ADVERTISEMENT

ಕಳಸ | ನಿಲ್ಲದ ಮಳೆ: ಅಡಿಕೆ ಸಂಸ್ಕರಣೆಗೆ ಅಡ್ಡಿ

ಹಣ್ಣಾಗಿ ಉದುರುತ್ತಿರುವ ಅಡಿಕೆ: ರೋಸಿ ಹೋಗಿರುವ ಬೆಳೆಗಾರರು

ರವಿ ಕೆಳಂಗಡಿ
Published 10 ಅಕ್ಟೋಬರ್ 2024, 6:00 IST
Last Updated 10 ಅಕ್ಟೋಬರ್ 2024, 6:00 IST
ಕಳಸದಲ್ಲಿ ಒಣಗಿಸಲು ಹರಡಿದ್ದ ಕೆಂಪುಗೋಟು ಅಡಿಕೆ ಮಳೆಯಿಮದಾಗಿ ಕೊಳೆಯುತ್ತಿರುವುದು
ಕಳಸದಲ್ಲಿ ಒಣಗಿಸಲು ಹರಡಿದ್ದ ಕೆಂಪುಗೋಟು ಅಡಿಕೆ ಮಳೆಯಿಮದಾಗಿ ಕೊಳೆಯುತ್ತಿರುವುದು   

ಕಳಸ: ತಾಲ್ಲೂಕಿನ ಬಹುತೇಕ ಅಡಿಕೆ ತೋಟಗಳಲ್ಲಿ ಇಷ್ಟರಲ್ಲೇ ಅಡಿಕೆ ಕೊಯ್ಲು ಹಾಗೂ ಸಂಸ್ಕರಣೆ ಆರಂಭವಾಗಬೇಕಿತ್ತು. ಆದರೆ, ಪ್ರತಿದಿನವೂ ಸುರಿಯುತ್ತಿರುವ ಮಳೆ ಕಾರಣಕ್ಕೆ ಅಡಿಕೆ ಸಂಸ್ಕರಣೆಗೆ ಅಡ್ಡಿ ಉಂಟಾಗಿದೆ.

ಸಾಮಾನ್ಯವಾಗಿ ಅಡಿಕೆ ಮರದಲ್ಲಿ ಮೊದಲ ಗೊನೆ ಹಣ್ಣಾದಾಗ ಅಡಿಕೆ ಕೊಯ್ಲು ಆರಂಭಿಸಲಾಗುತ್ತದೆ. ಆದರೆ, ತಾಲ್ಲೂಕಿನ ಬಹುತೇಕ ತೋಟಗಳಲ್ಲಿ ಕಳೆದ ತಿಂಗಳಲ್ಲೇ ಒಂದು ಗೊನೆ ಹಣ್ಣಾಗಿ ಗೋಟು ಅಡಿಕೆ ಉದುರುತ್ತಿದೆ. ಮಳೆಗಾಲ ಮುಗಿಯುವ ಲಕ್ಷಣಗಳೇ ಇಲ್ಲದಿರುವುದರಿಂದ ಅಡಿಕೆ ಸಂಸ್ಕರಣೆಯ ಸಾಹಸಕ್ಕೆ ಬೆಳೆಗಾರರು ಕೈ ಹಾಕಿಲ್ಲ.

‘ಸಂಸ್ಕರಣೆ ತಡವಾಗಿರುವುದರ ಜೊತೆಗೆ ಅಡಿಕೆಗೆ ಕೊಳೆ ರೋಗ ಈಗಲೂ ಬಾಧಿಸುತ್ತಿದೆ. ಈಗಾಗಲೇ ಮೂರು ಬಾರಿ ಬೋರ್ಡೊ ಔಷಧಿ ಸಿಂಪಡಣೆ ಮಾಡಿದ್ದೇವೆ. ಆದರೂ ಕೊಳೆ ರೋಗ ಇದೆ’ ಎಂದು ಸಂಸೆಯ ಬೆಳೆಗಾರ ಉಪ್ಪಿನಗದ್ದೆ ಶ್ರೇಯಾಂಶ ಹೇಳಿದರು.

