ADVERTISEMENT

ಕುದುರೆಮುಖ: ಸ್ಥಳಾಂತರಕ್ಕಾಗಿ ಕಾದಿರುವ ಒಂಟಿ ವೃದ್ಧೆಯರು

ರವಿ ಕೆಳಂಗಡಿ
Published 29 ಜುಲೈ 2024, 7:48 IST
Last Updated 29 ಜುಲೈ 2024, 7:48 IST
ಕಳಸ ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕುನ್ನಿಹಳ್ಳ ಪ್ರದೇಶದಲ್ಲಿ ಪುನರ್‌ವಸತಿ ಪ್ಯಾಕೇಜ್‌ಗಾಗಿ ಕಾದಿರುವ ಶಾಮಲಾದೇವಿ
ಕಳಸ ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕುನ್ನಿಹಳ್ಳ ಪ್ರದೇಶದಲ್ಲಿ ಪುನರ್‌ವಸತಿ ಪ್ಯಾಕೇಜ್‌ಗಾಗಿ ಕಾದಿರುವ ಶಾಮಲಾದೇವಿ   

ಕಳಸ: ದಟ್ಟ ಅರಣ್ಯದ ನಡುವೆ ಶಿಥಿಲಗೊಂಡ ಮೂರು ಮನೆಗಳು. ಈ ಮೂರೂ ಮನೆಗಳಲ್ಲಿ ತಲಾ ಒಬ್ಬೊಬ್ಬರು ಮಾತ್ರ ವಾಸ. ಅವರಲ್ಲಿ ಇಬ್ಬರು ವೃದ್ಧೆಯರು. ವನ್ಯಮೃಗಗಳ ಭೀತಿಯಿಂದ ಸಂಜೆ 6 ಗಂಟೆಯಾಗುತ್ತಿದ್ದಂತೆ ಈ ಮನೆಗಳಿಗೆ ಬಾಗಿಲು ಹಾಕಲಾಗುತ್ತದೆ. ಮರುದಿನ ಬೆಳಕು ಹರಿದ ಮೇಲಷ್ಟೇ ಬಾಗಿಲು ತೆರೆಯುವುದು.  ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕುದುರೆಮುಖ ಪಟ್ಟಣದಿಂದ 3  ಕಿ.ಮೀ. ದೂರದ ಕುನ್ನಿಹಳ್ಳ ಪ್ರದೇಶದಿಂದ ಸ್ಥಳಾಂತರಕ್ಕಾಗಿ ವರ್ಷಗಳಿಂದ ಕಾಯುತ್ತಿರುವ ಮೂರು ಕುಟುಂಬಗಳ ದುಃಸ್ಥಿತಿ ಇದು.

ಈ ಮೂರೂ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಅವರಿಗೆ ಪರಿಹಾರ ಕೊಡುವ ಪ್ರಕ್ರಿಯೆಯನ್ನು ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಆದರೆ, ತಾಂತ್ರಿಕ ಕಾರಣದಿಂದ ಈವರೆಗೂ ಅವರಿಗೆ ಪುನರ್ವಸತಿ ಪ್ಯಾಕೇಜ್ ಸಿಕ್ಕಿಲ್ಲ. ಧಾರಾಕಾರವಾಗಿ ಮಳೆ ಬೀಳುವ  ಈ ಪ್ರದೇಶದಲ್ಲಿ ಈಗಲೋ ಆಗಲೋ ಬೀಳುವಂತಿರುವ ಮನೆಗಳಲ್ಲೇ ಇಬ್ಬರು ವೃದ್ಧೆಯರು, ಮತ್ತೊಬ್ಬ ಪುರುಷ ದಯನೀಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ.

ನಾಲ್ಕು ದಶಕಗಳಿಂದ ಈ ದಟ್ಟ ಅರಣ್ಯದಲ್ಲೇ ನೆಲೆಸಿರುವ ವೃದ್ಧೆ ಶಾಮಲಾದೇವಿ ಸ್ಥಳಾಂತರದ ಪ್ಯಾಕೇಜ್‌ಗಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ, ತಹಶೀಲ್ದಾರ್, ಮೂಡಿಗೆರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ,  ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಕಚೇರಿಗೆ ಹಲವು ಬಾರಿ ಅಲೆದಿದ್ದಾರೆ. ಸ್ಥಳಾಂತರ ಪ್ಯಾಕೇಜ್‌ಗಾಗಿ ಕೈಮುಗಿದು ಅಂಗಲಾಚಿದ್ದಾರೆ. ಆದರೆ,  ಫಲಿತಾಂಶ ಮಾತ್ರ ಶೂನ್ಯ.

