ಚಿಕ್ಕಮಗಳೂರು: ‘ಕಾಂಗ್ರೆಸ್‌ಗೆ ನಾನಾಗಿಯೇ ಬಂದಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಾಸೆಯ ಮೇರೆಗೇ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದೇನೆ. ಬಿಜೆಪಿಗೆ ಹೋದಾಗ ಶುದ್ಧ, ಕಾಂಗ್ರೆಸ್‌ಗೆ ಬಂದ ಕೂಡಲೇ ಅವಕಾಶವಾದಿಯೇ’ ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಮಾಧ್ಯಮ ಸಂವಾದದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಚುನಾವಣೆ ಎದುರಿಸುವ ಭಯದಲ್ಲಿ ಬಿಜೆಪಿ ಮುಖಂಡರು ಈ ರೀತಿಯ ಆರೋಪ ಮಾಡುತ್ತಿದ್ದಾರೆ’ ಎಂದರು.
‘ನನ್ನ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಂಬಂಧ ರಾಜಕೀಯವನ್ನು ಮೀರಿದ್ದು. ನಾನು ಗೆದ್ದಾಗ ಮಾಡಿದ ಕೆಲಸವನ್ನು ಸೋತಾಗಲು ಮಾಡಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಈ ಆರೋಪ ಮಾಡುತ್ತಿಲ್ಲ. ನಮಗೆ ತೊಂದರೆಯಾಗುತ್ತದೆ ಎಂಬ ಭಯದಿಂದ ವಿರೋಧ ಪಕ್ಷದ ಕೆಲವರು ಮಾತ್ರ ಅವಕಾಶವಾದಿ ಎಂಬ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ತನ್ನ ಪಕ್ಷಕ್ಕೆ ಸೆಳೆಯುವಲ್ಲಿ ಯಾರನ್ನೂ ಬಿಟ್ಟಿಲ್ಲ’ ಎಂದು ಲೇವಡಿ ಮಾಡಿದರು.
‘ಎರಡು ವರ್ಷದ ಅವಗೆ ನಾನು ಸಂಸದನಾದ ವೇಳೆ ಜಾರಿಯಾದ ಯೋಜನೆಗಳು 10 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಅಡಕೆ ಸಮಸ್ಯೆ ಕುರಿತು ನಾವು ಕೇಂದ್ರ ಸಚಿವರನ್ನು ಭೇಟಿ ಮಾಡಿದ ನಂತರ ಸರ್ಕಾರ ಗೋರಕ್ ಸಿಂಗ್ ಸಮಿತಿ ರಚಸಿತು. ಸಮಿತಿ ವರದಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿತು. 10 ವರ್ಷವಾದರೂ ವರದಿ ಜಾರಿಯಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆಯಲ್ಲಿ ರೈಲು ನಿಲ್ದಾಣ ಆರಂಭಿಸಿ, ರೈಲು ಸಂಪರ್ಕದ ವ್ಯವಸ್ಥೆ ಮಾಡಲಾಗಿತ್ತು. ಆದಾದ ಬಳಿಕ ಹೊಸ ರೈಲುಗಳ ಓಡಾಟ ಆರಂಭವಾಗಿಲ್ಲ ಎಂದರು.
ತುಮಕೂರು-ಶಿವಮೊಗ್ಗ, ಕಡೂರು-ಮೂಡಿಗೆರೆ, ಶಿವಮೊಗ್ಗ-ಮಲ್ಪೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕಾಂಗ್ರೆಸ್ ಅವಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಅನುಮೋದನೆ ಸಿಕ್ಕಿತ್ತು. 10 ವರ್ಷವಾದರೂ ಈವರೆಗೆ ಕಾಮಗಾರಿ ಮುಕ್ತಾಯವಾಗಿಲ್ಲ. ಸಂಸದರು ಕೇಂದ್ರ ಸ್ಥಾನದಲ್ಲಿರುವುದು ಮುಖ್ಯವಲ್ಲ. ಆಯ್ಕೆ ಮಾಡಿದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಮುಖ್ಯ ಎಂದು ಹೇಳಿದರು.
ಪರಿಸರ ಪೂರಕ ಪ್ರವಾಸೋದ್ಯಮ ಅಭಿವೃದ್ಧಿ, ವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಅನುದಾನ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್, ಶಾಸಕರಾದ ಎಚ್.ಡಿ ತಮ್ಮಯ್ಯ, ಟಿ.ಡಿ ರಾಜೇಗೌಡ, ಜಿ.ಎಚ್ ಶ್ರೀನಿವಾಸ್, ನಯನಾ ಮೋಟಮ್ಮ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ರಾಜ್ಯ ಕೃಷಿ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್ ಹರೀಶ್, ರವೀಶ್ ಕ್ಯಾತನಬೀಡು, ಶಿವಾನಂದಸ್ವಾಮಿ, ರೂಬಿನ್ ಮೊಸೆಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.