ADVERTISEMENT

ನಾನು ಪಲಾಯನವಾದಿಯಲ್ಲ, ಕಡೂರಿನಲ್ಲಿದ್ದುಕೊಂಡೇ ಸಕ್ರಿಯ ರಾಜಕಾರಣ: ವೈ.ಎಸ್.ವಿ. ದತ್ತ

​ಪ್ರಜಾವಾಣಿ ವಾರ್ತೆ
Published 16 ಮೇ 2023, 12:22 IST
Last Updated 16 ಮೇ 2023, 12:22 IST
ತಾಲ್ಲೂಕಿನ ಯಗಟಿಯಲ್ಲಿ ಸಂಸದ ಪ್ರಜ್ವಲ್ ಮತ್ತು ಮಾಜಿ ಶಾಸಕ ವೈ‌ಎಸ್.ವಿ‌.ದತ್ತ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ತಾಲ್ಲೂಕಿನ ಯಗಟಿಯಲ್ಲಿ ಸಂಸದ ಪ್ರಜ್ವಲ್ ಮತ್ತು ಮಾಜಿ ಶಾಸಕ ವೈ‌ಎಸ್.ವಿ‌.ದತ್ತ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.   

ಕಡೂರು: ‘ನಾನು ಪಲಾಯನವಾದಿಯಾಗುವುದಿಲ್ಲ. ಕಡೂರಿನಲ್ಲಿದ್ದುಕೊಂಡೇ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.

ತಾಲ್ಲೂಕಿನ ಯಗಟಿಯಲ್ಲಿ ಮಂಗಳವಾರ ಸಂಸದ ಪ್ರಜ್ವಲ್ ರೇವಣ್ಣ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸೋಲು– ಗೆಲುವು ಎರಡೂ ನನಗೆ ಹೊಸದಲ್ಲ. ದೇವೇಗೌಡರ ಜೊತೆ 50 ವರ್ಷದಿಂದ ಚುನಾವಣಾ ರಾಜಕೀಯವನ್ನು ಹತ್ತಿರದಿಂದ ಕಂಡಿದ್ದೇನೆ. ಹಿಂದೆ ಇಂದಿರಾಗಾಂಧಿ ಮಾಡಿದ ‘ಗರೀಬಿ ಹಠಾವೋ’ ಎಂಬ ಒಂದೇ ಘೋಷಣೆಯ ಅಲೆಯಲ್ಲಿ ವಿರೋಧ ಪಕ್ಷಗಳೆಲ್ಲ ಕೊಚ್ಚಿಹೋಗಿದ್ದವು. ಈಗ ಕಾಂಗ್ರೆಸ್ಸಿನ ಗೆಲುವಿಗೆ ಬಿಜೆಪಿ ವಿರೋಧಿ ಅಲೆ ಸಾರ್ವತ್ರಿಕವಾಗಿ ಕಾರಣವಾಯಿತು. ಕಡೂರಿನಲ್ಲಿಯೂ ಇದೇ ಪರಿಸ್ಥಿತಿಯಾಗಿದ್ದು ವಾಸ್ತವ. ನೂತನ ಶಾಸಕರಿಗೆ ಅಭಿನಂದನೆ ತಿಳಿಸಿರುವೆ. ತಾಲ್ಲೂಕಿನ ಅಭಿವೃದ್ಧಿಯಲ್ಲಿ ಅವರ ರಚನಾತ್ಮಕ ಕಾರ್ಯಗಳಿಗೆ ನಮ್ಮ ಸಹಮತವಿರುತ್ತದೆ’ ಎಂದರು.

