ADVERTISEMENT

ಭೂಕುಸಿತ: ಮುಳ್ಳಯ್ಯನಗಿರಿ, ಚಾರ್ಮಾಡಿ ಹೆಚ್ಚು ಅಪಾಯ

ಭೂಕುಸಿತಕ್ಕೆ ರಸ್ತೆ ನಿರ್ಮಾಣ, ಕಾಡು ನಾಶವೂ ಕಾರಣ; ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆ ವರದಿ

ವಿಜಯಕುಮಾರ್‌ ಎಸ್‌.ಕೆ
Published 15 ಅಕ್ಟೋಬರ್ 2024, 8:47 IST
Last Updated 15 ಅಕ್ಟೋಬರ್ 2024, 8:47 IST
ಮುಳ್ಳಯ್ಯನಗಿರಿ ಸಮೀಪದ ಕವಿಕಲ್ ಗಂಡಿ ಬಳಿ ಭೂಕುಸಿತ ಉಂಟಾಗಿರುವುದು
ಮುಳ್ಳಯ್ಯನಗಿರಿ ಸಮೀಪದ ಕವಿಕಲ್ ಗಂಡಿ ಬಳಿ ಭೂಕುಸಿತ ಉಂಟಾಗಿರುವುದು   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಬಹುದಾದ ಮೂರು ಪ್ರದೇಶಗಳನ್ನು ಭಾರತೀಯ ಭೂ
ಸರ್ವೇಕ್ಷಣಾ ಸಂಸ್ಥೆಯು (ಜಿಎಸ್‌ಐ) ಗುರುತಿಸಿದ್ದು, ಮುಳ್ಳಯ್ಯನಗಿರಿ, ಚಾರ್ಮಾಡಿ ಘಾಟಿ ಮತ್ತು ಬಾಬಾಬುಡನ್‌ಗಿರಿ ರಸ್ತೆಯಲ್ಲಿ ಹೆಚ್ಚು ಅಪಾಯದ ಸ್ಥಳಗಳಿವೆ ಎಂದು ವರದಿ ನೀಡಿದೆ.

ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಜಿಎಸ್ಐ ತಂಡ, ನೆಲದಾಳದ ಕಲ್ಲಿನ ರಚನೆ, ಮೇಲ್ಪದರದ ಮಣ್ಣು, ಇಳಿಜಾರಿನ ಸ್ವರೂಪ, ಹಸಿರು ಹೊದಿಕೆ, ಮಳೆಯ ಪ್ರಮಾಣ, ಗಾಳಿ ಬೀಸುವ ವೇಗ, ಅಂತರ್ಜಲ ಮತ್ತು ಮೇಲ್ಮೈ ನೀರಿನ ಹರಿವು, ಭೂಬಳಕೆ ರೀತಿಯನ್ನು ಜಿಎಸ್‌ಐ ಅಧ್ಯಯನ ನಡೆಸಿದೆ.

ಭೂಕುಸಿತವಾಗುವ ಸಂಭವನೀಯ ಪ್ರದೇಶಗಳ ರಾಷ್ಟ್ರೀಯ ದಾಖಲೀಕರಣ (ಎನ್‌ಎಲ್‌ಎಸ್‌ಎಂ) ಪ್ರಕಾರ ಜಿಲ್ಲೆಯಲ್ಲಿ ಶೇ 4.60ರಷ್ಟು ಪ್ರದೇಶವು ಹೆಚ್ಚು ಅಪಾಯದ ಸ್ಥಳಗಳು, ಶೇ 20.92ರಷ್ಟು ಮಧ್ಯಮ ಅಪಾಯದ ಸ್ಥಳಗಳು ಮತ್ತು ಶೇ 74.47ರಷ್ಟು ಪ್ರದೇಶವು ಕಡಿಮೆ ಸಾಧ್ಯತೆಗಳಿರುವ ಪ್ರದೇಶ ಎಂದು ಗುರುತಿಸಿದೆ.

