ADVERTISEMENT

ಆಲ್ದೂರು | ಮರೀಚಿಕೆಯಾದ ಪುನರ್ವಸತಿ ಕನಸು

ಗುಡ್ಡ ಕುಸಿತದ ಭೀತಿಯಲ್ಲಿ ಬದುಕುತ್ತಿರುವ ಕುಟುಂಬಗಳು

ಜೋಸೆಫ್ ಎಂ.ಆಲ್ದೂರು
Published 10 ಜುಲೈ 2024, 4:28 IST
Last Updated 10 ಜುಲೈ 2024, 4:28 IST
ಅರೇನೂರು ಗ್ರಾಮದಲ್ಲಿ ವಾಸಿಸುತ್ತಿರುವ ಕುಟುಂಬಗಳು
ಅರೇನೂರು ಗ್ರಾಮದಲ್ಲಿ ವಾಸಿಸುತ್ತಿರುವ ಕುಟುಂಬಗಳು   

ಆಲ್ದೂರು: ಸಮೀಪದ ಬಸರವಳ್ಳಿ ಪಂಚಾಯಿತಿ ವ್ಯಾಪ್ತಿಯ ಅರೇನೂರು ಗ್ರಾಮದ ಐದು ಕುಟುಂಬದವರು ಪುನರ್ವಸತಿಯ ನಿರೀಕ್ಷೆಯಲ್ಲಿದ್ದಾರೆ. ಎರಡು ವರ್ಷಗಳಿಂದ ಮುಂದಿಟ್ಟಿರುವ ಬೇಡಿಕೆ ಈಡೇರಿಲ್ಲ ಎಂಬುದು ಅವರ ಆರೋಪ.

2022ರಲ್ಲಿ ಅತಿವೃಷ್ಟಿಯಾದಾಗ ಗುಡ್ಡ ಕುಸಿತ ಉಂಟಾಗಿ ಅಡಿಕೆ ಮರ, ಕಾಫಿ ಗಿಡಗಳು ನೆಲಕ್ಕುರುಳಿದ್ದವು. ಆ ವೇಳೆ ಸ್ಥಳ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಶಾಸಕರು, ಅಧಿಕಾರಿಗಳು ಬೆಳೆ ಹಾನಿ ಪರಿಹಾರ ನೀಡುವ ಜೊತೆಗೆ, ನಿವಾಸಿಗಳಿಗೆ ಪುನರ್ವಸತಿ ಯೋಜನೆಯಡಿ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದ್ದರು. ನಂತರ ಇಲ್ಲಿನ ನಿವಾಸಿಗಳು ತಾಲ್ಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ನಿವಾಸಿ ಸದಾಶಿವ. 

ಈ ವರ್ಷವೂ ಹೆಚ್ಚು ಮಳೆಯಾಗುತ್ತಿದ್ದು, ಗುಡ್ಡ ಕುಸಿಯುವ ಭಯ ಇದೆ. ಭೀತಿಯಲ್ಲಿಯೇ ಬದುಕುವಂತಾಗಿದೆ. ಎರಡು ವರ್ಷಗಳ ಹಿಂದೆ ಸಂಭವಿಸಿದ ಗುಡ್ಡ ಕುಸಿತದ ವೇಳೆ ಆಗಿದ್ದ ಮನೆಗಳ ಗೋಡೆ ಬಿರುಕು ಇನ್ನಷ್ಟು ದೊಡ್ಡದಾಗಿದೆ ಎಂದು ಹೇಳಿದರು.

ADVERTISEMENT
ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು ಪ್ರಸ್ತಾವ ಸಿದ್ಧಪಡಿಸಲಾಗಿದೆ. ಶೀಘ್ರ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು.
ಡಾ. ಸುಮಂತ್, ತಹಶೀಲ್ದಾರ್

‘ಗುಡ್ಡ ಕುಸಿತದ ನಂತರ ಪುನರ್ವಸತಿಯ ಭರವಸೆ ನೀಡಿದ್ದರು. ಆದರೆ, ಇನ್ನೂ ಭರವಸೆಯಾಗಿಯೇ ಉಳಿದಿದೆ. ನಾನು ಕಣ್ಮುಚ್ಚುವ ಮುನ್ನವಾದರೂ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಬೇಕು’ ಎಂದರು 30 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ 80 ವರ್ಷದ ಸೀತಮ್ಮ.

ಗ್ರಾಮದಲ್ಲಿ ಐದು ಕುಟುಂಬಗಳ 20 ಮಂದಿ ವಾಸ ಇದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಶಾಸಕಿ ನಯನಾ ಮೋಟಮ್ಮ ಅಧಿಕಾರಿಗಳಿಗೆ ತಾಕೀತು ಮಾಡಿದ ಮೇಲೆ ಅರೇನೂರು ಸರ್ವೆ ಸಂಖ್ಯೆ 32ರಲ್ಲಿ 2.5 ಎಕರೆ ಜಮೀನು ಮೀಸಲಿಡಲಾಗಿದೆ. ಆದರೆ, ಪುನರ್ವಸತಿ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಅರೇನೂರು ಸುಪ್ರೀತ್ ಆರೋಪಿಸಿದರು.

ಈಚೆಗೆ ಸುರಿದ ಮಳೆಯಿಂದ ಮನೆ ಹಿಂಭಾಗದಲ್ಲಿ ಪುನಃ ಮಣ್ಣು ಕುಸಿತ ಉಂಟಾಗಿರುವುದು
ಈ ಹಿಂದೆ ಗುಡ್ಡ ಕುಸಿತದ ವೇಳೆ ಆಗಿದ್ದ ಗೋಡೆಗಳ ಬಿರುಕು ಇನ್ನಷ್ಟು ದೊಡ್ಡದಾಗಿದೆ
ಈ ಹಿಂದೆ ಗುಡ್ಡ ಕುಸಿತದ ವೇಳೆ ಆಗಿದ್ದ ಗೋಡೆಗಳ ಬಿರುಕು ಇನ್ನಷ್ಟು ದೊಡ್ಡದಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.