ADVERTISEMENT

‘ಈ ಬಾರಿ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಅದರಿಂದ ಕಾರ್ಯಕರ್ತರು ಹತಾಶರಾಗಬಾರದು. ಸೊನ್ನೆಯಿಂದ ಇಲ್ಲಿ ಪಕ್ಷ ಕಟ್ಟಿದ್ದೇವೆ. ಅದಕ್ಕೆ ಪುನಶ್ಚೇತನ ಮಾಡುವ ಕಾರ್ಯವಾಗಬೇಕಿದೆ. ಸದ್ಯದಲ್ಲೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಗಳು ಎದುರಿಗಿವೆ. ಅದರಲ್ಲಿ ನಮ್ಮ ಪಕ್ಷ ದೊಡ್ಡ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರತೀ ಕಾರ್ಯಕರ್ತರು ಕೆಲಸ ಮಾಡಬೇಕು. ದೇವೇಗೌಡರು, ಸಂಸದ ಪ್ರಜ್ವಲ್ ನಮ್ಮ ಜೊತೆಯಿದ್ದಾರೆ. ಯಾವುದೇ ಹತಾಶೆಗೆ ಕಾರಣವಿಲ್ಲ. ಯಾರೂ ಯಾರನ್ನೂ ದೂಷಿಸುವ ಅಗತ್ಯವಿಲ್ಲ. ಈ ಚುನಾವಣೆಯನ್ನು ಸಮರ್ಥವಾಗಿಯೇ ಎದುರಿಸಿದ್ದೇವೆ. ಅದಕ್ಕೆ ಸಹಕಾರ ಕೊಟ್ಟ ದೇವೇಗೌಡರ ಕುಟುಂಬ ಮತ್ತು ಪಕ್ಷದ ಪ್ರತೀ ಕಾರ್ಯಕರ್ತನಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಸೋಲು ಮುಂದಿನ ಕಾರ್ಯಗಳಿಗೆ ದಾರಿಯಾಗಬೇಕು. ಈ ನಿಟ್ಟಿನಲ್ಲಿ ದತ್ತ ಅವರು ಸೋತಿರಬಹುದು. ಆದರೆ, ಅವರೊಳಗಿನ ಉತ್ಸಾಹ ಸೋತಿಲ್ಲ. ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಕಟ್ಟುವ ಅದಮ್ಯ ಉತ್ಸಾಹ ಅವರಲ್ಲಿದೆ. ಆ ಕಾರ್ಯದಲ್ಲಿ ಕಾರ್ಯಕರ್ತರು ಧೃತಿಗೆಡದೆ ಪಕ್ಷಕ್ಕೆ ಪುನರ್ಜನ್ಮ ನೀಡಬೇಕು. ಪಕ್ಷದ ಸಮಿತಿ‌ ಪುನರ್‌ರಚನೆ ಮಾಡಿ, ಪ್ರತೀ ಸಮುದಾಯಕ್ಕೂ ಅವಕಾಶ ನೀಡಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ದತ್ತ ಅವರು ಮುಂದಾಗಬೇಕು’ ಎಂದರು.

‘ಬಿಜೆಪಿಗೆ ಇದ್ದ ಜನವಿರೋಧಿ ಅಲೆ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿದೆಯೇ ವಿನಾ ಬೇರೆ ವಿಶೇಷವಿಲ್ಲ. ಜೆಡಿಎಸ್ ಪಕ್ಷ ಸರ್ಕಾರದ ರಚನಾತ್ಮಕ ಕಾರ್ಯಗಳಿಗೆ ಬೆಂಬಲ ನೀಡುವ ಜನವಿರೋಧಿ ಕಾರ್ಯಗಳಿಗೆ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತದೆ. ಈಗಲೇ ಸರ್ಕಾರದ ಅಥವಾ ಬೇರಾವುದೋ ವಿಚಾರದ ಚರ್ಚೆಗೆ ಸೂಕ್ತ ಸಮಯ ಇದಲ್ಲ. ಆರು ತಿಂಗಳು ಕಳೆದ ನಂತರ ಅವರ ಪ್ರಣಾಳಿಕೆಯ ಅನುಷ್ಠಾನದ ಆಧಾರದಲ್ಲಿ ಸರ್ಕಾರದ ಮೌಲ್ಯಮಾಪನವಾಗುತ್ತದೆ. ಹಾಗಾಗಿ, ಈಗ ಪಕ್ಷಕ್ಕೆ ನವಚೇತನ ನೀಡಿ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕಾರ್ಯದತ್ತ ಮಾತ್ರ ಗಮನ ಹರಿಸೋಣ. ತಮ್ಮೆಲ್ಲರ ಜೊತೆ ನಾವೆಲ್ಲರೂ ಇರುತ್ತೇವೆ’ ಎಂದರು.

