ADVERTISEMENT

ಬರಗಾಲ ಬಂದರೂ ವಿದ್ಯುತ್ ನೀಡಲು ತೊಂದರೆಯಾಗದು: ಕೆ.ಜೆ.ಜಾರ್ಜ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 14:05 IST
Last Updated 1 ಜುಲೈ 2023, 14:05 IST
ಕೆ.ಜೆ.ಜಾರ್ಜ್‌
ಕೆ.ಜೆ.ಜಾರ್ಜ್‌   

ಚಿಕ್ಕಮಗಳೂರು: ‘ಬರಗಾಲ ಬಂದರೂ ಉಚಿತ ವಿದ್ಯುತ್ ನೀಡಲು ತೊಂದರೆ ಎದುರಾಗುವುದಿಲ್ಲ. ಬೇರೆ ಮೂಲಗಳಿಂದಲೂ ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು.

‘ಮಳೆ ಬಂದು ಜಲಾಶಯಗಳು ಭರ್ತಿಯಾಗುವ ಬಗ್ಗೆ ಈಗಲೂ ನಮಗೆ ಆಶಾಭಾವ ಇದೆ. ಒಂದು ವೇಳೆ ಮಳೆ ಬಾರದಿದ್ದರೂ ಜಲ ವಿದ್ಯುತ್ ಉದ್ಪಾದನೆಗೆ ಮಾತ್ರ ತೊಂದರೆಯಾಗಲಿದೆ. ಪವನ ವಿದ್ಯುತ್ ಘಟಕ, ಥರ್ಮಲ್ ವಿದ್ಯುತ್ ಸ್ಥಾವರ, ಸೌರ ವಿದ್ಯುತ್ ಘಟಕಗಳಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದ್ದರಿಂದ ಭಯಪಡುವ ಅಗತ್ಯವಿಲ್ಲ’ ಎಂದು ಶನಿವಾರ ಸುದ್ದಿಗಾರರಿಗೆ ಹೇಳಿದರು.

ಗೃಹ ಜ್ಯೋತಿ ಯೋಜನೆಗೆ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅರ್ಜಿ ಸಲ್ಲಿಸದವರು ಕೂಡಲೇ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ADVERTISEMENT

‘ಜುಲೈ 1ರಿಂದ ಎಲ್ಲರಿಗೂ ಉಚಿತ ವಿದ್ಯುತ್ ನೀಡಲಾಗುವುದು. ಈ ತಿಂಗಳು ಕೊನೆಗೆ ಎಲ್ಲರಿಗೂ ಬಿಲ್ ಬರುತ್ತದೆ. ಅರ್ಜಿ ಸಲ್ಲಿಸಲು ಜುಲೈ ಅಂತ್ಯದ ತನಕ ಅವಕಾಶ ಇದ್ದು, ಅರ್ಹರು ಆಗಸ್ಟ್‌ನಿಂದ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ’ ಎಂದು ತಿಳಿಸಿದರು.

‘ಅರ್ಜಿ ಹಾಕದವರು ಬೇಗ ಹಾಕಬೇಕು. ಕೆಪಿಟಿಸಿಎಲ್ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಈಗ ಅಷ್ಟು ಸಮಸ್ಯೆ ಇಲ್ಲ, ಒತ್ತಡ ಕಡಿಮೆ ಆಗಿದೆ. ಅರ್ಜಿ ಹಾಕದವರಿಗೆ ಉಚಿತ ವಿದ್ಯುತ್ ಸಿಗುವುದಿಲ್ಲ. ಅರ್ಜಿ ಹಾಕುವುದು ತಡವಾದರೆ ಸೌಲಭ್ಯ ಸಿಗುವುದು ತಡವಾಗುತ್ತದೆ’ ಎಂದರು.

ಸ್ವತಂತ್ರವಾಗಿ ವಿದ್ಯುತ್ ಉತ್ಪಾದನೆ

‘ವಿದ್ಯುತ್ ಸಂಪರ್ಕದ ಸಮಸ್ಯೆ ಎದುರಿಸುತ್ತಿರುವ ಮಲೆನಾಡಿನ ಹಳ್ಳಿಗಳು ಸ್ವತಂತ್ರವಾಗಿ ವಿದ್ಯುತ್ ಉದ್ಪಾದನೆ ಮಾಡಿಕೊಳ್ಳಲು ನೆರವಾಗಲು ಹೊಸ ನೀತಿ ರೂಪಿಸಲು ಚಿಂತಿಸಲಾಗಿದೆ’ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

'ಸೌರ ವಿದ್ಯುತ್ ಪವನ ವಿದ್ಯುತ್ ಮಲೆನಾಡಿನಲ್ಲಿ ಹರಿಯುವ ತೊರೆಗಳಿಂದ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಅವಕಾಶ ಇದೆ. ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಮೂಲಕ ಚಿಕ್ಕಮಗಳೂರಿನಲ್ಲೇ ಮೊದಲ ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ. ಶಿವಮೊಗ್ಗ ಸೇರಿ ಮಲೆನಾಡು ಭಾಗದ ಹಳ್ಳಿಗಳನ್ನು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಯೋಚಿಸಲಾಗಿದೆ ಎಂದರು. ‘ರೈತರಿಗೆ ₹16 ಸಾವಿರ ಕೋಟಿ ವಿದ್ಯುತ್ ಸಬ್ಸಿಡಿ ನೀಡಲಾಗುತ್ತಿದೆ. ಅವರೇ ಸ್ವತಂತ್ರವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.