ADVERTISEMENT

'ನಮ್ಮ ಮೂರೂ ಮನೆಗಳಿಗೆ ₹10  ಲಕ್ಷ  ಆಸುಪಾಸಿನ ಪ್ಯಾಕೇಜ್ ಯಾವಾಗಲೋ ಸಿಗಬೇಕಿತ್ತು. ಆದರೆ, ವರ್ಷಗಳಿಂದ ವೃದ್ಧಾಪ್ಯ ವೇತನದ ಹಣ, ಯಾರೋ ಕೈ ಸಹಾಯ ಮಾಡುವ ಹಣವೆಲ್ಲ ಕಚೇರಿ ಸುತ್ತಾಟಕ್ಕೇ ಖರ್ಚಾಗಿದ್ದು, ಯಾವ ಪ್ರಯೋಜನವೂ ಆಗಿಲ್ಲ' ಎಂದು ಶಾಮಲಾ ದೇವಿ ನೋವಿನಿಂದ ನುಡಿದರು.

'ನಮ್ಮ ಮನೆಗಳಿಗೆ ಪರಿಹಾರ ಪಡೆಯಲು ಇ-ಸ್ವತ್ತು ಮಾಡಿಸಬೇಕು ಎಂದು ಕಾರ್ಕಳ ಡಿಎಫ್‌ಒ ಹೇಳಿದ್ದಾರೆ.ಕುದುರೆಮುಖ ಅಧಿಸೂಚಿತ ಪ್ರದೇಶದ ನಮ್ಮ ಮನೆಗಳ ದಾಖಲೆಗೆ ಮೂಡಿಗೆರೆ ಪಟ್ಟಣ ಪಂಚಾಯಿತಿಗೆ ಹೋಗಬೇಕಾಗುತ್ತದೆ. ಸದ್ಯಕ್ಕೆ ನಮ್ಮ ಕೈಯಲ್ಲಿ ಆ ಕೆಲಸ ಆಗುತ್ತಿಲ್ಲ' ಎಂದು ಶಾಮಲಾದೇವಿ ನಿರಾಸೆಯಿಂದ ಹೇಳಿದರು.

'ನಮ್ಮ ಮೂರೂ ಮನೆಗಳು ಈ ಮಳೆಗಾಲದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಮಳೆಯಿಂದಾಗಿ ಸೌರಶಕ್ತಿ ಚಾಲಿತ ದೀಪ ಉರಿಯುತ್ತಿಲ್ಲ. ಸಂಜೆ 6  ಗಂಟೆಯ ನಂತರ ಮನೆಯ ಬಾಗಿಲು ತೆಗೆಯಲು ಧೈರ್ಯ ಇಲ್ಲ. ಮನೆ ಸಮೀಪದಲ್ಲೇ ಸೀಳುನಾಯಿಗಳ ಹಿಂಡು, ಚಿರತೆ, ಕುರ್ಕ ಬರುತ್ತವೆ' ಎಂದು ಇಲ್ಲಿನ ಮತ್ತೊಂದು ಮನೆಯು ನಿವಾಸಿ  ನಾಗರತ್ನಮ್ಮ ಆತಂಕದಿಂದ ಹೇಳಿದರು.

'ನಮಗೆ ಆರೋಗ್ಯ ಸಮಸ್ಯೆ ಆದಾಗ 25 ಕಿ.ಮೀ ದೂರದ ಕಳಸಕ್ಕೆ ಹೋಗಬೇಕು. ನಾವು ಅನಾಥರಾಗಿದ್ದೇವೆ. ಗಾಳಿ ಮಳೆಯಲ್ಲಿ ಈ ವರ್ಷ ಬದುಕಿ ಉಳಿಯುವ ಭರವಸೆ ಇಲ್ಲ ಎಂದೂ ನಾಗರತ್ನಮ್ಮ ಹತಾಶೆಯಿಂದ ಹೇಳಿದರು.

ಈ ಕುಟುಂಬಗಳ ಪುನರ್ವಸತಿ ಪ್ಯಾಕೇಜ್ ಬಗ್ಗೆ ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಜ್ಯೋತಿ ಮೆಣಸಿನಕಾಯಿ ಪ್ರತಿಕ್ರಿಯಿಸಿ, ‘ಈ ಮೂರೂ ಕುಟುಂಬಗಳ ಪ್ಯಾಕೇಜ್ ಬಗ್ಗೆ ಅಗತ್ಯ ಪ್ರಕ್ರಿಯೆ ನಡೆಯುತ್ತಿದೆ. ಇ-ಸ್ವತ್ತು ದಾಖಲೆ ಸಿಗದೆ ಅವರಿಗೆ ಸಮಸ್ಯೆ ಆಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.