ಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೋರಾಟಗಾರರ ಪಾತ್ರ ದೊಡ್ಡದು. ಜಿಲ್ಲೆಯ ಮಲೆನಾಡು ಮತ್ತು ಬಯಲುಸೀಮೆ ಎರಡೂ ಭಾಗದವರೂ ಹೋರಾಟಕ್ಕೆ ಧುಮುಕಿ ದೆಶಭಕ್ತಿ ಮೆರೆದಿದ್ದಾರೆ.
ಸ್ವಾತಂತ್ರ್ಯ ಚಳವಳಿಯಲ್ಲಿ ಕಡೂರು ತಾಲ್ಲೂಕಿನ ಅಜ್ಜಂಪುರದ ಹೆಸರು ಮರೆಯುವಂತಿಲ್ಲ. ಇಲ್ಲಿಗೆ ಸಮೀಪ ಚನ್ನಾಪುರ ಬಳಿ ‘ವಿಜಯ ಮೈದಾನ’ದಲ್ಲಿ ನಡೆದಿದ್ದ ಸಮಾವೇಶ ಸ್ವಾತಂತ್ರ್ಯ ಹೋರಾಟದ ಇತಿಹಾಸ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.
‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟ ಪ್ರಬಲವಾಗಿದ್ದ ಕಾಲಘಟ್ಟ ಅಧು. ಅಜ್ಜಂಪುರದಲ್ಲಿ ಕಾಂಗ್ರೆಸ್ ಸಭೆ ನಡೆಸಲು ತೀರ್ಮಾನವಾಗುತ್ತದೆ. ಅಜ್ಜಂಪುರ ಮತ್ತು ಸುತ್ತಮುತ್ತ ಸಭೆ ನಡೆಸದಂತೆ ಅಧಿಕಾರಿಗಳು ನಿರ್ಬಂಧಿಸುತ್ತಾರೆ. ಆದರೆ, ಇದಾವುದಕ್ಕೂ ಜಗ್ಗದೆ ಹೋರಾಟಗಾರರು ಅಜ್ಜಂಪುರ ಸಮೀಪದ ಚನ್ನಾಪುರದ ಹೊಲದಲ್ಲಿ ಸಭೆ ನಡೆಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅಜ್ಜಂಪುರದ ಸುಬ್ರಮಣ್ಯ ಶೆಟ್ಟರು, ಏಕೋ ರಾಮಸ್ವಾಮಿ, ಕೃಷ್ಣೋಜಿರಾವ್ ಚೌವ್ಹಾಣ್, ಭೀಮಯ್ಯ, ಜಿ.ತಿಮ್ಮಯ್ಯ, ನಾಗಣ್ಣ, ಹನುಮಂತಪ್ಪ ಹೀಗೆ ಹಲವು ನಾಯಕರು ಮುಂಚೂಣಿಯಲ್ಲಿದ್ದರು.
ಮರುಳಪ್ಪ - ಪಾಪಮ್ಮ ದಂಪತಿಯ ನಾಲ್ವರು ಪುತ್ರರಲ್ಲಿ ಏಕೋ ರಾಮಸ್ವಾಮಿ ಕಿರಿಯವರು. ಶಾಲಾ ದಿನಗಳಲ್ಲಿಯೇ ಅವರು ಹೋರಾಟಕ್ಕೆ ಧುಮುಕುತ್ತಾರೆ. ಹೋರಾಟ ವೇಳೆ, ಪೊಲೀಸರು ಲಾಠಿಯಿಂದ ಬಾರಿಸುವುದು, ವಶಕ್ಕೆ ಪಡೆಯುವುದು, ಜೈಲಿಗೆ ಕಳಿಸುವುದು ಸಾಮಾನ್ಯವಾಗಿತ್ತು. ಇದಾವುದಕ್ಕೂ ಬಗ್ಗದೆ ಹೋರಾಟ ಮುಂದುವರಿಸಿದ್ದರು. ಸಾಗರ, ಚಿಕ್ಕಮಗಳೂರು ಜೈಲುಗಳಲ್ಲೂ ಸೆರೆವಾಸ ಅನುಭವಿಸಿದ್ದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಸಿ.ಎಂ. ಸದಾಶಿವಶಾಸ್ತ್ರಿ ಅವರ ಹೆಸರನ್ನೂ ಮರೆಯುವಂತಿಲ್ಲ. ಸಂಸ್ಕೃತ ಕಲಿಯಲು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಂಸ್ಕೃತ ಶಾಲೆಗೆ 1921ರಲ್ಲಿ ಸೇರುತ್ತಾರೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸ್ವಾಂತ್ರ್ಯ ಚಳವಳಿಯ ಸೆಳೆತಕ್ಕೆ ಒಳಗಾಗುತ್ತಾರೆ. ಮೈಸೂರು ಬ್ಯಾಂಕ್ ಪಿಕೆಟಿಂಗ್ ನಡೆಸಿದ ಸಂದರ್ಭದಲ್ಲಿ ಪೊಲೀಸರಿಂದ ಲಾಠಿ ರುಚಿಯನ್ನು ಕಂಡಿದ್ದರು. ಜೈಲಿನಲ್ಲಿದ್ದಾಗ ಹಿರಿಯ ಹೋರಾಟಗಾರರ ಪರಿಚಯ ಮಾಡಿಕೊಳ್ಳುತ್ತಾರೆ. ಹೊರ ಬಂದ ಬಳಿಕ ಹಲವು ಹೋರಾಟಗಳಲ್ಲಿ ಭಾಗವಹಿಸುತ್ತಾರೆ.
ಸ್ವಾತಂತ್ರ್ಯದ ಬಳಿಕ ಪಿಎಸ್‍ಪಿ ಮೂಲಕ ರಾಜಕಾರಣದಲ್ಲಿ ತೊಡಗುತ್ತಾರೆ. ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಗೆಲುವಿನ ರೂವಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಮಲೆನಾಡು ವಿದ್ಯಾಸಂಸ್ಥೆ ಸ್ಥಾಪಿಸಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸುತ್ತಾರೆ.
ಸ್ವಾತಂತ್ರ್ಯ ಹೋರಾಟಗಾರರ ಜತೆ ಹೆಜ್ಜೆ ಹಾಕಿದ ಸಿ.ಆರ್.ಶಿವಾನಂದ ಅವರು ವಿದೇಶಿ ವಸ್ತುಗಳನ್ನು ತಿರಸ್ಕರಿಸಿದವರು. ಸಾರಾಯಿ ವಿರೋಧಿ ಚಳವಳಿಯಲ್ಲಿ ತೊಡಗಿಸಿಕೊಂಡವರು. ಅಪ್ಪಟ ಗಾಂಧಿವಾದಿಯಾಗಿ ಜೀವನ ನಡೆಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸುತ್ತಾರೆ. ಜೈಲಿನಲ್ಲೂ ಸತ್ಯಾಗ್ರಹ ಮಾಡುತ್ತಾರೆ. ಸ್ವಾತಂತ್ರ್ಯ ನಂತರವೂ ಮೈಸೂರು ಸಂಸ್ಥಾನ ಗಣರಾಜ್ಯದೊಂದಿಗೆ ಸೇರ್ಪಡೆಯಾಗಬೇಕು ಎಂಬ ಹೋರಾಟದ ಮುಂಚೂಣಿ ವಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.