‘ಚುನಾವಣಾ ನಿವೃತ್ತಿಯ ಮಾತು ಬೇಡ’

ಕಾರ್ಯಕರ್ತರ ಸಭೆಯಲ್ಲಿ ವೈ. ಎಸ್.ವಿ.ದತ್ತ ಮಾತನಾಡಿ, ‘ಇದು ನನ್ನ ಕಡೆಯ ಚುನಾವಣೆ ಎಂದು ಪ್ರಚಾರ ಸಮಯದಲ್ಲಿ ಹೇಳಿದ್ದೆ. ಅದರಂತೆಯೇ ಇನ್ನು ಮುಂದೆ ಚುನಾವಣಾ ರಾಜಕೀಯಕ್ಕೆ ಕೊನೆ ಹೇಳಿ, ಸಕ್ರಿಯ ರಾಜಕಾರಣದಲ್ಲಿದ್ದು ಪಕ್ಷ ಸಂಘಟಿಸಿ ಶಕ್ತಿ ತೋರಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ಹೇಳುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಮಧ್ಯೆ ಪ್ರವೇಶಿಸಿ, ‘ಚುನಾವಣೆ ರಾಜಕೀಯಕ್ಕೆ ನಿವೃತ್ತಿ ಹೇಳುವ ತಮ್ಮ ಮಾತನ್ನು ಮತ್ತೆ ಹೇಳಬೇಡಿ. ಆ ನಿರ್ಧಾರ ತೆಗೆದುಕೊಳ್ಳಲು ತಮಗೆ ಹಕ್ಕಿಲ್ಲ. ಅದನ್ನು ಪಕ್ಷ ನಿರ್ಧರಿಸುತ್ತದೆ. ಚುನಾವಣಾ ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಯಾರು ಹೇಳಿದ್ದಾರೆ? ದೇವೇಗೌಡರಾ? ಅಥವಾ ಇನ್ಯಾವುದಾದರೂ ನಾಯಕರು ಹೇಳಿದ್ದಾರಾ? ಮುಂದಿನ ಚುನಾವಣೆಯಲ್ಲಿಯೂ ನೀವೇ ನಮ್ಮ ಅಭ್ಯರ್ಥಿ. ನಾನು ಇರುವ ತನಕ ನೀವು ನಿವೃತ್ತಿಯ ಮಾತನ್ನಾಡಬಾರದು’ ಎಂದು ಒಂದಿಷ್ಟು ಖಾರವಾಗಿಯೇ ನುಡಿದರು.

‘ಕಡೂರು ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ನಾನಾಗಲೀ ಅಥವಾ ನಮ್ಮ ಕುಟುಂಬವಾಗಲೀ ಈ ಕ್ಷೇತ್ರ ಮರೆಯಲು ಸಾಧ್ಯವಿಲ್ಲ. ಕೆಲ ತಪ್ಪುಗಳಾಗಿದೆ. ನಾನೂ ಹೆಚ್ಚು ಈ ಭಾಗಕ್ಕೆ ಬಾರದಿರುವುದು ಒಂದಿಷ್ಟು ಹಿನ್ನೆಡೆಗೆ ಕಾರಣವಾಗಿದೆ. ಅವೆಲ್ಲ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಆಶಯ ನನ್ನದು. ಇಲ್ಲಿನ ಸೋಲು ಕೇವಲ ದತ್ತ ಅವರ ಸೋಲಲ್ಲ. ನಮ್ಮೆಲ್ಲರದು. ಎಲ್ಲರೂ ಸೇರಿ ದತ್ತ ಅವರಂಥ ಸರಳ ವ್ಯಕ್ತಿಗೆ ಸಹಕಾರ ನೀಡೋಣ’ ಎಂದು ಪ್ರಜ್ವಲ್‌ ಹೇಳಿದರು.

