ನರಸಿಂಹರಾಜಪುರ: ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಕ್ಕಿ ಗ್ರಾಮ ಸಮೀಪದ ಅಬ್ಬಿಗುಂಡಿ ಜಲಪಾತ ಜನರನ್ನು ಆಕರ್ಷಿಸುತ್ತಿದ್ದು, ಇಲ್ಲಿ ಮೂಲಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕುದುರೆಗುಂಡಿ ಗ್ರಾಮದಿಂದ 4 ಕಿ.ಮೀ ಹಾಗೂ ನಾಗರಮಕ್ಕಿ ಗ್ರಾಮದಿಂದ 2 ಕಿ.ಮೀ ದೂರದಲ್ಲಿ ಈ ಜಲಪಾತವಿದೆ.
ಅಬ್ಬಿಗುಂಡಿ ಜಲಪಾತದಲ್ಲಿ ಜೂನ್‌ನಿಂದ ಫೆಬ್ರುವರಿವರೆಗೂ ನೀರು ಧುಮ್ಮುಕ್ಕಿ ಹರಿಯುತ್ತದೆ. ಮಳೆ ಹೆಚ್ಚಿರುವ ಜುಲೈನಿಂದ ಸೆಪ್ಟೆಂಬರ್‌ವರೆಗೆ ನೀರು ಭೋರ್ಗರೆದು ಹರಿಯುತ್ತದೆ. ಈ ಜಲಪಾತದಿಂದ ಹಾಲಿನ ನೊರೆಯಂತೆ ನೀರು ಬಂಡೆಗಳ ಮೇಲೆ ಹರಿದು ಹೋಗುವ ದೃಶ್ಯ ನೋಡುಗರ ಮೈ ರೋಮಾಂಚನ ಗೊಳಿಸುತ್ತದೆ.
ಎಚ್.ಜಿ.ಗೋವಿಂದೇಗೌಡರು ಸಚಿವರಾಗಿದ್ದ ಅವಧಿಯಲ್ಲಿ 50 ವರ್ಷಗಳ ಹಿಂದೆ ಈ ಜಲಪಾತ ನಿರ್ಮಾಣವಾಯಿತು. ಕುದುರೆಗುಂಡಿಯಿಂದ ಹರಿದು ಬರುತ್ತಿದ್ದ ಕಪಿಲಾ ಹಳ್ಳಕ್ಕೆ ಅಬ್ಬಿಗುಂಡಿಯಲ್ಲಿ ಸಣ್ಣ ಅಣೆಕಟ್ಟು ನಿರ್ಮಿಸಲಾಯಿತು. ಕಾಲುವೆ ಮೂಲಕ ಜೋಗಿ ಹಡಲು, ಮಹಂತನ ಮಠ, ಕುಂಟೇ ಹಡಲು, ಹಳ್ಳಿಬೈಲು ಗ್ರಾಮದ ಜಮೀನಿಗೆ ನೀರು ಒದಗಿಸುವುದು ಈ ಜಲಾಶಯದ ಉದ್ದೇಶ. ಇದು ಕಾಲುವೆ ಮೂಲಕ ನೀರು ಹರಿದು ಹೋಗುವ ಫಿಕಪ್ ಡ್ಯಾಂ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಗ್ರಾಮಸ್ಥರಿಂದ ಈ ಜಲಪಾತ ಹೊರ ಪ್ರಪಂಚದ ಬೆಳಕಿಗೆ ಬಂದಿದೆ.
ಅಬ್ಬಿಗುಂಡಿ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಬೇಕಾಗಿದೆ. ಕುದುರೆಗುಂಡಿ, ನಾಗರಮಕ್ಕಿ, ಅಬ್ಬಿಗುಂಡಿ ಜಲಪಾತಕ್ಕೆ ಹೋಗುವ ಮಾರ್ಗದ ತಿರುವುಗಳಲ್ಲಿ ನಾಮಫಲಕ ಅಳವಡಿಸಬೇಕು. ರಸ್ತೆ ಕೆಸರು ಮಯವಾಗಿದ್ದು ಕಾರ್ಕಿಟ್ ರಸ್ತೆ ಅಥವಾ ಟಾರ್ ರಸ್ತೆ ನಿರ್ಮಿಸಬೇಕು. ಎತ್ತರದಲ್ಲಿರುವ ಬಂಡೆ ಮೇಲೆ ನಿಂತು ಜಲಪಾತದ ಸೌಂದರ್ಯ ಸವಿಯಲು ರಕ್ಷಣಾ ಬೇಲಿ ನಿರ್ಮಿಸಬೇಕು, ಜಲಪಾತಕ್ಕೆ ಇಳಿಯಬೇಡಿ ಎಂಬ ಎಚ್ಚರಿಕೆ ಫಲಕ ಅಳವಡಿಸಬೇಕು ಎನ್ನವುದು ಗ್ರಾಮಸ್ಥರ ಒತ್ತಾಯ.
‘ಜಲಪಾತ ಅಭಿವೃದ್ಧಿ’
ಅಬ್ಬಿಗುಂಡಿ ಜಲಪಾತ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ನಂತರ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿಗೆ ಅನುದಾನ ಮೀಸಲಾಗಿಡಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಬ್ಬಿಗುಂಡಿ ಜಲಪಾತ ವೀಕ್ಷಣೆಗೆ ಜಿಲ್ಲೆ ಹಾಗೂ ರಾಜ್ಯದ ಬೇರೆ ಬೇರೆ ಭಾಗದಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿ ಹಾಗೂ ನಾಮಫಲಕ ಅಳವಡಿಸಬೇಕುಪಿ.ಕೆ.ಬಸವರಾಜಪ್ಪ, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.