ADVERTISEMENT

ಚಿಕ್ಕಮಗಳೂರು | ಭೂಕುಸಿತ: ಪುನರ್ವಸತಿ ಮರೀಚಿಕೆ; ಐದು ವರ್ಷಗಳಿಂದ ತಪ್ಪದ ಗೋಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 7:12 IST
Last Updated 1 ಜುಲೈ 2024, 7:12 IST
ಚನ್ನಡಲು ಸಂತ್ರಸ್ತರು ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿರುವುದು
ಚನ್ನಡಲು ಸಂತ್ರಸ್ತರು ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿರುವುದು   

ಚಿಕ್ಕಮಗಳೂರು: ಮಳೆಗಾಲ ಬಂದರೆ ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ನೆನಪಾಗುವುದು 2019ರ ಮಹಾಮಳೆ. ಈ ಮಳೆಯಲ್ಲಿ ಮನೆ, ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಪುನರ್ವಸತಿ ದೊರಕಿಲ್ಲ.  2019ರಲ್ಲಿ ಮಹಾಮಳೆಗೆ ಮೂಡಿಗೆರೆ ತಾಲ್ಲೂಕಿನ ಮಧುಗುಂಡಿ, ಮಲೆಮನೆ, ಅಲೆಖಾನ್ ಹೊರಟ್ಟಿ ಮೊದಲಾದ ಕಡೆಗಳಲ್ಲಿ ಕೆಲವು ಮನೆಗಳು, ತೋಟಗಳು ಕೊಚ್ಚಿ ಹೋಗಿದ್ದವು. ಗುಡ್ಡ ಭಾಗದ ಕೆಲವೆಡೆ ಮಣ್ಣು ಜರಿದಿತ್ತು.

ಮಧುಗುಂಡಿ, ಮಲೆಮನೆ ಭಾಗದಲ್ಲಿ ಮನೆ, ಆಸ್ತಿ ಎರಡನ್ನೂ ಕಳೆದುಕೊಂಡಿರುವವರು ಹೆಚ್ಚಿದ್ದಾರೆ. ಬಹಳಷ್ಟು ಕುಟುಂಬಗಳಿಗೆ ಜಮೀನು, ಮನೆ ಒದಗಿಸಿಲ್ಲ. ಮನೆ, ಆಸ್ತಿ ಮೊದಲಾದವನ್ನು ಕಳೆದುಕೊಂಡವರು ಪರಿಹಾರ, ಪುನರ್ವಸತಿಗಾಗಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. 11 ಕುಟುಂಬಗಳವರು ಮೂಡಿಗೆರೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದರು. ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಮೊದಲ ಕೆಡಿಪಿ ಸಭೆಯಲ್ಲೂ ಈ ವಿಷಯವನ್ನು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಪ್ರಸ್ತಾಪಿಸಿದ್ದರು. ಆದರೂ ಸಮಸ್ಯೆ ಬಗೆಹರಿದಿಲ್ಲ.

ಕೆಲವೆಡೆ ಅರಣ್ಯ ಜಾಗವಾಗಿದ್ದೃ, ಇನ್ನೂ ಕೆಲವೆಡೆ ಜಿಲ್ಲಾಡಳಿತ ಗುರುತಿಸಿರುವ ಜಾಗಗಳಿಗೆ ಹೋಗಲು ಕೆಲ ಸಂತ್ರಸ್ತರು ತಯಾರಿಲ್ಲ. ಸಮಸ್ಯೆ ಕಗ್ಗಂಟಾಗಿದ್ದು, ನೆಲೆ ಕಳೆದುಕೊಂಡ ಸಂತ್ರಸ್ತರು ಜಿಲ್ಲಾಡಳಿತದ ಮುಂದೆ ಹಲಬುವುದು ತಪ್ಪಿಲ್ಲ. ಆದರೆ, ಪುನರ್ವಸತಿ ಮಾತ್ರ ದಕ್ಕಿಲ್ಲ.

