ಕಳಸ:ನೆದರ್ಲ್ಯಾಂಡ್ಸ್‌ನಲ್ಲಿ ಪಿಎಚ್‍ಡಿ ಅಧ್ಯಯನ ಮಾಡುತ್ತಿರುವ ಕಳಸದ ಯುವಕ ಆಶ್ರಿತ್ ಜೈನ್ ಕಳೆದ ವಾರ ಇಟಲಿಯಿಂದ ನೆದರ್ಲ್ಯಾಂಡ್‌ವರೆಗೆ ಸೈಕಲ್ ಯಾತ್ರೆ ಮುಗಿಸಿದರು.
ಅಲ್ಲಿನ ಯೂನಿವರ್ಸಿಟಿ ಆಫ್ ಟ್ವೆಂಟಿಯಲ್ಲಿ ಅಧ್ಯಯನ ಮಾಡುತ್ತಿರುವ ಆಶ್ರಿತ್ ಗೆಳೆಯರ ಜೊತೆಗೂಡಿ ಸತತ 8 ದಿನಗಳ ಕಾಲ ಒಟ್ಟು 1300 ಕಿ.ಮೀ ದೂರ ಸೈಕಲ್ ತುಳಿದರು.
ಕ್ಯಾನ್ಸರ್ ಸಂಶೋಧನೆಗೆ ಧನ ಸಂಗ್ರಹ ಮಾಡಲು ಈ ಸೈಕಲ್ ಯಾತ್ರೆ ಆಯೋಜಿಸಲಾಗಿತ್ತು. ಆಶ್ರಿತ್ ತಾವೊಬ್ಬರೇ ₹ 2.15 ಲಕ್ಷವನ್ನು ದಾನಿಗಳಿಂದ ಸಂಗ್ರಹಿಸಿದ್ದರು. ಅವರ ಜೊತೆಗೆ ಇದ್ದ ಒಟ್ಟು 200 ಸೈಕಲ್ ಸವಾರರು ಒಟ್ಟು ₹9 ಕೋಟಿ ಸಂಗ್ರಹಿಸಿದ್ದರು. 20 ಸಾವಿರ ಅಡಿ ಎತ್ತರದ ಪ್ರದೇಶದಲ್ಲೂ ಸೈಕಲ್ ಯಾತ್ರೆ ಸಾಗಿದ್ದು ವಿಶೇಷವಾಗಿತ್ತು.
‘ಕ್ಯಾನ್ಸರ್ ರೋಗದ ಸಂಶೋಧನೆಗೆ ನೆರವು ನೀಡುವಲ್ಲಿ ನಾವು ಗೆಳೆಯರು ಕೂಡಿ ಮಾಡಿದ ಸಣ್ಣ ಪ್ರಯತ್ನದ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಹೇಳಿಕೊಂಡಿದ್ದಾರೆ ಆಶ್ರಿತ್ ಜೈನ್.
ಕಳಸದ ಜೈನ ಬಸದಿಯ ಬಳಿಯ ನಿವಾಸಿ ವೀಣಾ ಅವರ ಪುತ್ರನಾದ ಆಶ್ರಿತ್ ಜೈನ್ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮುಗಿಸಿದ ನಂತರ ನೆದರ್ಲ್ಯಾಂಡ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಆನಂತರ ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಅಲ್ಲೇ ಪಿಎಚ್‍ಡಿ ಕೂಡ ಅಧ್ಯಯನ ಮಾಡುತ್ತಿದ್ದಾರೆ.
ಉನ್ನತ ಶಿಕ್ಷಣದ ಜೊತೆಜೊತೆಗೆ ಇಂತಹ ಸಮಾಜ ಮುಖಿ ಚಟುವಟಿಕೆಯಲ್ಲಿ ತೊಡಗುವಲ್ಲಿ ತನ್ನ ಕುಟುಂಬದ ಬೆಂಬಲವನ್ನು ಆಶ್ರಿತ್ ಸದಾ ಸ್ಮರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.