ADVERTISEMENT

ಚಿಕ್ಕಮಗಳೂರು: ಕಾಫಿ ತೋಟಗಳಲ್ಲಿ ಲೇಔಟ್‌ ತಡೆಗೆ ಪ್ರತ್ಯೇಕ ನಿಯಮ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ: ಪ್ರತ್ಯೇಕ ಸಭೆಗೆ ದಿನಾಂಕ ನಿಗದಿ–ಕೆ.ಜೆ.ಜಾರ್ಜ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 15:32 IST
Last Updated 12 ಜುಲೈ 2024, 15:32 IST
ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಶುಕ್ರವಾರ ನಡೆಯಿತು
ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಶುಕ್ರವಾರ ನಡೆಯಿತು   

ಚಿಕ್ಕಮಗಳೂರು: ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕಾಫಿ ತೋಟಗಳನ್ನು ಲೇಔಟ್ ಮಾಡಿ ವಿಲ್ಲಾಗಳನ್ನು ನಿರ್ಮಾಣ ಮಾಡುವುದನ್ನು ತಡೆಗಟ್ಟಲು ಪ್ರತ್ಯೇಕ ನಿಯಮ ರೂಪಿಸಿ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯಿತು. ಹುಲಿ ಸಂರಕ್ಷಿತ ಪ್ರದೇಶಕ್ಕೂ ರಿಯಲ್ ಎಸ್ಟೇಟ್ ನಡೆಯುತ್ತಿರುವ ಬಗ್ಗೆ ಜನವರಿ 8ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. 

ಈ ವಿಷಯದ ಬಗ್ಗೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ‘ಬೆಂಗಳೂರಿನ ಕಂಪನಿಗಳು ಕಾಫಿ ತೋಟಗಳನ್ನು ಖರೀದಿಸುತ್ತಿದ್ದು, ತೋಟಗಳನ್ನು ತುಂಡು ಭೂಮಿಯಾಗಿ ವಿಭಾಗಿಸಿ ವಿಲ್ಲಾಗಳನ್ನು ನಿರ್ಮಿಸಲು ಹೊರಟಿವೆ. ಇದರಿಂದ ಪರಿಸರಕ್ಕೆ ಧಕ್ಕೆ ಉಂಟಾಗಲಿದೆ. ಇದನ್ನು ಜಿಲ್ಲಾಡಳಿತ ತಡೆಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಮಾತನಾಡಿ, ‘ಇಂಥ ವಿಷಯಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅನುಮತಿ ನೀಡಬಾರದು, ಹಕ್ಕು ಬದಲಾವಣೆ ಮಾಡಬಾರದು’ ಎಂದು ಸೂಚನೆ ನೀಡಿದರು.

‘ಈ ಸಂಬಂಧ ಬೆಂಗಳೂರಿನಲ್ಲೂ ಉನ್ನತ ಮಟ್ಟದ ಚರ್ಚೆ ನಡೆದಿದೆ. ಕಾಫಿ ತೋಟಗಳನ್ನು ವಿಂಗಡಿಸಿ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಈ ಸಂಬಂಧ ಶೀಘ್ರವೇ ಸುತ್ತೋಲೆಯೊಂದನ್ನು ಹೊರಡಿಸಲಾಗುವುದು’ ಎಂದರು.

‘ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ರೆಸಾರ್ಟ್, ವಿಲ್ಲಾ ನಿರ್ಮಾಣ ಮಾಡುವುದು ತಪ್ಪು. ಈಗಿರುವ ಕಾಯ್ದೆ ಪ್ರಕಾರ ಅವುಗಳನ್ನು ತಡೆಯುವುದು ಕಷ್ಟ. ಇದನ್ನು ತಪ್ಪಿಸಲು ವಿಶೇಷ ನಿಯಮಗಳನ್ನು ಜಾರಿಗೆ ತರಬೇಕಾಗುತ್ತದೆ’ ಎಂದು ಹೇಳಿದರು.

ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಈ ವಿಷಯದ ಸಂಬಂಧ ಇಲ್ಲಿ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಪರಿಸರ ತಜ್ಞರ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ಕಾನೂನು ಗಟ್ಟಿಗೊಳಿಸದೆ ಪರಿಸರ ತಡೆಯಲು ಆಗುವುದಿಲ್ಲ’ ಎಂದು ಸಲಹೆ ನೀಡಿದರು.

ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ‘ಕರ್ನಾಟಕ ಭೂಸುಧಾರಣ ಕಾಯ್ದೆಯ ಪ್ರಕಾರ ನಿಗದಿಗಿಂತ ಹೆಚ್ಚಿನ ಕೃಷಿ ಜಮೀನನ್ನು ಹೊಂದುವಂತಿಲ್ಲ. ಆದರೆ, ಕಾಫಿ ಬೆಳೆಯನ್ನು ಕಡಿಮೆ ವಿಸ್ತೀರ್ಣದಲ್ಲಿ ಸಾಗುವಳಿ ಮಾಡುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಈ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ತುಂಡು ಭೂಮಿಯಾಗಿ ವಿಭಾಗಿಸಿದರೆ ಈ ವಿನಾಯಿತಿ ರದ್ದಾಗಲಿದೆ’ ಎಂದರು.

ನಿಯಮಾವಳಿ ರೂಪಿಸುವ ಸಂಬಂಧ ದಿನಾಂಕ ನಿಗದಿ ಮಾಡಲಾಗುವುದು. ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿವೃತ್ತ ಸರ್ಕಾರಿ ಅಕಾರಿಯೊಬ್ಬರು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಲು 30 ದಿನಗಳ ಕಾಲಾವಕಾಶವನ್ನು ಅರಣ್ಯ ಇಲಾಖೆಗೆ ನೀಡಲಾಗಿತ್ತು. ಆದರೆ, ಆರು ತಿಂಗಳು ಕಳೆದರೂ ತೆರವಾಗಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ, ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ ಸೇರಿ ಎಲ್ಲರೂ ಧ್ವನಿಗೂಡಿಸಿದರು. 24 ಗಂಟೆಯೊಳಗೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಪೊಲೀಸ್ ನೆರವು ಪಡೆದು ತೆರವುಗೊಳಿಸಬೇಕು ಎಂದು ಉಪಅರಣ್ಯ ಸಂರಕ್ಷಣಾಧಿಕಾರಿಗೆ ಕಟಾರಿಯಾ ಅವರು ಸೂಚನೆ ನೀಡಿದರು.

ಮಲ್ಲೇನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಆಶ್ರಯ ಮನೆ ನಿರ್ಮಿಸಿಕೊಂಡವರ ಮನೆಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ ಎಂದು ಸಿ.ಟಿ.ರವಿ ಆರೋಪಿಸಿದರು. ನವ ಗ್ರಾಮವೆಂದು ಸರ್ಕಾರವೇ ಘೋಷಣೆ ಮಾಡಿದೆ. ನಿವೇಶನ ನೀಡಿ ಆಶ್ರಯ ಮನೆಯನ್ನು ಮಂಜೂರು ಮಾಡಿದೆ ಎಂದರು.

‘ಲಕ್ಷಾಂತರ ಪ್ರದೇಶ ಅರಣ್ಯವಿದ್ದರೂ ಆಶ್ರಯ ಮನೆ ಕಡೆವಲು ಹೋರಟಿದ್ದೀರಾ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಚಿವ ಜಾರ್ಜ್ ತರಾಟೆಗೆ ತೆಗೆದುಕೊಂಡರು.

ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿ ಕೊಳವೆಬಾವಿ ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಸಂಸೆ ಗ್ರಾಮದಲ್ಲಿ ಆಶ್ರಯ ನಿವೇಶನ ನೀಡಲು ಐದು ಎಕರೆ ಜಾಗದಲ್ಲಿರುವ ಮರಗಳ ತೆರವಿಗೆ ವಿಳಂಬ ಕುರಿತು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳಿಗೆ ಜನರಿಗೆ ಸಹಾಯ ಮಾಡುವ ಮನಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ತಿನ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಕಾರಿ ಬಿ.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ವಿಕ್ರಮ ಅಮಟೆ ಹಾಜರಿದ್ದರು.

‘ಜಂಟಿ ಸರ್ವೆ ಸ್ವರೂಪ ಬದಲು’

ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಪರಿಹರಿಸಲು ಜಂಟಿ ಸರ್ವೆಯನ್ನು ಬೇರೆ ಸ್ವರೂಪದಲ್ಲೇ ಮಾಡಬೇಕಿದೆ. ಹಳ್ಳಿ–ಹಳ್ಳಿಗೆ ತೆರಳಿ ವಾಸ್ತವ ಪರಿಶೀಲಿಸಿ ಸರ್ವೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್ ಕಟಾರಿಯಾ ಹೇಳಿದರು. ‘ಜಂಟಿ ಸರ್ವೆ ನಡೆಸಲಾಗುತ್ತಿದ್ದು 15 ಸಾವಿರ ಎಕರೆಯ ಗೊಂದಲ ಬಗೆಹರಿದಿದೆ. ಅರಣ್ಯ ಭೂಮಿ ಮತ್ತು ಕಂದಾಯ ಭೂಮಿ ಬಗ್ಗೆ ಸಾಕಷ್ಟು ಗೊಂದಲ ಇದೆ’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು. ‘ಈ ಕುರಿತು ಅಧಿಕಾರಿಗಳೊಂದಿಗೆ ಗುರುವಾರವೇ ಚರ್ಚೆ ನಡೆಸಿದ್ದೇನೆ. ಸರ್ವೆ ಸ್ವರೂಪ ಬದಲಿಸಿಕೊಳ್ಳಲು ತಿಳಿಸಿದ್ದೇನೆ’ ಎಂದು ಸಭೆಗೆ ಕಟಾರಿಯಾ ಮಾಹಿತಿ ನೀಡಿದರು.

ಡೆಂಗಿ ನಿಯಂತ್ರಣಕ್ಕೆ ಕ್ರಮ ವಹಿಸಿ

ಡೆಂಗಿ ಹೆಚ್ಚಿರುವ ಪಟ್ಟಿಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ‘ಜನಸಂಖ್ಯೆ ಕಡಿಮೆ ಇದ್ದರೂ ತಪಾಸಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗಿದೆ. ಆದ್ದರಿಂದ ಡೆಂಗಿ ಪ್ರಕರಣ ಹೆಚ್ಚು ಎಂಬಂತೆ ಕಾಣಿಸಿದೆ. ನಿಯಂತ್ರಣಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ’ ಎಂದರು.  ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ ‘ಡೆಂಗಿ ಸಂಬಂಧ ಹೆಚ್ಚು ತಪಾಸಣೆ ಮಾಡಿರುವುದು ಒಳ್ಳೆಯದು. ಆದರೆ ವರದಿಯಲ್ಲಿ ನೆಗೆಟಿವ್ ಬಂದರೂ ಡೆಂಗಿ ಸೋಂಕು ದೇಹದಲ್ಲಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು’ ಎಂದು ಸಲಹೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ‘ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಜತೆಗೆ ಎಲ್ಲಾ ಇಲಾಖೆಗಳು ಕೈಜೋಡಿಸಿ ವಿಶೇಷ ಅಭಿಯಾನ ಕೈಗೊಂಡು ಒಂದು ವಾರದಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಬೇಕು’ ಎಂದು ಸೂಚನೆ ನೀಡಿದರು.

ದೇವಗೊಂಡನಹಳ್ಳಿ ಸಮಸ್ಯೆ ಚರ್ಚೆ

ಚಿಕ್ಕಮಗಳೂರು ತಾಲ್ಲೂಕಿನ ದೇವಗೊಂಡನಹಳ್ಳಿಯಲ್ಲಿ ವೈರಲ್ ಜ್ವರದಿಂದ ಇಡೀ ಊರಿನ ಜನ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ ಗುರುವಾರ ವರದಿ ಪ್ರಕಟಿಸಿತ್ತು. ಈ ವಿಷಯ ಸಭೆಯಲ್ಲಿ ಚರ್ಚೆಯಾಯಿತು. ‘ಪತ್ರಿಕೆಯಲ್ಲಿ ಸುದ್ದಿ ಬರುವ ತನಕ ಅಧಿಕಾರಿಗಳಿಗೇ ವಿಷಯ ತಿಳಿದಿಲ್ಲ. ನಾನೂ ಪತ್ರಿಕೆ ಓದಿ ಗ್ರಾಮಕ್ಕೆ ಭೇಟಿ ನೀಡಿ ಬಂದಿದ್ದೇನೆ. ಇಡೀ ಊರಿನ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಪತ್ರಿಕೆಯಲ್ಲಿ ವರದಿ ಬರುವ ತನಕ ಆರೋಗ್ಯ ಇಲಾಖೆಗೆ ಗೊತ್ತಾಗುವುದಿಲ್ಲ ಎಂದರೆ ಏನರ್ಥ’ ಎಂದು ಸಿ.ಟಿ.ರವಿ ಪ್ರಶ್ನಿಸಿದರು. ವಿಷಯ ಗೊತ್ತಾದ ಬಳಿಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಎಚ್‌ಒ ಅಶ್ವತ್ಥಬಾಬು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.