ಬಿದರೆ ಜಗದೀಶ್, ವೈ.ಎಸ್.ರವಿಪ್ರಕಾಶ್,ಕೋಡಿಹಳ್ಳಿ ಮಹೇಶ್ವರಪ್ಪ, ಬಿ.ಪಿ.ನಾಗರಾಜ್, ಕೆ.ಎಂ.ವಿನಾಯಕ ಇದ್ದರು.

ಕ್ಷೇತ್ರದಲ್ಲಿ ಪ್ರಾಯಶ್ಚಿತ ಯಾತ್ರೆ: ದತ್ತ

‘ನನಗೆ ಕ್ಷೇತ್ರದ ಜನತೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಕೊನೆಯುಸಿರು ಇರುವವರೆಗೂ ಎಲ್ಲರಲ್ಲೂ ಒಂದಾಗಿ ನನ್ನ ನೆಲದಲ್ಲಿಯೇ ಮಣ್ಣಾಗುತ್ತೇನೆ. ನನ್ನ ಹಲವಾರು ತಪ್ಪುಗಳಿಗೆ ಜನರು ಸರಿಯಾದ ಶಿಕ್ಷೆ ನೀಡಿದ್ದಾರೆ‌. ತಪ್ಪು ಮಾಡಿದ ನಾನು ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ. ಜೂನ್ 24 ನನ್ನ ಜನ್ಮದಿನ. ಅಂದಿನಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಪಾದಯಾತ್ರೆಯ ಮೂಲಕ ತೆರಳಿ ನನ್ನ ತಪ್ಪುಗಳಿಗಾಗಿ ಕ್ಷಮೆ ಕೋರುತ್ತೇನೆ’ ಎಂದು ದತ್ತ ಪ್ರಕಟಿಸಿದರು.

‘ಪಾದಯಾತ್ರೆ ಯಲ್ಲಿ ಹಳ್ಳಿಗಳಲ್ಲೆ ಗ್ರಾಮವಾಸ್ತವ್ಯವನ್ನೂ ಮಾಡುವೆ. ಈ ಸಂಕಲ್ಪ ಯಾವುದೇ ಚುನಾವಣಾ ದೃಷ್ಟಿಯಿಂದ ಮಾಡಿಲ್ಲ. ಕೇವಲ ನನ್ನ ಆತ್ಮಾವಲೋಕನ ಮಾತ್ರ. ಎಲ್ಲ ವಿವರಗಳನ್ನು ತಮಗೆ ತಿಳಿಸುತ್ತೇನೆ’ ಎಂದರು.

ಕೂಡಲೇ ಕಾರ್ಯಕರ್ತರು ತಪ್ಪು ಮಾಡಿದ್ಯಾರೋ ನೀವು ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಸರಿಯಲ್ಲ‌. ಇದನ್ನು ಕೈ ಬಿಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು. ಸಂಸದ ಪ್ರಜ್ವಲ್ ಅವರಿಗೆ ಅಡ್ಡ ನಿಂತು ಇದಕ್ಕೆ ನೀವೂ ಒಪ್ಪಬಾರದು ಎಂದು ಆಗ್ರಹಿಸಿದರು. ಆದರೆ, ದತ್ತ ನನ್ನ ಸಂಕಲ್ಪ ಅಚಲ ಎಂದು ನುಡಿದು ಹೊರ ಹೊರಟರು.

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.