ಕಡೂರು: ಇಲ್ಲಿನ ಛತ್ರದ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾದೇವಿ ಜನಾಕರ್ಷಣೆಯ ಕೇಂದ್ರವಾಗಿದೆ.
ಶ್ರೀದುರ್ಗಾ ಸೇವಾ ಸಮಿತಿಯ ಮೂಲಕ 2ನೇ ವರ್ಷದ ದುರ್ಗಿ ಉತ್ಸವ ಇದಾಗಿದ್ದು, ಪ್ರತಿ ವರ್ಷವೂ ಅಜ್ಜಂಪುರದ ಶಿಲ್ಪಿ ದಿವಾಕರ್ ದುರ್ಗಾದೇವಿ ಪ್ರತಿಮೆ ನಿರ್ಮಿಸುತ್ತಾರೆ. ಈ ವರ್ಷ 6ಅಡಿ ಎತ್ತರದ ಸಿಂಹವಾಹಿನಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದ್ದು, ಒಂಬತ್ತನೇ ವರ್ಷ ನವದುರ್ಗಿಯರ ವಿಗ್ರಹ ಪ್ರತಿಷ್ಠಾಪನೆ ಸಂಕಲ್ಪ ಸಮಿತಿಯದ್ದಾಗಿದೆ.
ಒಂಬತ್ತು ದಿನವೂ ವಿಶೇಷ ಪೂಜೆ, ದುರ್ಗಾ ಸಪ್ತಶತಿ ಪಾರಾಯಣ ನಡೆಯುವುದರ ಜೊತೆ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ಮಾಡಲಾಗುತ್ತದೆ. ಮಹಿಳೆಯರು ಸ್ವಯಂ ದೇವಿಗೆ ಕುಂಕುಮಾರ್ಚನೆ ಮಾಡುವ ಅವಕಾಶ ನೀಡಲಾಗಿದ್ದು, ಮಹಿಳೆಯರಿಗೆ ಮಡಿಲಕ್ಕಿ ನೀಡಲಾಗಿತ್ತು.
ಪ್ರತಿನಿತ್ಯ ಅನ್ನದಾಸೋಹ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ಭರತನಾಟ್ಯ, ಸಂಗೀತ, ಭಜನೆ ಮುಂತಾದ ದೇಶೀಯ ಸಂಸ್ಕೃತಿ ಬಿಂಬಿಸುವ ಕಲಾಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದೆ.
ವಿಜಯದಶಮಿಯಂದು ದೇವಿ ವಿಗ್ರಹವನ್ನು ಕಲಾತಂಡಗಳೊಂದಿಗೆ ಕರೆದೊಯ್ದು ಶಮೀಪೂಜೆ ನೆರವೇರಿಸಿದ ನಂತರ, ಹೊಸ ಹಳ್ಳಿ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಅದಕ್ಕೂ ಮುನ್ನ ದೇವಿಯ ಬೆಳ್ಳಿ ಬಾವುಟದ ಹರಾಜು ನಡೆಯುತ್ತದೆ. ಹರಾಜಿನಲ್ಲಿ ಬಾವುಟ ಪಡೆದವರು ಒಂದು ವರ್ಷ ತಮ್ಮ ಮನೆಯಲ್ಲಿ ದೇವಿಪ್ರತೀಕವಾದ ಬಾವುಟ ಪೂಜಿಸುತ್ತಾರೆ.
‘ಭಕ್ತರ ಸಹಕಾರ, ಸಮಿತಿ ಸದಸ್ಯರು ಹಾಗೂ ಸ್ವಯಂ ಸೇವಕರ ಸಮರ್ಪಣಾ ಭಾವದ ಫಲವಾಗಿ ದುರ್ಗಾದೇವಿ ಪ್ರತಿಷ್ಠಾಪನಾ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಮುಂಬರುವ ವರ್ಷಗಳಲ್ಲಿ ನವರಾತ್ರಿ ಉತ್ಸವ ಕಡೂರು ದಸರಾ ಎಂಬ ಖ್ಯಾತಿ ಪಡೆಯಬೇಕೆಂಬ ಸಂಕಲ್ಪ ನಮ್ಮೆಲ್ಲರದ್ದಾಗಿದೆ’ ಎಂದು ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಹೇಳಿದರು.
ಸಮಿತಿಯಲ್ಲಿ ಒಟ್ಟು 20 ಸದಸ್ಯರಿದ್ದು, 50ಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ. ಪ್ರತಿ ಸದಸ್ಯರೂ ಉತ್ಸವದ ಖರ್ಚನ್ನು ಸಮಾನವಾಗಿ ಭರಿಸುತ್ತಾರೆ. ದಾಸೋಹ ಮುಂತಾದವುಗಳಿಗೆ ದಾನಿಗಳು ಸಹಾಯ ನೀಡಿದ್ದಾರೆ. ಒಟ್ಟಾರೆಯಾಗಿ ಪ್ರತಿ ವರ್ಷ ಕಡೂರಿನ ದುರ್ಗಾದೇವಿ ವಿಗ್ರಹ ಜನರಿಗೆ ಭಕ್ತಿ ಭಾವದ ಕೇಂದ್ರವಾಗಿ ಜನರನ್ನು ಆಕರ್ಷಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.