ADVERTISEMENT

ಚಿಕ್ಕಮಗಳೂರು | ಹೆಚ್ಚುತ್ತಿದೆ ಆನೆ–ಮಾನವ ಪ್ರಾಣಹಾನಿ: 6 ವರ್ಷದಲ್ಲಿ 15 ಜನ ಸಾವು

ವಿಜಯಕುಮಾರ್ ಎಸ್.ಕೆ.
Published 18 ನವೆಂಬರ್ 2024, 7:35 IST
Last Updated 18 ನವೆಂಬರ್ 2024, 7:35 IST
ಕಾಡಾನೆ– ಸಾಂದರ್ಭಿಕ ಚಿತ್ರ
ಕಾಡಾನೆ– ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಕಾಡಾನೆ ಮತ್ತು ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಾನವ ಸಾವಿನ ಜತೆಗೆ ಆನೆಗಳ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲೇ ಐದು ಕಾಡಾನೆಗಳು ವಿದ್ಯುತ್ ತಂತಿ ತಗುಲಿ ಮೃತಪಟ್ಟಿವೆ. ಆರು ವರ್ಷಗಳ ಅವಧಿಯಲ್ಲಿ 15 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಹುಲಿ ಸಂರಕ್ಷಿತ ಭದ್ರಾ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಒಳಗೊಂಡಿರುವ ಸಮೃದ್ಧವಾದ ಅರಣ್ಯವನ್ನು ಹೊಂದಿರುವ ಜಿಲ್ಲೆ ಚಿಕ್ಕಮಗಳೂರು. ಇಲ್ಲಿ ಸಹಜವಾಗಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ನಡೆಯುತ್ತಿದೆ.

ಕಾಡಿನಲ್ಲಿ ಜನವಸತಿ, ಹೋಮ್‌ಸ್ಟೇಗಳು, ಕಾಫಿತೋಟಗಳು ಆವರಿಸಿಕೊಳ್ಳುತ್ತಿದ್ದರೆ, ಕಾಡಿನಿಂದ ನಾಡಿನತ್ತ ಆನೆಗಳು ಬಂದು ಉಪಟಳ ನೀಡುತ್ತಿವೆ. ಅನೇಕ ವರ್ಷಗಳಿಂದ ಇರುವ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸರ್ಕಾರ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ಆನೆ ಮತ್ತು ಮಾನವ ಪ್ರಾಣ ಹಾನಿ ನಿರಂತರವಾಗಿ ನಡೆಯುತ್ತಿದೆ.

ADVERTISEMENT

ಆರು ವರ್ಷಗಳಲ್ಲಿ 15 ಜನ ಪ್ರಾಣ ಕಳೆದುಕೊಂಡಿದ್ದರೆ, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇನ್ನು ಜಾನುವಾರುಗಳ ಸಾವು ಕೂಡ ಲೆಕ್ಕಕ್ಕಿಲ್ಲದಷ್ಟು ನಡೆದಿದೆ. ಕಾಡಂಚಿನ ಪ್ರದೇಶಗಳಲ್ಲಿ ಇದ್ದ ಸಂಘರ್ಷ ಈಗ ಇನ್ನಷ್ಟು ಹೆಚ್ಚಾಗಿದೆ. ಕಳೆದ ವರ್ಷ ಚಿಕ್ಕಮಗಳೂರು ನಗರಕ್ಕೆ ಆನೆಗಳು ಬಂದು ಅಡ್ಡಾಡಿರುವುದು ಆತಂಕ ಹೆಚ್ಚಿಸಿತ್ತು. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿಯಲ್ಲೇ ಆನೆ ಆಡ್ಡಾಡಿರುವುದು ವಾಹನ ಸವಾರರಲ್ಲಿ ಭಯ ಹುಟ್ಟಿಸಿತ್ತು.

2023ರ ಸೆಪ್ಟೆಂಬರ್ ಈವರೆಗೆ ಐದು ಜನರ ಪ್ರಾಣ ಹಾನಿಯಾಗಿದೆ. ಕಣಿವೆ ಪ್ರದೇಶ ಆಗಿರುವುದರಿಂದ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡುವುದು ಕೂಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಸವಾಲಿನ ಕೆಲಸ. ಇದರಿಂದಾಗಿಯೇ ಕಾರ್ಯಾಚರಣೆ ವೇಳೆಯೇ ಕಾಡಾನೆಯೊಂದು ಮೃತಪಟ್ಟಿತು.

