ಬೆಂಗಳೂರು: ಕಡೂರು ಕ್ಷೇತ್ರದಲ್ಲಿರುವ ಬ್ಲ್ಯಾಕ್‌ಬಕ್ ಸಂರಕ್ಷಣಾ ಮೀಸಲು ಅರಣ್ಯ ಪ್ರದೇಶದಲ್ಲಿ ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಸಲ್ಲಿಸುವಂತೆ ಶಾಸಕ ಬೆಳ್ಳಿ ಪ್ರಕಾಶ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಅಮೃತ ಮಹಲ್ ಕಾವಲು ಭೂಮಿ ಬಳಕೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಒಳಗೊಳ್ಳುವಂತೆ ಶಾಸಕ ಬೆಳ್ಳಿ ಪ್ರಕಾಶ್ ಅರ್ಜಿ ಸಲ್ಲಿಸಿದ್ದರು. ಯೋಜನೆ ಪ್ರಶ್ನಿಸಿರುವ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಪ್ರಕಾಶ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂಬುದನ್ನು ಸಾಬೀತುಪಡಿಸದೆ ಇದ್ದರೆ ಶಾಸಕರಿಗೆ ದಂಡ ವಿಧಿಸಲಾಗುವುದು ಎಂದು ಹಿಂದಿನ ವಿಚಾರಣೆ ವೇಳೆ ಪೀಠ ಎಚ್ಚರಿಸಿತ್ತು.
‘ಬ್ಲಾಕ್‌ಬಗ್ ಮೀಸಲು ಅರಣ್ಯ ಘೋಷಣೆ ಬಗ್ಗೆ ಸ್ಥಳೀಯವಾಗಿ ಪ್ರಚಾರ ನೀಡದ ಕಾರಣ ಈ ಬಗ್ಗೆ ಮಾಹಿತಿ ಎಲ್ಲರಿಗೂ ತಿಳಿದಿಲ್ಲ. ಸಾರ್ವಜನಿಕ ಪ್ರಕಟಣೆ ಹೊರಡಿಸಿಲ್ಲ ಎಂಬುದನ್ನು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಮೀಸಲು ಅರಣ್ಯವಾಗಿ ಘೋಷಣೆ ಮಾಡಿದ್ದನ್ನು ತಾವು ಅರಿತುಕೊಂಡ ದಿನಾಂಕ ತಿಳಿಸಬೇಕು’ ಎಂದು ಪೀಠ ಹೇಳಿದೆ. ವಿಚಾರಣೆಯನ್ನು ಜೂ.28ಕ್ಕೆ ಮುಂದೂಡಿತು.
ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಅಮೃತ ಮಹಲ್ ಕಾವಲಿನ 62 ಎಕರೆ ಭೂಮಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಎಂದು ಡಿ.ವಿ. ಗಿರೀಶ್ ಮತ್ತು ಇತರರು ಸರ್ವಾಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಯೋಜನೆ ಜಾರಿಯಾದರೆ, ಪರಿಸರ ಮತ್ತು ಬ್ಲ್ಯಾಕ್‌ಬಕ್, ತೋಳ, ಗ್ರೇಟ್ ಇಂಡಿಯನ್ ಬಸ್ಟರ್ಡ್(ಹೆಬ್ಬಕ) ರೀತಿಯ ಪ್ರಭೇದಗಳು ವಿನಾಶವಾಗಲಿವೆ ಎಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.