ADVERTISEMENT

ಕೊಟ್ಟಿಗೆಹಾರ: ಕಾನನದ ನಡುವೆ ಮನಸೆಳೆವ ಕೊಡಿಗೆ ಜಲಪಾತ

ಅನಿಲ್ ಮೊಂತೆರೊ
Published 17 ಅಕ್ಟೋಬರ್ 2024, 6:41 IST
Last Updated 17 ಅಕ್ಟೋಬರ್ 2024, 6:41 IST
ದುರ್ಗದಹಳ್ಳಿಯ ಕೊಡಿಗೆ ಜಲಪಾತದ ದೃಶ್ಯ
ದುರ್ಗದಹಳ್ಳಿಯ ಕೊಡಿಗೆ ಜಲಪಾತದ ದೃಶ್ಯ   

ಕೊಟ್ಟಿಗೆಹಾರ: ಹಸಿರು ಕಾನನದ ನಡುವೆ ಇರುವ ದುರ್ಗದಹಳ್ಳಿಯ ಕೊಡಿಗೆ ಜಲಪಾತ 200 ಅಡಿ ಆಳಕ್ಕೆ ಧುಮುಕಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಕೊಟ್ಟಿಗೆಹಾರದಿಂದ 15 ಕಿ.ಮೀ, ಸುಂಕಸಾಲೆಯಿಂದ 1 ಕಿ.ಮೀ ದೂರದಲ್ಲಿ ಬಲ್ಲಾಳರಾಯನ ದುರ್ಗಕ್ಕೆ ಹೋಗುವ ದಾರಿಯಲ್ಲಿ ರಾಣಿಝರಿ ನೋಡಿ ಸಂಭ್ರಮಪಟ್ಟು, ಅಲ್ಲಿಂದ ದುರ್ಗದಹಳ್ಳಿ ಶಾಲೆಯ ಬಳಿ ಎಡಕ್ಕೆ ಸಾಗಿದರೆ ಈ ರಸ್ತೆ ನೇರವಾಗಿ ಕೊಡಿಗೆ ಜಲಪಾತಕ್ಕೆ ಬಂದು ನಿಲ್ಲುತ್ತದೆ. 

ದುರ್ಗದಹಳ್ಳಿಯ ಕೊಡಿಗೆ ಜಲಪಾತದ ದೃಶ್ಯ

ಜಲರಾಶಿಯ ನಡುವೆ ದುರ್ಗದ ಬೆಟ್ಟ, ಮಂಜು ಮುಸುಕಿನ ಸೊಬಗು ಪರಿಸರ ಆರಾಧಕರ ಕಣ್ಣಿಗೆ ಹಬ್ಬವಾಗಿದೆ. ಕೊಡಿಗೆ ಜಲಪಾತದ ಬಳಿ ವಾಹನ ನಿಲುಗಡೆ ಸೌಲಭ್ಯವಿದೆ. ಇಲ್ಲಿ  ವಾಹನ ನಿಲ್ಲಿಸಿ ಜಲಪಾತದ ನೀರಿನಲ್ಲಿ ಸ್ನಾನ ಮಾಡಿ ಬರುವವರಿಗೆ ಸವಿಯಲು ಬಿಸಿ ಕಾಫಿ, ಮೆಣಸಿನ ಕಾಯಿ ಬಜ್ಜಿ, ತಿಂಡಿ, ತಿನಿಸುಗಳು ಜಲಪಾತದ ಬಳಿ ಇರುವ ಕೆಫೆಯಲ್ಲೇ ದೊರಕುತ್ತವೆ. ರಾಣಿಝರಿ ನೋಡಲು ಬರುವ ಪ್ರವಾಸಿಗರು ಅಲ್ಲಿಂದ ದುರ್ಗದಹಳ್ಳಿಯ ಕೊಡಿಗೆ ಜಲಪಾತ ನೋಡದಿದ್ದರೆ ಪ್ರವಾಸ ಪೂರ್ಣಗೊಳ್ಳುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ADVERTISEMENT

‘ಒತ್ತಡದ ನಡುವೆ ನಲುಗುವ ನಗರವಾಸಿಗಳಾದ ನಮಗೆ ಕೊಡಿಗೆ ಫಾಲ್ಸ್ ಹಾಗೂ ರಾಣಿಝರಿ ಪ್ರವಾಸ ಮನೋಲ್ಲಾಸ ನೀಡುತ್ತದೆ. ಇಲ್ಲಿ ಬಂದರೆ ಮನಸ್ಸಿನಲ್ಲಿ  ಪ್ರಶಾಂತತೆ ಮನೆ ಮಾಡುತ್ತದೆ. ಚಾರಣಕ್ಕೆ ಈ ಪ್ರದೇಶ ಸೂಕ್ತವಾಗಿದೆ’ ಎಂದು ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ನಾಸೀರ್ ಸಜೀಪ ಎಂಬುವರು ಅಭಿಪ್ರಾಯಪಟ್ಟರು.

ಕೊಡಿಗೆ ಜಲಪಾತದಲ್ಲಿ ಪ್ರವಾಸಿಗರೊಬ್ಬರು ಸಂಭ್ರಮಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.