ADVERTISEMENT

ಮಲೆಮನೆ, ಮಧುಗುಂಡಿಯವರ ಬದುಕು ಛಿದ್ರ
ಮೂಡಿಗೆರೆ: ತಾಲ್ಲೂಕಿನ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಧುಗುಂಡಿ ಎಂಬ ಗ್ರಾಮವು ಎಂಟು ಮನೆಗಳಿದ್ದ ಪುಟ್ಟ ಗ್ರಾಮ. 2019 ಆಗಸ್ಟ್ 9 ರಂದು ಸುರಿದ ಮಹಾಮಳೆಗೆ ಸಿಲುಕಿ ಸಂಪೂರ್ಣವಾಗಿ ನೆಲೆ ಕಳೆದುಕೊಂಡು ಐದು ವರ್ಷಗಳು ಉರುಳಿದರೂ ಇದುವರೆಗೂ ಪರಿಹಾರವೆಂಬುದು ಮರೀಚಿಕೆಯಾಗಿದೆ.

ಅಂದು ಗ್ರಾಮದ ಬಹುತೇಕರು ವೈಕುಂಠ ಸಮಾರಾಧನೆಗೆಂದು ಸಮೀಪದ ಬಣಕಲ್ ಗ್ರಾಮಕ್ಕೆ ಹೋಗಿದ್ದರು. ಊರಿನಲ್ಲಿ ಐದಾರು ಮಹಿಳೆಯರಷ್ಟೇ ಉಳಿದುಕೊಂಡಿದ್ದರು. ವೈಕುಂಠ ಸಮಾರಾಧನೆಗೆ ಹೋದವರು ಊರಿಗೆ ಹಿಂತಿರುಗುವ ವೇಳೆಗಾಗಲೇ ಮಲೆಮನೆ ಗ್ರಾಮದ ಹಿಂಭಾಗದಲ್ಲಿದ್ದ ಗುಡ್ಡವೊಂದು ಕುಸಿದು ಗ್ರಾಮವನ್ನು ಬಹುತೇಕ ನಿರ್ನಾಮ ಮಾಡಿತ್ತು. ಬಣಕಲ್ ಗ್ರಾಮಕ್ಕೆ ಹೋಗಿದ್ದ ಗ್ರಾಮಸ್ಥರು ಮರಳಿ ತಮ್ಮ ಮಲೆಮನೆ ಊರಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಅವರೆಲ್ಲಾ ಕೊಟ್ಟಿಗೆಹಾರದಲ್ಲಿಯೇ ಸಿಲುಕಿದ್ದರು. ಗ್ರಾಮದ ಹಿಂಭಾಗದ ಬೆಟ್ಟದಲ್ಲಿ ಇದ್ದ ಕಾಫಿ ಎಸ್ಟೇಟ್ ನ ಮರಗಿಡಗಳು, ದೊಡ್ಡ ದೊಡ್ಡ ಬಂಡೆ ಕಲ್ಲುಗಳು ಗ್ರಾಮಕ್ಕೆ ಹರಿದು ಬಂದಿದ್ದವು. ಮನೆಯಿಂದ ಹೊರಬರಲಾಗದ ಮಹಿಳೆಯರು ಎರಡು ಮನೆಗಳ ಮಾಳಿಗೆಯಲ್ಲಿ ಸೇರಿಕೊಂಡು ರಾತ್ರಿಯಿಡೀ ಕಾಲ ಕಳೆದಿದ್ದರು. ಮರುದಿನ ಬೆಳಿಗ್ಗೆ ಸುತ್ತಲ ಗ್ರಾಮದ ಯುವಕರು ಸಾಹಸ ಮೆರೆದು ಅವರನ್ನು ಊರಿನಿಂದ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದರು. ಸುಂಕಸಾಲೆ ಗ್ರಾಮ ಪಂಚಾಯಿತಿ ಮಧುಗುಂಡಿ ಗ್ರಾಮವು ಕೂಡ ಮಳೆಹಾನಿಗೆ ಸಿಲುಕಿ ಜನರು ಬದುಕು ಕಳೆದುಕೊಳ್ಳುವಂತಾಗಿದ್ದು, ಪರಿಹಾರಕ್ಕಾಗಿ ಐದು ವರ್ಷಗಳಿಂದ ಅಂಗಲಾಚಿದರೂ ನೆಲೆ ಸಿಗದೇ ಅತಂತ್ರ ಪರಿಸ್ಥಿತಿಯಲ್ಲಿ ಬದುಕು ದೂಡುತ್ತಿದ್ದಾರೆ.

