಇದ್ದರೂ, ಇಲ್ಲದಂತಾಗಿದೆ.
ಮೈದಾನದ ಬಲಭಾಗದಲ್ಲಿರುವ ಉದ್ದ ಜಿಗಿತದ ಅಂಕಣವು ಸಂಪೂರ್ಣ ಹದಗೆಟ್ಟಿದ್ದು, ಕ್ರೀಡಾಪಟುಗಳು ಅಭ್ಯಾಸ ನಡೆಸುತ್ತಿಲ್ಲ.
ಕ್ರೀಡಾಂಗಣದ ಸುತ್ತಲೂ ಹುಲ್ಲಿನ ಪೊದೆ, ಗಿಡಗಂಟಿಗಳು ಬೆಳೆದಿವೆ. ಕ್ರೀಡಾಪಟುಗಳು, ವಾಯು ವಿಹಾರಿಗಳು ಹಾವು, ಚೇಳು, ಹುಳಹುಪ್ಪಟೆ ಭಯದ ನಡುವೆ ಓಡಾಡಬೇಕು.
‘ಕ್ರೀಡಾಂಗಣದ ಚರಂಡಿಗೆ ಹಾಕಿದ್ದ ಕಲ್ಲುಗಳು ‘ಮಾಯ’ವಾಗಿವೆ. ಚರಂಡಿಗಳು ಬಾಯ್ದೆರೆದಿವೆ. ಮಕ್ಕಳನ್ನು ಅಂಗಳಕ್ಕೆ ಕರೆತರಲು ಭಯವಾಗುತ್ತದೆ. ಅಂಗಳದಲ್ಲಿದ್ದ ಕಟ್ಟಡಗಳನ್ನೆಲ್ಲ ಕೆಡವಿ ಹಾಕಿದ್ದಾರೆ. ಯೋಗಾಭ್ಯಾಸ ಮಾಡಲು ವ್ಯವಸ್ಥೆ ಇಲ್ಲ’ ಎಂದು ಕ್ರೀಡಾಪಟು ಜ್ಞಾನೇಶ್ ಕುಮಾರ್ ದೂರುತ್ತಾರೆ.
ಕ್ರೀಡಾಂಗಣದಲ್ಲಿನ ಹೈಮಾಸ್ಟ್ ವಿದ್ಯುತ್ ದೀಪದ ಸ್ವಿಚ್ ಬೋರ್ಡ್ ನೆಲಕ್ಕೆ ಹೊಂದಿಕೊಂಡಿದ್ದು, ಅಪಾಯ ಆಹ್ವಾನಿಸುತ್ತಿವೆ. ಆಟವಾಡುವಾಗ ಬೋರ್ಡ್‌ಗೆ ಕೈಕಾಲಿಗೆ ತಗುಲಿದರೆ ಅಪಾಯ ತಪ್ಪಿದ್ದಲ್ಲ.
ಶೌಚಾಲಯ ನಿರ್ವಹಣೆ ಇಲ್ಲದೇ ಅಧ್ವಾನವಾಗಿದೆ. ಒಳಗಡೆ ಗುಟ್ಕಾ, ಸಿಗರೇಟು ಪೊಟ್ಟಣಗಳು, ಪ್ಲಾಸ್ಟಿಕ್ ಕವರ್‌ಗಳು ಬಿದ್ದಿವೆ. ಶೌಚಕ್ಕೆ ಮನೆ ಅಥವಾ ಬಯಲು ಆಶ್ರಯಿಸಬೇಕಾದ ಸ್ಥಿತಿ ಇದೆ.
ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಜೆ, ರಾತ್ರಿ ಹೊತ್ತಿನಲ್ಲಿ ಮದ್ಯಪಾನಿಗಳು, ಮೊಬೈಲ್ ಫೋನ್ ಸಂಭಾಷಣೆಕಾರರು, ಪುಂಡರು ಇರುತ್ತಾರೆ. ಮಹಿಳಾ ಕ್ರೀಡಾಪಟುಗಳು ಅಭ್ಯಾಸ ನಡೆಸಲು ಹಿಂಜರಿಯುವಂತಾಗಿದೆ.
‘ಮಳೆಯಾದಾಗ ಕ್ರೀಡಾಂಗಣದಲ್ಲಿ ಓಡಾಡುವುದೇ ಕಷ್ಟ. ಸೇನೆ, ಪೊಲೀಸ್, ಅಬಕಾರಿ ಸಹಿತ ವಿವಿಧ ಹುದ್ದೆಗಳ ನೇಮಕಾತಿಯ ದೈಹಿಕ ಸಾಮರ್ಥ್ಯ ಪರೀಕ್ಷೆ ನಿಟ್ಟಿನಲ್ಲಿ ತಯಾರಿ ನಡೆಸಲು ಮೈದಾನದಲ್ಲಿ ಸೌಕರ್ಯಗಳು ಇಲ್ಲ. ಕ್ರೀಡಾಂಗಣದಲ್ಲಿ ಹಿಂದೆ ಜಿಮ್ನಾಸ್ಟಿಕ್ ಕೇಂದ್ರ ಇತ್ತು. ಈಗ ತೆರವುಗೊಳಿಸಲಾಗಿದೆ. ಜಿಮ್ನಾಸ್ಟಿಕ್ ಕೇಂದ್ರದಲ್ಲಿದ್ದ ಉಪಕರಣಗಳು ಎಲ್ಲಿವೆ ಎಂಬುದು ಗೊತ್ತಿಲ್ಲ’ ಎನ್ನುತ್ತಾರೆ ಪೊಲೀಸ್ ಹುದ್ದೆಗೆ ತಯಾರಿಯಲ್ಲಿ ತೊಡಗಿರುವ ಸ್ಪರ್ಧಾರ್ಥಿರಜತ್.
ಈ ಕ್ರೀಡಾಂಗಣವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿದೆ. ಆಟೋಟ ಚಟುವಟಿಕೆಗಳು, ಬಯಲು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಣವಾಗಿದೆ. ಇಲಾಖೆಯು ಈ ಕ್ರೀಡಾಂಗಣಕ್ಕೆ ಸಿಬ್ಬಂದಿ ನಿಯೋಜಿಸಬೇಕು, ಸವಲತ್ತುಗಳನ್ನು ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.