ಮಾನವ– ಕಾಡಾನೆ ಸಂಘರ್ಷ ಕಡಿಮೆ ಮಾಡಲು ರೈಲ್ವೆ ಬ್ಯಾರಿಕೇಡ್‌ ನಿರ್ಮಾಣವನ್ನು ಭದ್ರಾ ವನ್ಯಜೀವಿ ವಲಯದಲ್ಲಿ ಒಟ್ಟು 40 ಕಿಲೋ ಮೀಟರ್‌ಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಲಕ್ಕವಳ್ಳಿ ಭಾಗದಲ್ಲಿ 1.215 ಕಿಲೋ ಮೀಟರ್‌ ಉದ್ದದ ಬ್ಯಾರಿಕೇಡ್‌ ಈಗಾಗಲೇ ನಿರ್ಮಾಣವಾಗಿದೆ. ಸಾರಗೋಡು ವಲಯದಲ್ಲಿ ಟೆಂಟಕಲ್ ಬೇಲಿ ನಿರ್ಮಿಸಲಾಗಿದೆ. ಆದರೂ, ಆನೆ–ಮಾನವ ಸಂಘರ್ಷ ಕಡಿಮೆಯಾಗಿಲ್ಲ.

ಪೂರಕ ಮಾಹಿತಿ: ರವಿಕುಮಾರ್ ಶೆಟ್ಟಿಹಡ್ಲು, ಕೆ.ನಾಗರಾಜ್

ವಿದ್ಯುತ್ ತಂತಿ ತಗುಲಿ ಆಲ್ದೂರು ಸಮೀಪ ಇತ್ತೀಚೆಗೆ ಮೃತಪಟ್ಟ ಕಾಡಾನೆ

ಕೊಪ್ಪ: ಐದು ವರ್ಷದಲ್ಲಿ ಮೂರು ಪ್ರಾಣಹಾನಿ

ಕೊಪ್ಪ: ಇಲ್ಲಿನ ಉಪ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ಪ್ರಕರಣಗಳು ಹೆಚ್ಚು ದಾಖಲಾಗಿದೆ. ಆನೆ ಕಾಡುಕೋಣ ಮುಂತಾದ ವನ್ಯಜೀವಿಗಳ ಹಾವಳಿಯಿಂದ ರೈತ ಕಾರ್ಮಿಕ ಕುಟುಂಬಗಳು ಬೆಳೆ ಹಾನಿ ಪ್ರಾಣ ಹಾನಿಯಂತಹ ಸಮಸ್ಯೆ ಎದುರಿಸಿದ್ದಾರೆ. ವಿವಿಧ ಕಾರಣಕ್ಕೆ ಪ್ರಾಣಿಗಳ ಜೀವಕ್ಕೂ ಕುತ್ತು ಬಂದಿದೆ. 2019-20ರಿಂದ 2024ರ ನ. 15ರ ವರೆಗೆ ಒಟ್ಟು 3 ಮಂದಿ ಮೃತಪಟ್ಟಿದ್ದಾರೆ. ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ಒಟ್ಟು ₹30.50 ಲಕ್ಷ ಪರಿಹಾರ ನೀಡಲಾಗಿದೆ. ಕಳೆದ 5 ವರ್ಷಗಳಲ್ಲಿ 22 ಮಂದಿಗೆ ಗಾಯಗಳಾಗಿವೆ ಅವರಿಗೆ ₹727840 ಪರಿಹಾರ ನೀಡಿದೆ. ಈ ಪೈಕಿ 7 ಪ್ರಕರಣಗಳಿಗೆ ಒಟ್ಟು ₹891240 ವೈದ್ಯಕೀಯ ವೆಚ್ಚ ಭರಿಸಿದೆ. ಕಳೆದ 5 ವರ್ಷಗಳಲ್ಲಿ 1370 ಬೆಳೆನಾಶ ಪ್ರಕರಣದಲ್ಲಿ ₹1.75 ಕೋಟಿಗೂ ಅಧಿಕ ಮೊತ್ತದ ನಷ್ಟವಾಗಿದೆ. ಈ ಪೈಕಿ 2019-20ರಲ್ಲಿ 114(ಕಡಿಮೆ) ಪ್ರಕರಣ 2022-23ರಲ್ಲಿ 400(ಹೆಚ್ಚು) ಪ್ರಕರಣಗಳಾಗಿವೆ. ₹61120 ಮೊತ್ತದ ಆಸ್ತಿ ನಷ್ಟವಾದ ಬಗ್ಗೆ ವಿವಿಧ 26 ಪ್ರಕರಣ ದಾಖಲಾಗಿವೆ. ವಿದ್ಯುತ್ ಅಪಘಾತ ಬೇಟೆಯಾಡಿರುವುದು ರಸ್ತೆ ಅಪಘಾತ ಗುಂಡು ಹೊಡೆದಿರುವುದು ಬಲೆಗೆ ಸಿಲುಕಿಸಿ ವಿಷವುಣಿಸಿ ಹತ್ಯೆ ಮಾಡಿರುವ ಪ್ರಕರಣ ದಾಖಲಾಗಿವೆ. ಈ ಪೈಕಿ ಬಹುತೇಕ ಪ್ರಕರಣಗಳು ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆಯೇ ಆಗಿವೆ. ಶೃಂಗೇರಿ ಕೊಪ್ಪ ವಲಯದಲ್ಲಿ ತಲಾ 6 ಪ್ರಕರಣ ಬಾಳೆಹೊನ್ನೂರು ವಲಯದಲ್ಲಿ 12 ಪ್ರಕರಣ ಚಿಕ್ಕಗ್ರಹಾರ ವಲಯದಲ್ಲಿ 3 ಪ್ರಕರಣ ಎನ್.ಆರ್.ಪುರ ವಲಯದಲ್ಲಿ 2 ಪ್ರಕರಣ ಕಳಸ ವಲಯದಲ್ಲಿ ವ್ಯಾಪ್ತಿಯಲ್ಲಿ 1 ಪ್ರಕರಣ ದಾಖಲಾಗಿದೆ. ರಸ್ತೆ ಅಪಘಾತ 6 ಪ್ರಕರಣಗಳ ಪೈಕಿ 4 ಬಾಳೆಹೊನ್ನೂರು ವಲಯ ವ್ಯಾಪ್ತಿಯಲ್ಲಿ 2 ಶೃಂಗೇರಿ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿದ 3 ಪ್ರಕರಣ ಪೈಕಿ ಎನ್.ಆರ್.ಪುರ ವಲಯ ವ್ಯಾಪ್ತಿಯಲ್ಲಿ 1 ಆನೆ ಮೃತಪಟ್ಟಿದೆ. ಚಿಕ್ಕಗ್ರಹಾರ ಕಾನೂರ್ ಅರಣ್ಯ ವ್ಯಾಪ್ತಿಯಲ್ಲಿ ಕೋತಿಗೆ ವಿಷವುಣಿಸಿ ಕೊಂದ 1 ಪ್ರಕರಣ. ಜಿಂಕೆ ಕಾಡೆಮ್ಮೆ ಹಾರುಬೆಕ್ಕು ಕಾಡು ಹಂದಿ ಚಿರತೆ ಮುಂತಾದ ಪ್ರಾಣಿಗಳು ಮತ್ತಿತರೆ ಕೆಲವು ವಿಶೇಷ ಪ್ರಭೇದಗಳೂ ಅಸಹಜ ಸಾವಿಗೀಡಾಗಿವೆ. ಎನ್.ಆರ್.ಪುರ ವಲಯ ವ್ಯಾಪ್ತಿಯಲ್ಲಿ ಮುತ್ತಿನಕೊಪ್ಪದ ಬಳಿ ಅರುಂಬಳ್ಳಿ ಮೀಸಲು ಅರಣ್ಯದಲ್ಲಿ ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಮೃತಪಟ್ಟಿದೆ.

