ಕೊಪ್ಪ: ನಾಲ್ಕು ದಶಕಗಳ ಹಿಂದೆ ಆರಂಭಗೊಂಡ ಪಟ್ಟಣ ಸಮೀಪದ ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ.
ಕಲಿಕೆಗೆ ಪೂರಕ ವಾತಾವರಣವಿರುವ ಕಾಲೇಜಿನಲ್ಲಿ ₹1 ಕೋಟಿ ವೆಚ್ಛದ ಗ್ರಂಥಾಲಯ ಕಟ್ಟಡವಿದ್ದು, 24 ಸಾವಿರ ಪುಸ್ತಕಗಳಿವೆ. ₹3.40 ಕೋಟಿ ವೆಚ್ಛದ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದೆ. ಸದ್ಯ ಎಂ.ಕಾಂ. ಸ್ನಾತಕೋತ್ತರ ತರಗತಿಗಳು ನಡೆಯುತ್ತಿದ್ದು, ಈ ಬಾರಿ ಎಂ.ಎ ಕನ್ನಡ ಆರಂಭಗೊಳ್ಳುವ ನಿರೀಕ್ಷೆ ಇದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ₹2.25 ಕೋಟಿ ವೆಚ್ಛದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ನಡೆಯುತ್ತಿದೆ. ಇದರಲ್ಲಿ ಮಲ್ಟಿ ಜಿಮ್, ವಾಲಿಬಾಲ್ ಕೋರ್ಟ್, ಶಟಲ್ ಕೋರ್ಟ್, ಕಬಡ್ಡಿ ಕೋರ್ಟ್, ಪ್ರೋ ಕಬಡ್ಡಿ ಇಂಟರ್ ನ್ಯಾಷನಲ್ ಆಡಿಸಬಹುದು. ₹3.50 ಲಕ್ಷ ಮೊತ್ತದ ಸಿಂಥೆಟಿಕ್ ಮ್ಯಾಟ್ ಬಂದಿದೆ.
ಒಳಾಂಗಣ ಕ್ರೀಡಾಂಗಣಕ್ಕೆ ಅಗತ್ಯವಿದ್ದ ₹90 ಲಕ್ಷ ಅನುದಾನವನ್ನು ಶಾಸಕ ಟಿ.ಡಿ.ರಾಜೇಗೌಡ ಅವರು ಮಂಜೂರು ಮಾಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಕೆಲಸ ಆರಂಭಗೊಳ್ಳಲಿದೆ ಎಂದು ಕಾಲೇಜು ಮೂಲಗಳು ಹೇಳಿವೆ.
19 ಮಂದಿ ಬೋಧಕ, 4 ಮಂದಿ ಬೋಧಕೇತರ ಸಿಬ್ಬಂದಿ, 18 ಮಂದಿ ಅತಿಥಿ ಉಪನ್ಯಾಸರು ಇದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ 4 ಮಂದಿ ನಿಯೋಜನೆಗೊಂಡಿದ್ದಾರೆ. ಸರ್ಕಾರದ ಹೊರಗುತ್ತಿಗೆ ಆಧಾರದಲ್ಲಿ ಒಬ್ಬರು, ರಾತ್ರಿ ವಾಚ್ ಮನ್ ಸೇರಿದಂತೆ 6 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಭದ್ರತೆಗಾಗಿ 16 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇತ್ತೀಚೆಗೆ ನವೀಕರಣಗೊಂಡ ಕಟ್ಟಡದಲ್ಲಿ 8 ಶೌಚಾಲಯಗಳಿವೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸದಾಗಿ ಬಿಸಿಎ, ಇಂಗ್ಲಿಷ್ ಐಚ್ಛಿಕ, ಶಿಕ್ಷಣ ಶಾಸ್ತ್ರ ಆರಂಭಿಸಲಾಗಿದೆ. ಸರ್ಟಿಫಿಕೇಟ್ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಪ್ರತಿವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ, ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ.
Quote - ಜಯಪುರ ಹರಿಹರಪುರದಲ್ಲಿ ಹೊಸ ಕಾಲೇಜು ಆರಂಭಗೊಂಡಿದೆ ಜತೆಗೆ ಪದವಿ ಬದಲು ಬೇರೆ ಕೋರ್ಸ್‌ಗಳತ್ತ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿರುವುದರಿಂದ ದಾಖಲಾತಿ ಸ್ವಲ್ಪ ಕಡಿಮೆಯಾಗಿದೆ ಎಸ್.ಅನಂತ ಪ್ರಾಂಶುಪಾಲ
Cut-off box - ರಾಜ್ಯದಲ್ಲಿ 34ನೇ ಸ್ಥಾನ ಕಾಲೇಜಿಗೆ ‘ನ್ಯಾಕ್’ ಸಮಿತಿಯಿಂದ 2018ರಲ್ಲಿ 2.52(ಬಿ) ಗ್ರೇಡ್ ಮಾನ್ಯತೆ ಲಭಿಸಿತ್ತು ಪ್ರಸ್ತುತ 2.97(ಬಿ’ ಪ್ಲಸ್ ಪ್ಲಸ್) ಶ್ರೇಣಿ ಇದೆ. ರಾಜ್ಯದ 430 ಸರ್ಕಾರಿ ಕಾಲೇಜುಗಳ ಪೈಕಿ ಈ ಕಾಲೇಜು 34ನೇ ಸ್ಥಾನದಲ್ಲಿದೆ. ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬರು ಕಳೆದ ಬಾರಿ ಬಿಎಸ್ಸಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ 9ನೇ ರ್‍ಯಾಂಕ್ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.