ಘಟನೆಯು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ನೆರವಿನ ಮಹಾಪೂರವೇ ಹರಿದು ಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಆದಿಯಾಗಿ ರಾಜಕೀಯ ನಾಯಕರು ಪರಿಹಾರದ ಭರವಸೆ ನೀಡಿದ್ದರು. ಆದರೆ, ಇಂತಹ ಕಹಿಘಟನೆಯಲ್ಲಿ ಸಿಲುಕಿದ ಮಲಮನೆಯ ಸಂತ್ರಸ್ಥರಿಗೆ ಸರ್ಕಾರ ಇನ್ನೂ ಪುನರ್ವಸತಿ ನೀಡಲು ಸಾಧ್ಯವಾಗಿಲ್ಲ. ಮಲೆಮನೆ, ಮಧುಗುಂಡಿ ಗ್ರಾಮಗಳ ಜನರು ಕಳೆದ ನಾಲ್ಕು ವರ್ಷಗಳಿಂದ ಪರ್ಯಾಯ ಭೂಮಿಗಾಗಿ ಅಲೆದಾಡುತ್ತಲೇ ಇದ್ದಾರೆ.

‘ಮಳೆಯು ನಮ್ಮ ಜೀವನವನ್ನೇ ಕಸಿದುಕೊಂಡಿತು. ಒಂದೇ ರಾತ್ರಿಯಲ್ಲಿ ಮನೆ, ಜಮೀನನ್ನು ಕಳೆದುಕೊಂಡು ಬೀದಿಗೆ ಬರುವಂತಾಯಿತು. ಅಂದಿನ ದಿನವನ್ನು ನೆನಪಿಸಿಕೊಳ್ಳಲೂ ಅಸಾಧ್ಯವಾಗುತ್ತದೆ. ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರಗಳಿಗೆ ಬಂದ ನಮಗೆ ಹೊಸ ಜಾಗದಲ್ಲಿ ಮನೆ, ಜಮೀನು ನೀಡುವ ಭರವಸೆಗಳನ್ನು ನೀಡಲಾಗಿತ್ತು. 9 ತಿಂಗಳ ಮನೆ ಬಾಡಿಗೆ ನೀಡುವ ಭರವಸೆಯನ್ನು ನೀಡಿ ನಿರಾಶ್ರಿತರ ಕೇಂದ್ರದಿಂದ ಹೊರ ಹಾಕಲಾಯಿತು. ಆದರೆ ಇದುವರೆಗೂ ನಯಾ ಪೈಸೆಯನ್ನೂ ಮನೆ ಬಾಡಿಗೆಯೆಂದು ನೀಡಲಿಲ್ಲ. ನೆಲೆ ಕಳೆದುಕೊಂಡ ನಮಗೆ ಇದುವರೆಗೂ ಮನೆ, ಜಮೀನನ್ನು ಕೊಡುವ ಕೆಲಸ ಮಾಡಲಿಲ್ಲ. ಇಂದು ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಪ್ರತಿಭಟನೆ, ಹೋರಾಟ ನಡೆಸಿದಾಗ ಭರವಸೆ ನೀಡುವ ಅಧಿಕಾರಿಗಳು ಬಳಿಕ ಮಾತೇ ಆಡುವುದಿಲ್ಲ. ನಮಗೆ ಬಂದ ಕಷ್ಟ ಇನ್ನ್ಯಾರಿಗೂ ಬರಬಾರದು’ ಎಂದು ಕಣ್ಣೀರಿಡುತ್ತಾರೆ ಮಳೆಯಿಂದ ಮನೆ ಕಳೆದುಕೊಂಡ ಮಧುಗುಂಡಿಯ ರೇವತಿ.

