ಕಡೂರು: ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರ ತೀರ್ಪು ಅಂತಿಮ. ಜನಾದೇಶಕ್ಕೆ ಗೌರವ ನೀಡಿದ್ದೇನೆ. ನೂತನ ಶಾಸಕರನ್ನು ಅಭಿನಂದಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿ ಹೆಚ್ಚಾಗಲಿ ಎಂದು ಆಶಿಸುತ್ತೇನೆ. ನಮ್ಮ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ’ ಎಂದು ಶಾಸಕ ಬೆಳ್ಳಿಪ್ರಕಾಶ್ ಪ್ರತಿಕ್ರಿಯಿಸಿದರು.
ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ.ದತ್ತ ಮಾತನಾಡಿ, ‘ಕಡೂರು ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿತ್ತು. ಇದು ನನ್ನ ಕಡೆಯ ಚುನಾವಣೆ ಎಂದೇ ಜನರ ಮುಂದೆ ಹೋಗಿದ್ದೆ. ಆದರೆ, ಜನಾದೇಶವನ್ನು ಗೌರವಿಸಲೇಬೇಕು. ನಾನು ಸೋತರೂ ನನ್ನ ಆಶಯ ಒಂದು ರೀತಿ ಈಡೇರಿದೆ. ಕೋಮುವಾದಿ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ.ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇತ್ತು ಎನಿಸುತ್ತದೆ. ಅದು ಕಡೂರಿನಲ್ಲಿಯೂ ಪರಿಣಾಮ ಬೀರಿದೆ. ರಾಜ್ಯದ,ತಾಲ್ಲೂಕಿನ ಜನತೆ ನೆಮ್ಮದಿಯನ್ನು ಕಾಣಲಿ. ತಾಲ್ಲೂಕಿನ ಅಭಿವೃದ್ಧಿಯಲ್ಲಿ ನೂತನ ಶಾಸಕರು ಹೆಚ್ಚಿನ ಗಮನ ಹರಿಸಲಿ’ ಎಂದರು.
ವಿಜೇತ ಅಭ್ಯರ್ಥಿ ಕೆ.ಎಸ್.ಆನಂದ್ ಮಾತನಾಡಿ, ‘ಇದು ಪಕ್ಷದ ಎಲ್ಲ ಕಾರ್ಯಕರ್ತರ,ನಾಯಕರ ಸಾಂಘಿಕ ಪ್ರಯತ್ನಕ್ಕೆ ಸಿಕ್ಕ ಗೆಲುವು. ಐದು ವರ್ಷಗಳಲ್ಲಿ ಸಾಮಾನ್ಯ ಜನತೆ, ರೈತರು ಬಹಳಷ್ಟು ನೊಂದಿದ್ದರು. ಆಡಳಿತ ವೈಫಲ್ಯ, ಸರ್ಕಾರಿ ಕಚೇರಿಗಳಲ್ಲಿ ಮಿತಿಮೀರಿದ ಲಂಚದ ಹಾವಳಿ ಹೀಗೆ ಹತ್ತು ಹಲವಾರು ಕಾರಣಗಳು ಜನರನ್ನು ಹೈರಾಣಾಗಿಸಿದ್ದವು. ಒಂದು ಪ್ರಾಮಾಣಿಕ ನಾಯಕತ್ವ ಬೇಕೆಂಬ ತುಡಿತ ಜನರಲ್ಲಿತ್ತು. ಅದೇ ನನ್ನ ಗೆಲುವಿಗೆ ಪೂರಕವಾಯಿತು’ ಎಂದರು.
ಜನರ ಪ್ರೀತಿ, ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ ಮತ್ತು ಕಾರ್ಯಕರ್ತರ ಶ್ರಮಕ್ಕೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ತಾಲ್ಲೂಕಿಗೆ ಅತ್ಯಗತ್ತವಾದ ಶಾಶ್ವತ ನೀರಾವರಿ ನನ್ನ ಮೊದಲ ಆದ್ಯತೆಯಾಗಿದೆ. ಹೆಬ್ಬೆ ಮೂಲಕ ಮಧಗದ ಕೆರೆ ಮತ್ತು ಅಯ್ಯನಕೆರೆಗೆ ನೀರು ಹರಿಸುವ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡುವ ಜೊತೆಗೆ ಕರಗಡ ಅಥವಾ ಎತ್ತಿನಹೊಳೆ ಯೋಜನೆಯ ಮೂಲಕ ವಿಷ್ಣುಸಮುದ್ರ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಪ್ರಯತ್ನಿಸುವೆ. ಹಲವು ಕಾರಣಗಳಿಂದ ವಿಳಂಬವಾಗಿರುವ ತಾಲ್ಲೂಕಿನ 32 ಕೆರೆಗಳಿಗೆ ನೀರುಣಿಸುವ ಭಧ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಚುರುಕು ನೀಡಿ ಅದನ್ನು ಪೂರ್ಣಗೊಳಿಸುವಲ್ಲಿ ಗಮನ ಹರಿಸುವೆ. ಒಟ್ಟಾರೆ ಲಂಚಮುಕ್ತ ಕಡೂರು ಎಂಬ ಕಲ್ಪನೆ ಸಾಕಾರಗೊಳಿಸುವೆ ಎಂದು ಪ್ರತಿಕ್ರಿಯಿಸಿದರು.
ಕೆ.ಎಸ್.ಆನಂದ್ ಗೆಲುವು ನಿಚ್ಚಳವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಬೈಕು, ಕಾರುಗಳಲ್ಲಿ ಕಾಂಗ್ರೆಸ್ ಧ್ವಜ ಹಿಡಿದು ಜಯಘೋಷ ಕೂಗುತ್ತಾ ರಸ್ತೆಗಳಲ್ಲಿ ಗುಂಪಾಗಿ ಸಂಚರಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆಂಬೇಡ್ಕರ್ ವೃತ್ತದಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂದೆ ಸಾವಿರಾರು ಕಾರ್ಯಕರ್ತರು ಸೇರಿ ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
undefined undefined
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.