ADVERTISEMENT

ಆಲ್ದೂರು | ರಸ್ತೆ ತಿರುವಿನಲ್ಲಿ ಮಣ್ಣು ಕುಸಿತ: ಸಂಪರ್ಕ ಕಡಿತದ ಭೀತಿ

ರಾಜ್ಯ ಹೆದ್ದಾರಿ 27ರ ರಸ್ತೆ ತಿರುವಿನಲ್ಲಿ ತಾತ್ಕಾಲಿಕ ತಡೆಗೋಡೆಗೆ ಹಾನಿ

ಜೋಸೆಫ್ ಎಂ.ಆಲ್ದೂರು
Published 13 ಅಕ್ಟೋಬರ್ 2024, 5:29 IST
Last Updated 13 ಅಕ್ಟೋಬರ್ 2024, 5:29 IST
ಅರೇನೂರು ಹಕ್ಕಿಮಕ್ಕಿ ಗ್ರಾಮದ ಬಳಿ ಹಾದು ಹೋಗುವ ರಾಜ್ಯ ಹೆದ್ದಾರಿ 27ರ ರಸ್ತೆ ತಿರುವಿನಲ್ಲಿ ಉಂಟಾಗಿರುವ ಮಣ್ಣು ಕುಸಿತ
ಅರೇನೂರು ಹಕ್ಕಿಮಕ್ಕಿ ಗ್ರಾಮದ ಬಳಿ ಹಾದು ಹೋಗುವ ರಾಜ್ಯ ಹೆದ್ದಾರಿ 27ರ ರಸ್ತೆ ತಿರುವಿನಲ್ಲಿ ಉಂಟಾಗಿರುವ ಮಣ್ಣು ಕುಸಿತ   

ಆಲ್ದೂರು: ಸಮೀಪದ ಅರೇನೂರು ಹಕ್ಕಿಮಕ್ಕಿ ಗ್ರಾಮದ ಬಳಿ ಹಾದು ಹೋಗುವ ರಾಜ್ಯ ಹೆದ್ದಾರಿ 27ರ ರಸ್ತೆ ಬದಿಯ ತಿರುವಿನಲ್ಲಿ ಮಣ್ಣು ಕುಸಿತವಾಗಿದ್ದು, ತಾತ್ಕಾಲಿಕ ತಡೆಗೋಡೆಗೆ ಹಾನಿಯಾಗಿದೆ. ಇದೇ ರೀತಿ ಕುಸಿತ ಹೆಚ್ಚಿದಲ್ಲಿ ಇಡೀ ರಸ್ತೆಗೆ ಹಾನಿಯಾಗುವ ಭೀತಿ ಎದುರಾಗಿದೆ.

ಹಾಂದಿ, ಆಲ್ದೂರು ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯು ಕೊಡಗು ಜಿಲ್ಲೆಯ ವಿರಾಜಪೇಟೆಯಿಂದ ಉಡುಪಿ ಜಿಲ್ಲೆಯ ಬೈಂದೂರಿಗೆ ಸಂಪರ್ಕಿಸುತ್ತದೆ. ಈ ಬಾರಿ ಸುರಿದ ಅತಿಯಾದ ಮಳೆಯಿಂದ ಈ ಹೆದ್ದಾರಿಯ ಅರೇನೂರು ಹಕ್ಕಿಮಕ್ಕಿ ಬಳಿ ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆ ಕುಸಿದಿದೆ. ಇದು ತಿರುವಿನ ಪ್ರದೇಶವಾಗಿದ್ದು, ಇನ್ನಷ್ಟು ಅಪಾಯ ಹೆಚ್ಚಿದೆ ಎನ್ನುತ್ತಾರೆ ಸ್ಥಳೀಯರು.

ಹೆಚ್ಚು ಪ್ರವಾಸಿಗರು ಬರುವ ಶೃಂಗೇರಿ, ಹರಿಹರಪುರ, ಹೊರನಾಡಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಸಂಪರ್ಕ ಕಡಿತವಾದರೆ, ಕೊಟ್ಟಿಗೆಹಾರದ ಮೂಲಕ ಸುತ್ತುಬಳಸಿ ಸಾಗಬೇಕಾಗುತ್ತದೆ. ಒಮ್ಮೆ ಒಂದು ವಾಹನ ಸಾಗಲು ಮಾತ್ರ ಅವಕಾಶ ಇದೆ. ರಸ್ತೆ ದುರಸ್ತಿ ಆಗುವ ತನಕ ಭಾರಿ ವಾಹನ ಸಂಚಾರಕ್ಕೆ ಮಿತಿ ವಿಧಿಸುವುದು ಒಳಿತು ಎನ್ನುತ್ತಾರೆ ಸ್ಥಳೀಯರಾದ ಅರೇನೂರು ಸುಪ್ರೀತ್, ಅಶ್ರಫ್, ಮೋಹನ್, ಸಂದೀಪ್.

ADVERTISEMENT

‘ಕುಸಿದಿರುವ ಹೆದ್ದಾರಿ ಬದಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯಾಗಿ ಮಣ್ಣು ಹಾಕಿ, ಸುರಕ್ಷತಾ ಟೇಪ್ ಕಟ್ಟಲಾಗಿದೆ. ಮಳೆ ಬಿಡುವು ನೀಡಿದರೆ ಮರಳಿನ ಚೀಲ ಇಡಲಾಗುವುದು. ಶಾಶ್ವತ ಕಾಮಗಾರಿಗೆ ಹೆಚ್ಚಿನ ಅನುದಾನ ಅಗತ್ಯವಿದ್ದು, ಮನವಿ ಸಲ್ಲಿಸಲಾಗಿದೆ. ಸುರಕ್ಷಿತ ಕಾಮಗಾರಿ ನಡೆಸಲು ಸಮೀಪದ ಕಾಫಿ ತೋಟಗಳ ಮಾಲೀಕರು ಸಹಕಾರ ನೀಡಬೇಕು’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ರವಿಕುಮಾರ್ ತಿಳಿಸಿದರು.

‘ತಡೆಗೋಡೆಯನ್ನು 30 ಮೀಟರ್ ಕೆಳಗಿನಿಂದ ನಿರ್ಮಾಣ ಮಾಡಬೇಕಾಗಿದ್ದು, ಅಂದಾಜು ₹1 ಕೋಟಿ ವೆಚ್ಚವಾಗಲಿದೆ. ಈ ಸಂಬಂಧ ಪ್ರಸ್ತಾವ ಸಲ್ಲಿಸಲಾಗಿದೆ. ತಾತ್ಕಾಲಿಕ ದುರಸ್ತಿಗೆ ಕ್ರಮ ವಹಿಸಲಾಗುವುದು’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗವಿರಂಗಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.