ಕಡೂರು: ಸೋಲು- ಗೆಲುವನ್ನು ಸಮನಾಗಿ ಸ್ವೀಕರಿಸಿ, ನಿರಂತರವಾಗಿ ಜನರ ಮಧ್ಯೆ ಇದ್ದರೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನಗಳು ದೊರೆಯುವು ದರಲ್ಲಿ ಸಂಶಯವಿಲ್ಲ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಮಚ್ಚೇರಿಯ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಶನಿವಾರ ನಡೆದ ‘ಜನಸೇವಕ ಸಮಾವೇಶ’ದಲ್ಲಿ ಅವರು ಮಾತನಾಡಿದರು.
‘ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿರು ವುದು ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ. ಪ್ರಧಾನಿ ಮೋದಿಯವರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯಕ್ರಮಗಳು ಗ್ರಾಮ ಗ್ರಾಮ ಗಳಿಗೂ ತಲುಪುತ್ತಿವೆ. ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಜನರ ಸಮಸ್ಯೆಗಳ ಧ್ವನಿಯಾಗಬೇಕಿದೆ. ಸರ್ಕಾರ ನಮ್ಮ ಕ್ಷೇತ್ರಕ್ಕೆ ಏನು ಮಾಡಿದೆ ಎಂಬುದನ್ನು ಜನತೆಗೆ ತಿಳಿಸಬೇಕಿದೆ. ತಾಲ್ಲೂಕಿನಲ್ಲಿ 29 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಸ್ಪಷ್ಟ ಬಹುಮತ ಗಳಿಸಿದ್ದಾರೆ. ಉಳಿದೆಡೆ ಗೆದ್ದವರೂ ಸೇರಿ 244ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರಿರುವುದು ತಾಲ್ಲೂಕಿನಲ್ಲಿ ಬಿಜೆಪಿ ಬೇರು ಬಿಟ್ಟಿರುವುದಕ್ಕೆ ಸಾಕ್ಷಿ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ‘ಗೆಲುವು ಪಡೆದಾಗ ಹಿಗ್ಗುವ, ಸೋತಾಗ ಕುಗ್ಗುವ ಅವಶ್ಯಕತೆಯಿಲ್ಲ. ನಮ್ಮನ್ನು ನಾವು ತಿದ್ದಿಕೊಳ್ಳುವಂತಹ ಸಮಯವಿದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಬೇಕು. ಇಂದು ನಿಮ್ಮ ಕೆಲಸದ ವೈಖರಿಯೇ ಬರಲಿರುವ ದಿನಗಳಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲು ತಳಹದಿಯಾಗುತ್ತದೆ’ ಎಂದರು.
ಟಿ.ಆರ್.ಲಕ್ಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ಕಲ್ಮರುಡಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಆರ್.ಮಹೇಶ್ ಒಡೆಯರ್, ಕಾವೇರಿ ಲಕ್ಕಪ್ಪ, ಬೀರೂರು ಪುರಸಭಾಧ್ಯಕ್ಷ ಸುದರ್ಶನ್, ಮುಖಂಡರಾದ ಸುನೀತಾ ಜಗದೀಶ್, ಸವಿತಾ ರಮೇಶ್, ದಾನಿ ಉಮೇಶ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎನ್.ಇಮಾಮ್, ವಕ್ತಾರ ಶಾಮಿಯಾನ ಚಂದ್ರು ಇದ್ದರು.
ಮಾಸ್ಕ್ ನಾಪತ್ತೆ: ಸಮಾವೇಶದಲ್ಲಿ ಬೆಳ್ಳಿಪ್ರಕಾಶ್, ಪ್ರಾಣೇಶ್ ಸೇರಿದಂತೆ ವೇದಿಕೆಯಲ್ಲಿದ್ದ ಮತ್ತು ಸೇರಿದ್ದವರಲ್ಲಿ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.