ಮೂಡಿಗೆರೆ: ‘ಕನ್ನಡ ಭಾಷಾಭಿಮಾನವನ್ನು ಕೇವಲ ರಾಜ್ಯೋತ್ಸವಕ್ಕೆ ಸೀಮಿತಗೊಳಿಸದೇ ಮನಸಿನಲ್ಲಿ ಮೈಗೂಡಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್ ಮುಖಂಡರಾದ ಮೋಟಮ್ಮ ಹೇಳಿದರು.
ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಬುಧವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
‘ಯುವಜನರಲ್ಲಿ ಕನ್ನಡ ಭಾಷೆ ಹಾಗೂ ಈ ನಾಡಿನ ಸಂಸ್ಕೃತಿಯ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಭಾಷಾಭಿಮಾನವನ್ನು ಮೈಗೂಡಿಸಿಕೊಳ್ಳುವಂತೆ ಯುವಜನರನ್ನು ಜಾಗೃತಗೊಳಿಸಬೇಕಾಗಿದೆ. ಕನ್ನಡಿಗರಾದ ನಾವು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಬಳಿಕ ಎಲ್ಲಾ ಭಾಷೆಗಳನ್ನೂ ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಈ ನಾಡಿನ ಹಲವು ಹೆಸರಾಂತ ಕವಿಗಳು ಕನ್ನಡದ ಕಂಪನ್ನು ಜಗತ್ತಿಗೆ ಪಸರಿಸುವ ಕಾರ್ಯ ಮಾಡಿದ್ದಾರೆ. ಅವರ ಹೆಸರನ್ನು ನಾವು ಸದಾ ಸ್ಮರಿಸುವ ಜತೆಗೆ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಉಳಿಸಲು ಎಲ್ಲರೂ ಮುಂದಾಗಬೇಕು’ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸುನಿಲ್ ಜೆ. ಗೌಡ, ಅಂಬಾವತಿ ಶೆಟ್ಟಿ, ಸನ್ಮತಿ ಹಾರ್ಮಕ್ಕಿ, ಪರಮೇಶ್ವರ್, ಮಹ್ಸಿನ್ ಬೇಜಾದ್, ಕೆ.ವಿ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಉಪ ವಿಭಾಗಾಧಿಕಾರಿ ಎಚ್.ಡಿ ರಾಜೇಶ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಕನ್ನಡ ಭಾಷೆ, ನೆಲ, ಜಲ ಕುರಿತಾದ ನೃತ್ಯ ರೂಪಕಗಳು ನಡೆದವು.
ಪಟ್ಟಣ ಪಂಚಾಯಿತಿ ಸದಸ್ಯರಾದ ಎಚ್.ಪಿ ರಮೇಶ್, ಮನೋಜ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ನಾಗರಾಜ್, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್ ಬಾಲಕೃಷ್ಣ, ಸಮಾಜ ಸೇವಕ ಹಸೈನಾರ್, ಮಗ್ಗಲಮಕ್ಕಿ ಗಣೇಶ್, ಹೊರಟ್ಟಿ ರಘು, ಅಣ್ಣೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.