ತರೀಕೆರೆ: ಸಂವಿಧಾನ ಬದಲಿಸುತ್ತಾರೆ ಎಂದು ಕೆಲವರು ಅಪಪ್ರಚಾರ ಮಾಡಿದರು. ಸಂವಿಧಾನವನ್ನು ತಲೆಗೆ ಒತ್ತಿಕೊಂಡು ನಮಸ್ಕರಿಸಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗುವುದರ ಮೂಲಕ ಅಪಪ್ರಚಾರ ಮಾಡುವವರಿಗೆ ನರೇಂದ್ರ ಮೋದಿಯವರು ತಿರುಗೇಟು ನೀಡಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಭಾರತೀಯ ಜನತಾ ಪಾರ್ಟಿ ತರೀಕೆರೆ ಮಂಡಲದ ವತಿಯಿಂದ ನೂತನವಾಗಿ ಚುನಾಯಿತರಾದ ಸಂಸದ ಕೋಟಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ತಿನ ನೂತನ ಸದಸ್ಯರಾದ ಸಿ.ಟಿ. ರವಿ, ಡಾ. ಧನಂಜಯ್ ಸರ್ಜಿ ಹಾಗೂ ಎಸ್.ಎಲ್. ಭೋಜೇಗೌಡರವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
'ದೇಶದ ಭದ್ರತೆಗಾಗಿ ಮತದಾರರು ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಇಪ್ಪತ್ತು ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಯನ್ನು ನೀಡಿದ್ದಾರೆ. ಇದಕ್ಕೆ ಕಠಿಣ ಪರಿಶ್ರಮದಿಂದ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ಚಿರಋಣಿಯಾಗುರುತ್ತೇನೆ. ಅದರಂತೆಯೇ ನಾನು ಸಹ ತಮ್ಮ ಸೇವೆಯನ್ನು ಮಾಡುತ್ತೇನೆ‘ ಎಂದರು.
ಹತ್ಯೆ-ಆತ್ಮಹತ್ಯೆಗಳೇ ಹೆಚ್ಚಾಗುತ್ತಿದ್ದು, ಕೊಲೆಗಡುಕರಿಗೆ ಭಯವಿಲ್ಲದಂತಾಗಿದೆ. ರಾಜ್ಯ ಸರ್ಕಾರ ಇನ್ನು ಆರು ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸದಿದ್ದರೆ ಅವರ ಪಕ್ಷದಲ್ಲಿಯೇ ದಂಗೆಯುಂಟಾಗುತ್ತದೆ ಎಂದು ವಿಧಾನ ಪರಿಷತ್ತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ಸ್ಥಾನಗಳನ್ನು ಸೋತು ಕಂಗೆಟ್ಟಿದ್ದ ಕಾರ್ಯಕರ್ತರಿಗೆ ಲೋಕಸಭೆ ಮತ್ತು ವಿಧಾನ ಪರಿಷತ್ತಿನ ಮೂರು ಸ್ಥಾನಗಳನ್ನು ಮೈತ್ರಿ ಅಭ್ಯರ್ಥಿಗಳು ಗೆದ್ದಿರುವುದು ಶಕ್ತಿ ತುಂಬಿದಂತಾಗಿದೆ. ಇದರಿಂದ ನಮ್ಮ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರಿಯಾಗಿದೆ ಎಂದರು.
ವಿಧಾನಪರಿಷತ್ತಿನ ಸದಸ್ಯ ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಟಿ.ಎಲ್. ರಮೇಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ್ರತಾಪ್, ಮುಖಂಡರಾದ ಭೋಜರಾಜ್, ಬೇಲೇನಹಳ್ಳಿ ಸೋಮಶೇಖರ್, ಚೈತ್ರಶ್ರೀ, ರಾಜೇಶ್ವರಿ, ಬಗ್ಗವಳ್ಳಿ ಬಸವರಾಜ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಂ. ನರೇಂದ್ರ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.