ಮೂಡಿಗೆರೆ ತಾಲ್ಲೂಕಿನ ಮಲೆಮನೆಯಲ್ಲಿ 2019 ರಲ್ಲಿ ಸುರಿದ ಮಳೆಗೆ ಮನೆಹಾನಿಯಾಗಿದ್ದ ದೃಶ್ಯ
ಮೂಡಿಗೆರೆ ತಾಲ್ಲೂಕಿನ ಮಲೆಮನೆಯಲ್ಲಿ 2019 ರಲ್ಲಿ ಸುರಿದ ಮಳೆಗೆ ಮನೆಹಾನಿಯಾಗಿದ್ದ ದೃಶ್ಯ
ಚನ್ನಡಲು: 5 ವರ್ಷ ಕಳೆದರೂ ಪುನರ್ವಸತಿ ಇಲ್ಲ
ಕಳಸ: ತಾಲ್ಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಚನ್ನಡಲು ಗ್ರಾಮದಲ್ಲಿ 2019ರ ಆಗಸ್ಟ್ ತಿಂಗಳಲ್ಲಿ ನಡೆದ ಭೂಕುಸಿತದಿಂದ ಇಡೀ ಗ್ರಾಮದಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗಿತ್ತು.  ಅನೇಕ ಮನೆಗಳಿಗೆ ತೋಟಗಳಿಗೆ ಹಾನಿಯಾಗಿತ್ತು. ಓರ್ವ ನಿವಾಸಿಯ ಪ್ರಾಣಹಾನಿ ಕೂಡ ಆಗಿತ್ತು. ಆಗಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಇಡೀ ಗ್ರಾಮವನ್ನು ಅಲ್ಲಿಂದ ಸ್ಥಳಾಂತರ ಮಾಡುವ ಯೋಜನೆ ರೂಪಿಸಿದ್ದರು. ಕಳಸ ಪಂಚಾಯಿತಿ ವ್ಯಾಪ್ತಿಯ ಕುಂಬಳಡಿಕೆಯಲ್ಲಿ ನಿವೇಶನ ನೀಡುವ ಯೋಜನೆಗೆ ಚನ್ನಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಆನಂತರದ 3 ವರ್ಷದ ಸಂತ್ರಸ್ತರ ಹೋರಾಟ ಮತ್ತು ಇಲಾಖೆಗಳ ಮಂದಗತಿಯ ಕಾರ್ಯನಿರ್ವಹಣೆಯಲ್ಲಿ ಇಡಕಿಣಿ ಗ್ರಾಮದ ಓಡಿನಕುಡಿಗೆ ಬಳಿ ನಿವೇಶನ ನೀಡಲು ಕಂದಾಯ ಇಲಾಖೆ ಒಪ್ಪಿತು. ಆದರೆ ಚನ್ನಡಲಿನ 16 ಕುಟುಂಬಗಳು ಮಾತ್ರ ಸ್ಥಳಾಂತರ ಆಗುವ ಪ್ರಸ್ತಾಪಕ್ಕೆ ಒಪ್ಪಿದ್ದರು. ಸಂತ್ರಸ್ತರು ಅಲ್ಲಿ ಮನೆಗಳಿಗೆ ಅಡಿಪಾಯ ಮಾಡಿಕೊಂಡಿದ್ದಾರೆ. ಆದರೆ ಈವರೆಗೂ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಆಗಿಲ್ಲ. ಮಳೆ ಹೆಚ್ಚಾದಾಗ ಚನ್ನಡಲು ಗ್ರಾಮಸ್ಥರು ಈಗಲೂ ಭೂಕುಸಿತದ ಭೀತಿಯಲ್ಲೇ ಜೀವನ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.