ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ ಈ ಹಿಂದಿನ ತಹಶೀಲ್ದಾರ್ ಜೆ.ಉಮೇಶ್ ಅವರನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.
ಕಿರಿಯ ಶ್ರೇಣಿ ಕೆಎಎಸ್ ಆಧಿಕಾರಿ ಆಗಿರುವ ಜೆ.ಉಮೇಶ್, ಸದ್ಯ ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆಯ ಭೂಸ್ವಾಧೀನಾಧಿಕಾರಿಯಾಗಿದ್ದಾರೆ.
ಕಡೂರು ತಾಲ್ಲೂಕಿನ ಉಳ್ಳಿನಾಗರು ಗ್ರಾಮದ ಸರ್ವೆ ನಂಬರ್ 43ರಲ್ಲಿ 5 ಎಕರೆ 4 ಗುಂಟೆ ಸರ್ಕಾರಿ ಜಮೀನನ್ನು ಹನುಮಂತಯ್ಯ ಬಿನ್ ಚಿಕ್ಕಣ್ಣ ಎಂಬುವರ ಹೆಸರಿಗೆ ಖಾತೆ ದಾಖಲಿಸಿ ನಂತರ ಪೌತಿ ಖಾತೆ, ದಾನಪತ್ರ, ಕ್ರಯಪತ್ರ ಮಾಡಲಾಗಿದೆ. ಇದು ನಿಯಮ ಬಾಹಿರವಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸೂಚಿಸಿದ್ದರು.
ಅದರ ಅನ್ವಯ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವರು ಆ.12ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿರಸ್ತೆದಾರ್ ನಂಜುಂಡಯ್ಯ, ಕಂದಾಯ ನಿರೀಕ್ಷಕ ಕಿರಣ್‌ಕುಮಾರ್ ಅವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಜೆ.ಉಮೇಶ್ ಅವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಕಡೂರಿಗೆ ಕರೆತಂದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.