ಮೂಡಿಗೆರೆ: 'ಕೃಷಿ ಭೂಮಿಯನ್ನು ಇತರೆ ಉದ್ದೇಶಗಳಿಗೆ ಪರಿವರ್ತನೆಗೊಳಿಸುವಾಗ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂಬ ಹೊಸ ನಿಯಮವು ಸೂಕ್ತವಾಗಿದೆ’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ. ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಭೂಮಿ ಪರಿವರ್ತನೆಗೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಅನಗತ್ಯ ಎಂದು ಕೆಲವರು ಹೇಳಿದ್ದಾರೆ. ಆದರೆ, ಅದು ರೈತ ಸಂಘದ ಹೇಳಿಕೆಯಲ್ಲ. ಕೃಷಿ ಭೂಮಿ ಪರಿವರ್ತನೆಗೊಳಿಸಿ ಕಟ್ಟಡ ಕಟ್ಟಿದ ಮೇಲೆ, ಕಟ್ಟಡವನ್ನು ಕಟ್ಟಿರುವ ಪ್ರದೇಶವು ಅರಣ್ಯ ವ್ಯಾಪ್ತಿಗೆ ಬರುತ್ತದೆ ಎಂದು ಅರಣ್ಯ ಇಲಾಖೆಯು ತಕರಾರು ತೆಗೆದಿರುವ ಹಲವು ಪ್ರಕರಣಗಳಿವೆ. ರೈತರ ಭೂಮಿಯ ಸಂಪೂರ್ಣ ಮಾಹಿತಿ ಕಂದಾಯ ಇಲಾಖೆಯಲ್ಲಿದ್ದರೂ, ಇಂದಿಗೂ ಕಂದಾಯ ಭೂಮಿ, ಅರಣ್ಯ ಭೂಮಿ ಕುರಿತು ಗೊಂದಲಗಳು ಬಗೆಹರಿದಿಲ್ಲ. ರೈತರಿಂದ ಭೂ ಪರಿವರ್ತನೆಗೆ ಅರ್ಜಿ ಬಂದಾಗ, ತಹಶೀಲ್ದಾರ್ ಅವರು ಅರಣ್ಯ ಇಲಾಖೆಗೆ ಪತ್ರ ವ್ಯವಹಾರ ನಡೆಸಿ, ಅರ್ಜಿದಾರರು ನೀಡಿರುವ ಸರ್ವೆ ನಂಬರ್‌ಗೆ ನಿರಾಕ್ಷೇಪಣೆ ನೀಡುವಂತೆ ಅರಣ್ಯ ಇಲಾಖೆಯನ್ನು ಕೋರಬೇಕು. ಒಂದು ವೇಳೆ ತಕರಾರು ಬಂದರೆ ಪ್ರಾರಂಭದಲ್ಲಿಯೇ ಬಗೆಹರಿಸಿಕೊಂಡು ಭೂ ಪರಿವರ್ತನೆ ಮಾಡಿಕೊಂಡರೆ ಭವಿಷ್ಯದಲ್ಲಿ ತೊಂದರೆ ಆಗುವುದನ್ನು ತಪ್ಪಿಸಬಹುದು’ ಎಂದರು.
ರೈತ ಸಂಘದ ರಾಜ್ಯ ಘಟಕದ ಮಹಿಳಾ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮಣಗೌಡ ಮಾತನಾಡಿ, ‘ಅರಣ್ಯ ಇಲಾಖೆ ನಿರಾಕ್ಷೇಪಣೆ ಪಡೆಯುವುದು ಸ್ವಲ್ಪ ಕಷ್ಟವೆನಿಸಿದರೂ ಭವಿಷ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದರು.
ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.