ತರೀಕೆರೆ: ತಾಲ್ಲೂಕಿನ ಬಾವಿಕೆರೆಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಪಡೆದ 150ಕ್ಕೂ ಹೆಚ್ಚು ರೈತರ ಮೂಲ ಕಡತಗಳು ಇಲ್ಲದಿರುವುದು ಮತ್ತು ಕಳೆದ ಒಂದು ವರ್ಷದಿಂದ ಸಾಲ ನೀಡದಿರುವುದನ್ನು ಖಂಡಿಸಿ ಗ್ರಾಮದ ರೈತರು ಮತ್ತು ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಸಹಕಾರ ಸಂಘದಲ್ಲಿ 2,500 ಷೇರುದಾರರಿದ್ದು, ಜಮೀನಿನ ಎಲ್ಲಾ ಮೂಲ ದಾಖಲೆಗಳನ್ನು ನೀಡಿ ಸಾಲ ಪಡೆದುಕೊಂಡಿರುತ್ತೇವೆ. ಸಾಲ ತೀರುವಳಿಯಾದ ನಂತರ ದಾಖಲೆಗಳನ್ನು ಕೇಳಿದಾಗ ನಮ್ಮಲ್ಲಿ ಯಾವುದೇ ದಾಖಲೆಗಳು ಇಲ್ಲವೆಂದು ಹೇಳುತ್ತಿದ್ದಾರೆ. ಅಲ್ಲದೇ ಕೆಲವರಿಗೆ ಸುಳ್ಳು ದಾಖಲೆಗಳನ್ನು ಪಡೆದು ಸಾಲ ಮಂಜೂರು ಮಾಡಿರುತ್ತಾರೆಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಷೇರುದಾರರು ಈ ಸಂಘದಲ್ಲಿ ಮೂಲ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದಿದ್ದು, ನಂತರ ಸಾಲ ತೀರಿಸಿ ಮೂಲ ದಾಖಲೆಗಳನ್ನು ಸಂಪೂರ್ಣ ನಾಶಮಾಡಿ, ಇವರ ಜಮೀನುಗಳನ್ನು ಸಹ ಕಬಳಿಸಿಕೊಂಡಿದ್ದಾರೆಂದು’ ಷೇರುದಾರ ರಾಜು ಹೇಳಿದರು.
ಸಂಘದ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಚಿನ್ನಪ್ಪ, ಮಾಜಿ ಉಪಾಧ್ಯಕ್ಷ ಸುರೇಶ್, ಸದಸ್ಯರಾದ ಪುಟ್ಟಸ್ವಾಮಿ, ವಿಜಯಕುಮಾರ್, ರಾಜಪ್ಪ, ರಾಜೇಗೌಡರು ಸೇನೆಗೌಡ್ರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.