ಕಳಸ: ‘ಮಲೆನಾಡಿನ ರೈತರು ಜೀವನ ನಿರ್ವಹಣೆಗಾಗಿ ಕಂದಾಯ ಜಮೀನಿನಲ್ಲಿ ಸಾಗುವಳಿ ಮಾಡಿದ್ದಾರೆಯೇ ಹೊರತು, ಇದು ಭೂಕಬಳಿಕೆ ಅಲ್ಲ’ ಎಂದು ಕಳಸ ಬಾಳೂರು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಆರ್.ಭಾಸ್ಕರ್ ಅಭಿಪ್ರಾಯಪಟ್ಟರು.
ಒತ್ತುವರಿ ತೆರವು ಖಂಡಿಸಿ ಬುಧವಾರ ಕಳಸ ತಾಲ್ಲೂಕು ಬಂದ್ ನಡೆಯಲಿದ್ದು, ಅದರ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸರ್ಕಾರದ ಬಂಜರು ಭೂಮಿಯನ್ನು ಸಾಗುವಳಿ ಮಾಡಿ ದೇಶಕ್ಕೆ ಆದಾಯ ತಂದುಕೊಟ್ಟ ಬೆಳೆಗಾರರು ಗ್ರಾಮೀಣ ಪ್ರದೇಶದಲ್ಲಿ ಶೇ.99 ಉದ್ಯೋಗ ಸೃಷ್ಟಿ ಮಾಡಿದ್ದಾರೆ. ಕೃಷಿ ಭೂಮಿ ಒತ್ತುವರಿ ತೆರವು ಮಾಡಿದರೆ ದೇಶದ ಆದಾಯ ಕಡಿಮೆಯಾಗಿ, ನಿರುದ್ಯೋಗ ಸಮಸ್ಯೆ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ.
‘ಕೃಷಿ ಭೂಮಿ ಒತ್ತುವರಿ ತೆರವು ಮಾಡಿದಾಗ ಹಲವು ಕುಟುಂಬಗಳು ಬೀದಿಗೆ ಬರುತ್ತವೆ, ಇದರಿಂದ ಸಮಾಜಘಾತುಕ ಚಟುವಟಿಕೆ ಕೂಡ ಹೆಚ್ಚಬಹುದು. ಬ್ಯಾಂಕ್‌ನಿಂದ ಕೃಷಿಕರು ಪಡೆದಿರುವ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಲಾಗದೆ ಬ್ಯಾಂಕ್‌ಗಳಿಗೆ ಕೂಡ ಸಮಸ್ಯೆ ಆಗಬಹುದು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಬುಧವಾರದ ಕಳಸ ಬಂದ್‌ಗೆ ತಾಲ್ಲೂಕಿನ ಎಲ್ಲ ಬೆಳೆಗಾರರು, ಕಾರ್ಮಿಕರು, ವ್ಯಾಪಾರಿಗಳು ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.