ADVERTISEMENT

ಚಿಕ್ಕಮಗಳೂರು | ಎಲ್ಲೆಡೆ ಕನ್ನಡ ರಾಜ್ಯೋತ್ಸವ: ಸ್ಥಬ್ಧ ಚಿತ್ರಗಳ ವೈಭವ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 13:34 IST
Last Updated 1 ನವೆಂಬರ್ 2024, 13:34 IST
ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ಶಾಸಕ ಎಚ್.ಡಿ.ತಮ್ಮಯ್ಯ ಪುಷ್ಪಾರ್ಚನೆ ಮಾಡಿದರು
ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ಶಾಸಕ ಎಚ್.ಡಿ.ತಮ್ಮಯ್ಯ ಪುಷ್ಪಾರ್ಚನೆ ಮಾಡಿದರು   

ಚಿಕ್ಕಮಗಳೂರು: ಕನ್ನಡದ ವೈಭವ ಕಣ್ಣೆದುರಿಗೆ ತಂದ ಸ್ತಬ್ಧ ಚಿತ್ರಗಳು, ಕನ್ನಡ ಗೀತೆಗಳನ್ನು ಹಾಡಿದ ಗಾಯಕರು, ಇತಿಹಾಸ ಕಣ್ಮುಂದೆ ತಂದ ಮಕ್ಕಳು.... ಇದು ಜಿಲ್ಲೆಯಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವಿಶೇಷಗಳು.

ನಗರದ ನೇತಾಜಿ ಸುಭಾಷ್‌ ಚಂದ್ರಬೋಸ್ ಜಿಲ್ಲಾ ಮೈದಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಪೊಲೀಸರು, ವಿದ್ಯಾರ್ಥಿಗಳು, ಎನ್‌ಸಿಸಿ ತಂಡಗಳು ಪಥ ಸಂಚಲನ ನಡೆಸಿದರು.

ಇನ್ನೊಂದೆಡೆ ವಿವಿಧ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡಿನ ಇತಿಹಾಸ ತೆರೆದಿಡುವ ಸ್ತಬ್ಧ ಚಿತ್ರಗಳಲ್ಲಿ ವೇಷಧಾರಿಗಳಾಗಿ ಸಾಗಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಹನುಮಂತಪ್ಪ ವೃತ್ತದಿಂದ ಜಿಲ್ಲಾ ಮೈದಾನದ ತನಕ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು. ಪ್ರೆಸ್ ಕ್ಲಬ್ ತಂಡದ ‘ದಾರ್ಶನಿಕ ಕವಿಗಳ’ ಸ್ತಬ್ಧ ಚಿತ್ರ ಗಮನ ಸೆಳೆಯಿತು.

ADVERTISEMENT

ಧ್ವಜಾರೋಹಣ ನೆರವೇರಿಸಿ ಮಾತನಾಡಿದ  ಕೆ.ಜೆ.ಜಾರ್ಜ್, ಚಿಕ್ಕಮಗಳೂರಿನ ಸಂಸ್ಕೃತಿ, ಪರಂಪರೆ, ಇತಿಹಾಸಗಳಲ್ಲಿ ರಾಮಾಯಣ, ಮಹಾಭಾರತ ಸೇರಿದಂತೆ ಹಲವು ಪುರಾಣ ಪುಣ್ಯ ಕಥೆಗಳು ಸೇರಿಕೊಂಡಿವೆ. ಹೊಯ್ಸಳ ಚಕ್ರವರ್ತಿಯ ಆಸ್ಥಾನ ಕವಿಯಾಗಿದ್ದ ರುದ್ರಭಟ್ಟ ಮತ್ತು ಜನಸಾಮಾನ್ಯರ ಹೃದಯ ಕವಿ ಎಂದು ಕರೆಯಲ್ಪಟ್ಟ ಲಕ್ಷ್ಮೀಶ ಕವಿ ಇಬ್ಬರೂ ನಮ್ಮ ದೇವನೂರಿನವರು’ ಎಂದು ಬಣ್ಣಿಸಿದರು.

ಮೂಡಿಗೆರೆ ಹ್ಯಾಂಡ್ ಪೋಸ್ಟ್‌ನಿಂದ ಮೂಗ್ತಿಹಳ್ಳಿ ತನಕ 26.32 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ₹400 ಕೋಟಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಕೂಡ ಆರಂಭವಾಗಿದೆ ಎಂದು ಹೇಳಿದರು.

ಶೃಂಗೇರಿಯಲ್ಲಿ ಹೊಸದಾಗಿ ಕೆಎಸ್‌ಆರ್‌ಟಿಸಿ ಡಿಪೊ ಪ್ರಾರಂಭಿಸಲು 4 ಎಕರೆ ಜಾಗ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಹೊಸದಾಗಿ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆ ನಿರ್ಮಿಸಲು ನಬಾರ್ಡ್ ಯೋಜನೆಯಡಿ ಅನುಮೋದನೆ ದೊರೆತಿದೆ. ಈ ಎರಡೂ ಕಾಮಗಾರಿಗಳಿಗೆ ಒಟ್ಟು ₹44.75 ಕೋಟಿ ಬಿಡುಗಡೆಯಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆಗಳ ಅಭಿವೃದ್ಧಿಗೆ ಕಾಮಗಾರಿಗೆ ಎನ್‌ಡಿಆರ್‌ಎಫ್ ಅನುದಾನ ಹೊರತುಪಡಿಸಿ ₹17  ಕೋಟಿ ಬಿಡುಗಡೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಅರುಣೋದಯ ಗಂಧರ್ವಗಿರಿ ರಸ್ತೆ ಹಾಗೂ ಮಳಲೂರಮ್ಮ ದೇವಸ್ತಾನ ರಸ್ತೆ ಕಾಮಗಾರಿಗಳಿಗೆ ಒಟ್ಟು ₹10 ಮಂಜೂರಾಗಿದೆ ಎಂದು ಹೇಳಿದರು.

ಶಾಸಕರಾದ ಎಚ್.ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಭದ್ರಾ ಕಾಡಾ ನಿಗಮದ ಅಧ್ಯಕ್ಷ ಕೆ.ಪಿ. ಅಂಶುಮಂತ್, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಕಾರಿ ಎಚ್‌.ಎಸ್.ಕೀರ್ತನಾ, ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಇದ್ದರು.

ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು
ರಾಜ್ಯೋತ್ಸವದ ಅಂಗವಾಗಿ ಪ್ರೆಸ್‌ಕ್ಲಬ್ ತಂಡದ ಸದಸ್ಯರು ಬಸವಣ್ಣ ಕನಕದಾಸರು ಶಿಶುನಾಳ ಶರೀಫ್ ಸರ್ವಜ್ಞರ ವೇಷತೊಟ್ಟು ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಷ್ಠಾಪಿಸಿರುವ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ಶಾಸಕ ಎಚ್.ಡಿ.ತಮ್ಮಯ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನಗರಸಭೆ ಅಧ್ಯಕ್ಷ ಸುಜಾತಾ ಶಿವಕುಮಾರ್ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.