ADVERTISEMENT

ನೆಲಕ್ಕೆ ಉದುರಿರುವ ಗೋಟು ಅಡಿಕೆಯನ್ನು ಬೆಳೆಗಾರರು ಹೆರಕಿ ಒಣಗಲು ಹಾಕಿದ್ದಾರೆ. ಆದರೆ, ಬಿಸಿಲಿನ ಕೊರತೆಯಿಂದ ಗೋಟು ಅಡಿಕೆ ಒಣಗಿಸಲು ಆಗಿಲ್ಲ. ಮಳೆಯಲ್ಲಿ ಒದ್ದೆಯಾದ ಅಡಿಕೆ ಗೋಟಿನ ಗುಣಮಟ್ಟವೂ ಹಾಳಾಗಿದೆ. ಆದ್ದರಿಂದ ಉತ್ತಮ ಧಾರಣೆ ಸಿಗುವ ನಿರೀಕ್ಷೆಯೂ ಇಲ್ಲವಾಗಿದೆ.

ಗೋಟು ಅಡಿಕೆಯನ್ನು ಯಂತ್ರ ಬಳಸಿ ಸುಲಿದು ರಾಶಿ ಜೊತೆಗೆ ಮಿಶ್ರಣ ಮಾಡುವ ದಂಧೆ 3 ವರ್ಷದಿಂದ ನಡೆದಿತ್ತು. ಆದರೆ, ಈ ಬಾರಿ ಇಂತಹ ಅಡಿಕೆ ಖರೀದಿ ಮಾಡಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದಲೇ ಈಗ ಕೈಯಲ್ಲಿ ಸುಲಿದ ಬೆಟ್ಟೆ ಅಡಿಕೆ ಧಾರಣೆ ಕ್ವಿಂಟಾಲಿಗೆ ₹54 ಸಾವಿರಕ್ಕೆ ಏರಿದೆ. ಯಂತ್ರದಲ್ಲಿ ಸುಲಿಯುವ ರಾಶಿ ಇಡಿ ಮಾದರಿಯ ಬೆಲೆ ₹48 ಸಾವಿರದ ಆಸುಪಾಸಿನಲ್ಲಿ ಇದೆ.

ಬಯಲು ಸೀಮೆಯ ವ್ಯಾಪಾರಿಗಳು ಮಲೆನಾಡಿನಲ್ಲಿ ಹಸಿ ಅಡಿಕೆ ಖರೀದಿ ಮಾಡುವ  ಆಸಕ್ತಿ ತೋರಿಸುತ್ತಿಲ್ಲ. ಆದ್ದರಿಂದ ದಾವಣಗೆರೆಯಲ್ಲಿ ಹಸಿ ಅಡಿಕೆಗೆ ಕೆ.ಜಿಗೆ ₹62 ದರ ಇದ್ದರೂ ಕಳಸದಲ್ಲಿ ಕೆ.ಜಿಗೆ ₹55ರ ಆಸುಪಾಸಿನಲ್ಲಿ ದರ ಸಿಗುತ್ತಿದೆ.

ಕಳೆದ ಬಾರಿ ಕೆಂಪು ಗೋಟು ಅಡಿಕೆಯನ್ನೂ ಉತ್ತಮ ಬೆಲೆಗೆ ಖರೀದಿಸುತ್ತಿದ್ದ ವ್ಯಾಪಾರಿಗಳು, ಈ ಬಾರಿ ಕೆಂಪು ಗೋಟು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಬೇಸಿಗೆಯಲ್ಲಿ ಬಿಸಿಲಿನ ತಾಪ, ನೀರಿನ ಕೊರತೆ, ಮಳೆಗಾಲದಲ್ಲಿ ಕೊಳೆ ರೋಗದ ಬಾಧೆ ಈ ಎಲ್ಲ ಸಂಕಷ್ಟ ಕಳೆದು ಅಡಿಕೆ ಕೊಯ್ಲಿಗೆ ಬಂದಿರುವ ಈ ಸಂದರ್ಭದಲ್ಲಿ ಕೂಡ ಸಮಸ್ಯೆಗಳು ಬಾಧಿಸುತ್ತಿವೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.

4-5 ವರ್ಷಗಳಿಂದ ಮಳೆಗಾಲ ದೀಪಾವಳಿವರೆಗೆ ಮುಂದುವರೆಯುತ್ತಿದೆ. ಇದರಿಂದ ಮೊದಲ ಅಡಿಕೆ ಗೊನೆ ಸಂಸ್ಕರಣೆ ಮಾಡಲಾರದೇ ತೋಟದ ಇಳುವರಿ ಕುಸಿತ ಆಗುತ್ತಿದ್ದು ಬೆಳೆಗಾರರಿಗೆ ಆದಾಯ ನಷ್ಟವಾಗುತ್ತಿದೆ
ಪ್ರಮೋದ್ ಭಾರತೀಪುರ ಅಡಿಕೆ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.