ಕಡೂರು: ಒಂದೆಡೆ ಅಡಿಕೆ ಸಿಪ್ಪೆ ಸುಡಲಾಗುತ್ತಿದ್ದು, ಮತ್ತೊಂದೆಡೆ ಇದ್ದಿಲು ಮಾಡುತ್ತಿರುವುದರಿಂದ ತಾಲ್ಲೂಕಿನಾದ್ಯಂತ ವಾಯುಮಾಲಿನ್ಯ ಹೆಚ್ಚಾಗತೊಡಗಿದೆ ಎಂದು ಜನರು ಆರೋಪಿಸಿದ್ದಾರೆ.
ತಾಲ್ಲೂಕಿನಲ್ಲಿ ಅಡಿಕೆ ಕೊಯಿಲು ಆರಂಭವಾಗಿದ್ದು, ರೈತರು ಸುಲಿದ ಅಡಿಕೆ ಸಿಪ್ಪೆಯನ್ನು ರಸ್ತೆ ಬದಿ ಹಾಗೂ ಕೆರೆಗಳಿಗೆ ಸುರಿಯುತ್ತಾರೆ. ರಸ್ತೆ ಬದಿ ಅಡಿಕೆ ಸಿಪ್ಪೆಗಳಿಗೆ ಬೆಂಕಿ ಹಚ್ಚುತ್ತಿದ್ದು, ಸಿಪ್ಪೆಯ ರಾಶಿ ವಾರಗಟ್ಟಲೆ ಹೊಗೆಯಾಡುತ್ತಿರುತ್ತದೆ. ರಸ್ತೆಬದಿಯಲ್ಲಿ ನಿರಂತರ ಹೊಗೆ ಬರುತ್ತಿರುವುದರಿಂದ ವಾಹನ ಸಂಚಾರಕ್ಕೆ ಹಾಗೂ ಉಸಿರಾಟಕ್ಕೆ ತೊಂದರೆಯಾಗುತ್ತಿದೆ.
ಹಲವು ಕೆರೆಗಳ ಅಂಗಳದಲ್ಲಿ ಒತ್ತಾಗಿ ಬೆಳೆದಿರುವ ಜಾಲಿ ಗಿಡ, ಮತ್ತಿತರ ಮರಗಳನ್ನು ಕಡಿದು ಅವುಗಳನ್ನು ಜೋಡಿಸಿ ಅದರ ಮೇಲೆ ಜುಂಗು, ಹೊಟ್ಟು ಹಾಕಿ ಸಂಪೂರ್ಣ ಮುಚ್ಚಿ ಒಳಗೆ ಬೆಂಕಿ ಹಾಕುತ್ತಾರೆ. ವಾರವಿಡೀ ಉರಿದು ಮರ ಕೆಂಡವಾದಾಗ ಅದನ್ನು ನೀರು ಹಾಕಿ ಆರಿಸಿ ಇದ್ದಿಲು ಸಂಗ್ರಹಿಸುತ್ತಾರೆ. ಈ ಇದ್ದಿಲನ್ನು ನಿರ್ದಿಷ್ಟ ಗಾತ್ರಕ್ಕೆ ಚೂರು ಮಾಡಿ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದೆ.
ಇದ್ದಿಲು ಸುಡುವ ಜಾಗದಿಂದ ಕನಿಷ್ಠ ಎರಡು ಕಿ.ಮೀ. ವರೆಗೆ ಕಮಟು ವಾಸನೆ ಹರಡುತ್ತದೆ. ಇದರಿಂದ ಕೆಲವೊಮ್ಮೆ ಉಸಿರಾಡಲು ಸಮಸ್ಯೆ ಆಗುತ್ತಿದೆ. ತಾಲ್ಲೂಕು ಕೇಂದ್ರದಿಂದ ಕೇವಲ ಆರೇಳು ಕಿ.ಮೀ. ದೂರದಲ್ಲೇ ಖಾಸಗಿ ಜಮೀನಿನಲ್ಲಿ ಇದ್ದಿಲು ತಯಾರಿಕೆ ನಡೆಯುತ್ತಿದೆ. ಅಕೇಶಿಯಾ ಮೊದಲಾದ ಸಣ್ಣ ಮರಗಳನ್ನೂ ಇದ್ದಿಲಿಗಾಗಿ ಸುಡಲಾಗುತ್ತಿದೆ. ಅರಣ್ಯ ಇಲಾಖೆಯ ಜಾಗದಲ್ಲಿ ಬೆಳೆದಿರುವ ಸಣ್ಣ ಮರಗಳೂ ಇದಕ್ಕೆ ಬಲಿಯಾಗುತ್ತಿವೆ. ಇಂಥ ಇದ್ದಿಲು ಘಟಕಗಳಿಂದ ತಿಂಗಳಿಗೆ ಕನಿಷ್ಠ ಎರಡು ಲಾರಿ ಲೋಡ್ ರವಾನೆಯಾಗುತ್ತದೆ. ಈ ಘಟಕಗಳಿಗೆ ಪರವಾನಗಿಯೂ ಇಲ್ಲ ಎಂದು ಸ್ಥಳೀಯರೊಬ್ಬರು ಆರೋಪಿಸಿದರು.
ಸ್ಥಳೀಯ ಸಂಸ್ಥೆಗಳು ಇಂಥ ಇದ್ದಿಲು ತಯಾರಿಕೆ ಘಟಕಗಳ ಮೇಲೆ ನಿಯಂತ್ರಣ ಹೇರುವುದು ಸೂಕ್ತ. ರಸ್ತೆ ಬದಿ ಅಡಿಕೆ ಸಿಪ್ಪೆ ಹಾಕುವುದನ್ನು ನಿಯಂತ್ರಿಸಿ ವಾಯುಮಾಲಿನ್ಯ ತಡೆಯಬಹುದು ಎಂಬುದು ಸ್ಥಳೀಯರು ಅಭಿಪ್ರಾಯ.
ಇದ್ದಿಲು ಸುಡುವುದರಿಂದ ವಾತಾವರಣದಲ್ಲಿ ಅಸಹನೀಯ ವಾಸನೆ ಇರುತ್ತದೆ. ಉಸಿರಾಟಕ್ಕೂ ತೊಂದರೆಯಾಗುತ್ತದೆಶಂಕರ್ ನಾಯ್ಕ ಎಂ.ಕೋಡಿಹಳ್ಳಿ
ಇಂಥ ಪ್ರಕರಣಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಕಚೇರಿಗೆ ಮಾಹಿತಿ ನೀಡಲಾಗುತ್ತದೆಪೂರ್ಣಿಮಾ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.