ಆನೆಗಳಿಗೆ ಜೋತು ಬಿದ್ದ ವಿದ್ಯುತ್ ತಂತಿ ಕಂಟಕ
ಜಿಲ್ಲೆಯಲ್ಲಿ ವಿದ್ಯುತ್ ತಂತಿ ತಗುಲಿ 2008ರಿಂದ 2022ರವರೆಗೆ 17 ಕಾಡಾನೆಗಳು ಮೃತಪಟ್ಟಿದ್ದವು. ಕಳೆದ ಒಂದೂವರೆ ವರ್ಷದಲ್ಲಿ 5 ಆನೆಗಳು ಮೃತಪಟ್ಟಿವೆ.  ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲೇ ಒಂದು ವರ್ಷದ ಅವಧಿಯಲ್ಲಿ ಮೂರು ಕಾಡಾನೆಗಳು ವಿದ್ಯುತ್ ತಂತಿಗೆ ಬಲಿಯಾದವು. ಭದ್ರಾ ವನ್ಯಜೀವಿ ವಲಯದಿಂದ ಕಾಡಂಚಿನ ಗ್ರಾಮಗಳಿಗೆ ಬರುವ ಆನೆಗಳು ಕೂಡ ತರೀಕೆರೆ ವಲಯ ವ್ಯಾಪ್ತಿಯಲ್ಲಿ ಬಲಿಯಾಗುತ್ತಿವೆ. ವಿದ್ಯುತ್ ತಂತಿ ಜೋತು ಬಿದ್ದರೂ ಅವುಗಳನ್ನು ಸರಿಪಡಿಸದಿರುವುದು ಈ ದುರಂತಗಳಿಗೆ ಕಾರಣ. ಆಲ್ದೂರು ಸಮೀಪ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಇತ್ತೀಚೆಗೆ ಕಾಡಾನೆಯೊಂದು ಮೃತಪಟ್ಟಿತು. ಮೆಸ್ಕಾಂ ಮೂವರು ಎಂಜಿನಿಯರ್‌ಗಳ ವಿರುದ್ಧ ಪ್ರಕರಣವೂ ದಾಖಲಾಯಿತು. ಜೋತು ಬಿದ್ದ ವಿದ್ಯುತ್ ತಂತಿಗಳು ಕಂಟಕವಾಗಿ ಕಾಡುತ್ತಿದ್ದು ಸರಿಪಡಿಸದ ಮೆಸ್ಕಾಂ ವಿರುದ್ಧ ಕಠಿಣ ಕ್ರಮ ಆಗಬೇಕು ಎಂಬುದು ಜನರ ಒತ್ತಾಯ.
ಹಾನಿಗೆ ನೀಡಿದ ಪರಿಹಾರ ಎಷ್ಟು
ಚಿಕ್ಕಮಗಳೂರು ವಿಭಾಗದಲ್ಲಿ ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ₹9.37 ಕೋಟಿ ಮೌಲ್ಯದ ಬೆಳೆಹಾನಿ ಸೇರಿ ಒಟ್ಟು ₹11.80 ಕೋಟಿ ಪರಿಹಾರ ವಿತರಣೆಯಾಗಿದೆ. ಪ್ರಸಕ್ತ ಸಾಲಿನಲ್ಲೂ ₹1.56 ಕೋಟಿ ಪರಿಹಾರ ವಿತರಿಸಿದೆ. ಕೊಪ್ಪ ವಿಭಾಗದಲ್ಲಿ ಐದು ವರ್ಷಗಳ ಅವಧಿಯಲ್ಲಿ ₹2.42 ಕೋಟಿ ಪರಿಹಾರ ವಿತರಣೆಯಾಗಿದ್ದರೆ ತರೀಕೆರೆ ವಲಯ ವ್ಯಾಪ್ತಿಯಲ್ಲಿ ₹70.20 ಲಕ್ಷ ಪರಿಹಾರ ನೀಡಲಾಗಿದೆ. ಇದರಲ್ಲಿ ಬಹುತೇಕ ಪರಿಹಾರ ಮೊತ್ತ ಬೆಳೆಹಾನಿಗೆ ಸಂಬಂಧಿಸಿದೆ. ಕಾಡಿನಿಂದ ನಾಡಿಗೆ ಬರುವ ಆನೆಗಳಿಂದ ಆಗುವ ಬೆಳೆಹಾನಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅರಣ್ಯ ಇಲಾಖೆಗೆ ಇದು ದುಬಾರಿ ಎನಿಸುತ್ತಿದೆ. ಆದರೆ ರೈತರಿಗೆ ಆಗುತ್ತಿರುವ ನಷ್ಟ ಗಮನಿಸಿದರೆ ದೊರಕುವ ಬೆಳೆ ಪರಿಹಾರಕ್ಕಿಂತ ನಾಲ್ಕು ಪಟ್ಟು ಹೆಚ್ಚು. ‘ಮೂಡಿಗೆರೆ ತಾಲ್ಲೂಕಿನ ಹಲವೆಡೆ ರೈತರು ಬೆಳೆ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಇದಕ್ಕೆ ಸರ್ಕಾರ ಎಷ್ಟು ಪರಿಹಾರ ಕೊಡಬೇಕು ಪ್ರಾಣಹಾನಿಗೆ ಬೆಲೆ ಕಟ್ಟಲು ಸಾಧ್ಯವೇ’ ಎಂಬುದು ರೈತರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.