ಚಿಕ್ಕಮಗಳೂರು: ಸಾಗುವಳಿಯನ್ನೇ ಮಾಡದವರಿಗೆ ಸಾಗುವಳಿ ಚೀಟಿ ನೀಡಿದ್ದ ಮತ್ತೊಂದು ಅಕ್ರಮ ಭೂಮಂಜೂರಾತಿ ಪ್ರಕರಣ ತರೀಕೆರೆ ತಾಲ್ಲೂಕಿನಲ್ಲಿ ಬಯಲಿಗೆ ಬಂದಿದೆ. ತರೀಕೆರೆ ಉಪವಿಭಾಗಾಧಿಕಾರಿ ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದ್ದು, ಸಾಗುವಳಿಗೆ ತಡೆ ನೀಡಿದ್ದಾರೆ.
ಕಂದಾಯ ಕಾಯ್ದೆ ಪ್ರಕಾರ, ನಮೂನೆ 50, 53 ಮತ್ತು 57ರಲ್ಲಿ ಭೂಮಂಜೂರಾತಿ ಕೋರಿರುವವರು ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರಬೇಕು. 2002ನೇ ಇಸವಿಗಿಂತ ಮೊದಲೇ ಸಾಗುವಳಿ ಮಾಡುತ್ತಿರಬೇಕು. ಅಷ್ಟರಲ್ಲಿ ಅರ್ಜಿದಾರನಿಗೆ 18 ವರ್ಷ ಪೂರ್ಣಗೊಂಡಿರಬೇಕು, ಅರ್ಜಿದಾರನೇ ಸಾಗುವಳಿ ಮಾಡುತ್ತಿರಬೇಕು. ಒಂದು ಕುಟುಂಬಕ್ಕೆ 4 ಎಕರೆ 38 ಗುಂಟೆಗೂ ಹೆಚ್ಚು ಆಸ್ತಿ ಮಂಜೂರು ಮಾಡುವಂತಿಲ್ಲ.
ಸಾಗುವಳಿ ಮಾಡುತ್ತಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಯ ವರದಿ ಪಡೆಯಬೇಕು, ಭೂಮಾಪಕರು ನಕ್ಷೆ ಸಿದ್ಧಪಡಿಸಬೇಕು, ಶಾಸಕರ ಅಧ್ಯಕ್ಷತೆಯ ಸಮಿತಿ ಮುಂದೆ ದಾಖಲೆ ಮಂಡಿಸಬೇಕು. ಸಮಿತಿ ಸಭೆಯ ಬಯೋಮೆಟ್ರಿಕ್ ಹಾಜರಾತಿ, ಸಭೆಯ ಫೋಟೊ, ಸಾಗುವಳಿ ಜಾಗದ ಚಿತ್ರಗಳನ್ನು ಆ್ಯಪ್‍ನಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಸ್ಥಳ ಪರಿಶೀಲನೆ ನಡೆಸಿ ಮಂಜೂರಾತಿ ಮಾಡಬೇಕು.
ಕಂದಾಯ ಜಾಗವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು, ಅರಣ್ಯ ಜಾಗವಾಗಿದ್ದರೆ ಯಾವುದೇ ಕಾರಣಕ್ಕೂ ಮಂಜೂರು ಮಾಡುವಂತಿಲ್ಲ ಎಂಬ ನಿಯಮ ಇವೆ. ಆದರೆ, ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮಂಜೂರು ಮಾಡಿರುವುದು ತರೀಕೆರೆ ತಾಲ್ಲೂಕಿನ ನಂದಿ ಗ್ರಾಮ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹಿಂದಿನ ತಹಶೀಲ್ದಾರ್ ಒಬ್ಬರು 50 ಎಕರೆ ಸರ್ಕಾರಿ ಜಾಗದಲ್ಲಿ ಹಲವರಿಗೆ ಭೂಮಿ ಮಂಜೂರು ಮಾಡಿದ್ದಾರೆ. ಸಾಗುವಳಿ ಚೀಟಿ ಪಡೆದಿದ್ದವರು ಇತ್ತಿಚೆಗೆ ಸಾಗುವಳಿ ಮಾಡಲು ಮುಂದಾಗಿದ್ದರು. ರಾತ್ರೋರಾತ್ರಿ ಜೆಸಿಬಿ ಮೂಲಕ ಸಮತಟ್ಟು ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ಉಪವಿಭಾಗಾಧಿಕಾರಿ ನೇತೃತ್ವ ತಂಡ ಸ್ಥಳಕ್ಕೆ ತೆರಳಿ ಸಾಗುವಳಿ ತಡೆದಿದ್ದಾರೆ. ಜೆಸಿಬಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.