ADVERTISEMENT

ಕಳಸ | ಆಮದು ಹೆಚ್ಚಳ: ಕಾಳುಮೆಣಸಿನ ಬೆಲೆ ಕುಸಿತ

ಶ್ರೀಲಂಕಾದಿಂದ ಭಾರತ ಮಾರುಕಟ್ಟೆಗೆ ಕಡಿಮೆ ಗುಣಮಟ್ಟದ ಮೆಣಸು

ರವಿ ಕೆಳಂಗಡಿ
Published 30 ಆಗಸ್ಟ್ 2024, 5:20 IST
Last Updated 30 ಆಗಸ್ಟ್ 2024, 5:20 IST
ಹವಾಮಾನ ವೈಪರೀತ್ಯದಿಂದ ಈ ಬಾರಿ ಕಾಳುಮೆಣಸಿನ ಬಳ್ಳಿಯಲ್ಲಿ ಕಾಳುಕಟ್ಟುವುದು ಕಡಿಮೆಯಾಗಿದೆ
ಹವಾಮಾನ ವೈಪರೀತ್ಯದಿಂದ ಈ ಬಾರಿ ಕಾಳುಮೆಣಸಿನ ಬಳ್ಳಿಯಲ್ಲಿ ಕಾಳುಕಟ್ಟುವುದು ಕಡಿಮೆಯಾಗಿದೆ   

ಕಳಸ: ಎರಡು ತಿಂಗಳ ಹಿಂದಷ್ಟೇ ಕೆ.ಜಿಗೆ ₹700 ತಲುಪಿದ್ದ ಕಾಳುಮೆಣಸಿನ ಧಾರಣೆ, ಇದೀಗ ದಿನೇ ದಿನೇ ಕುಸಿಯುತ್ತಿದ್ದು ಸದ್ಯ ₹635ಕ್ಕೆ ಇಳಿದಿದೆ.

‘ಜುಲೈನಲ್ಲಿ  5,085 ಟನ್‌ನಷ್ಟು ಕಾಳುಮೆಣಸು ಆಮದಾಗಿದೆ. ಅದರಲ್ಲಿ 4,400 ಟನ್‌ನಷ್ಟು ಶ್ರೀಲಂಕಾದಿಂದ ಭಾರತದ ಮಾರುಕಟ್ಟೆಗೆ ಬಂದಿದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಆಮದು ಕಾಳು ಮೆಣಸು ವ್ಯಾಪಾರ ಹೆಚ್ಚಾಗಿ ಆಗುತ್ತಿದೆ. ಇದರ ಗುಣಮಟ್ಟ ಕಡಿಮೆ, ಸಾಂದ್ರತೆ ಕೊರತೆ, ಹೆಚ್ಚಿನ ತೇವಾಂಶ ಹೊಂದಿರುವುದರಿಂದ ಬೆಲೆಯೂ ಕಡಿಮೆ ಇದೆ’ ಎಂಬುದು ಮೂಲಗಳ ಮಾಹಿತಿ.

ಭಾರತದ ಕಾಳು ಮೆಣಸು ಉತ್ಕೃಷ್ಟ ಗುಣಮಟ್ಟ ಹೊಂದಿದ್ದು, ಅತ್ಯುತ್ತಮ ಧಾರಣೆಯನ್ನು ಬೆಳೆಗಾರರು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ, ಅಗ್ಗದ ಆಮದು ಕಾಳುಮೆಣಸಿನ ಹಾವಳಿಯಿಂದ ದೇಸಿ ಕಾಳು ಮೆಣಸಿನ ಮಾರಾಟ ಕಡಿಮೆ ಆಗಿದೆ. ಇತ್ತ 2 ತಿಂಗಳ ಹಿಂದೆ ಕೆ.ಜಿಗೆ ₹700 ದರದಲ್ಲಿ ದೊಡ್ಡ ಪ್ರಮಾಣದಲ್ಲಿ ಖರೀದಿಸಿ ದಾಸ್ತಾನು ಮಾಡಿಟ್ಟಿರುವ ವ್ಯಾಪಾರಿಗಳು ಕೂಡ ನಿರೀಕ್ಷಿಸಿದಷ್ಟು ಬೆಲೆ ಸಿಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

ADVERTISEMENT

‘ಕಳೆದ ಬೇಸಿಗೆಯಲ್ಲಿ ಗರಿಷ್ಠ  ತಾಪಮಾನ ಮತ್ತು ಮುಂಗಾರಿನಲ್ಲಿ ಧಾರಾಕಾರ ಮಳೆಯಿಂದಾಗಿ ಕಾಳುಮೆಣಸಿನ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಹಾಗಾಗಿ ಈ ವರ್ಷ ಫಸಲು ಇತ್ತೀಚಿನ ವರ್ಷಗಳಲ್ಲೇ ಕನಿಷ್ಠ ಪ್ರಮಾಣದಲ್ಲಿದೆ. ಬೆಳೆ ಕಡಿಮೆ ಇರುವುದರಿಂದ ಧಾರಣೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಆಮದು ಹಾವಳಿ ಕಾರಣಕ್ಕೆ ನಮ್ಮ ದೇಸಿ ಕಾಳುಮೆಣಸಿನ ಬೆಲೆ ಏರುವುದು ಅನುಮಾನ' ಎಂದು ಕಾಳುಮೆಣಸು ಕೃಷಿಕ ಲಿಂಬೆಕೊಂಡ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಬೆಲೆ ಏರಿಕೆ ಸಾಧ್ಯತೆ: ಗಣಪತಿ ಹಬ್ಬದ ನಂತರ ಸಾಲು ಸಾಲು ಹಬ್ಬಗಳ ಕಾರಣಕ್ಕೆ ಉತ್ತರ ಭಾರತದಲ್ಲಿ ಕಾಳುಮೆಣಸಿಗೆ ಬೇಡಿಕೆ ಹೆಚ್ಚಿ ಧಾರಣೆ ಏರಬಹುದು ಎಂದು ನಿರೀಕ್ಷೆ ಇದೆ. ಅಲ್ಲಿಯವರೆಗೆ ಮಾರಾಟ ಮಾಡದೆ ಕಾದು ನೋಡಲು ಬೆಳೆಗಾರರು ಮತ್ತು ದಾಸ್ತಾನುದಾರರು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.