ADVERTISEMENT

ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ರಸ್ತೆ ಮತ್ತು ಚಾರ್ಮಾಡಿ ಘಾಟಿ ವಿಭಾಗದಲ್ಲಿ ಹೆಚ್ಚು ಅಪಾಯದ ಸ್ಥಳ ಮತ್ತು ಮಧ್ಯಮ ಅಪಾಯದ ಸ್ಥಳಗಳಿವೆ ಎಂದು ಅಭಿಪ್ರಾಯಪಟ್ಟಿದೆ. ಕಡಿದಾದ ಇಳಿಜಾರು ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಕಾಡಿನಲ್ಲಿ ಮಾನವ ಚಟುವಟಿಕೆ ಹೆಚ್ಚಾಗಿರುವುದರಿಂದ ಈ ರೀತಿಯ ಅಪಾಯಗಳು ಹೆಚ್ಚಾಗಿವೆ.‌

ರಾಷ್ಟ್ರೀಯ ಹೆದ್ದಾರಿ–73 ಮತ್ತು ಇತರ ಸ್ಥಳೀಯ ರಸ್ತೆಗಳಲ್ಲಿ ಭೂಕುಸಿತಗಳಿಗೆ ಹೆಚ್ಚು ಸಾಧ್ಯತೆಗಳಿವೆ. ಆಳವಾಗಿ ಬೇರು ಬಿಟ್ಟಿರುವ ಮರಗಳ ಕಡಿತ, ಗುಡ್ಡಗಳನ್ನು ಕಡಿದಾಗಿ ಅಗೆದು ರಸ್ತೆ ಮತ್ತು ಮನೆ ನಿರ್ಮಾಣ ಮಾಡಿರುವುದು ಭೂಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಜಿಎಸ್‌ಐ ಅಭಿಪ್ರಾಯಪಟ್ಟಿದೆ.

ಅತಿಯಾದ ಮಳೆ, ‌ಅಂತರ್ಜಲದ ಒತ್ತಡ ನಿರ್ವಹಣೆ ಮಾಡದಿರುವುದು, ಗುಡ್ಡಗಳನ್ನು ಕಡಿದಾಗಿ ಅಗೆದು ರಸ್ತೆ ಮತ್ತು ಮನೆಗಳನ್ನು ನಿರ್ಮಾಣ ಮಾಡಿರುವುದು ಗುಡ್ಡ ಕುಸಿತಕ್ಕೆ ಕಾರಣ ಎಂಬುದನ್ನು ತಂಡ ಪತ್ತೆ ಮಾಡಿದೆ. 

ಮಳೆಗಾಲದಲ್ಲಿ ಉಂಟಾಗುವ ಒರತೆಯಿಂದ ನೀರಿನ ಹರಿವು ಹೆಚ್ಚಿರುತ್ತದೆ. ಒರತೆ ಹೆಚ್ಚಿರುವ ಕಡೆಗಳಲ್ಲೂ ಗುಡ್ಡಗಳನ್ನು ಕಡಿದಾಗಿ ಕೊರೆದು ರಸ್ತೆ ನಿರ್ಮಾಣ ಮಾಡಿರುವ ಕಡೆಗಳಲ್ಲಿ ಹೆಚ್ಚಾಗಿ ಕುಸಿತ ಆಗಿವೆ. ಇಳಿಜಾರುಗಳನ್ನು ಸ್ಥಿರೀಕರಿಸಬೇಕು ಮತ್ತು ಅವುಗಳ ಬಲವರ್ಧನೆಗೆ ಒತ್ತು ನೀಡಬೇಕು ಎಂದು ವರದಿ ಹೇಳಿದೆ.

ರಸ್ತೆಗಳ ಪಕ್ಕದಲ್ಲಿ ಗೇಬಿಯನ್ ಗೋಡೆಗಳನ್ನು(ಕಲ್ಲು ಮತ್ತು ತಂತಿಗಳನ್ನು ಒಳಗೊಂಡ ತಡೆಗೋಡೆ) ನಿರ್ಮಿಸಬೇಕು. ಈಗಾಗಲೇ ದುರ್ಬಲವಾಗಿರುವ ಇಳಿಜಾರುಗಳ ಬಳಿಯ ರಸ್ತೆಗಳ ಬದಿಗಳಲ್ಲಿ ಈ ರೀತಿಯ ಗೋಡೆ ನಿರ್ಮಾಣವಾಗಬೇಕು. ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಿದರೆ ಅವುಗಳಲ್ಲಿ ನೀರು ಹರಿದು ಹೋಗುವಂತೆ ರಂಧ್ರಗಳು ಇರುವಂತೆ ನೋಡಿಕೊಳ್ಳಬೇಕು. ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿ ನೀರು ರಸ್ತೆಗೆ ಹರಿಯುವುದನ್ನ ತಡೆಯಬೇಕು ಎಂದು ಸಲಹೆ ನೀಡಿದೆ.

ನೀರಿನ ಮೇಲ್ಮೈ ಹರಿವು ಮತ್ತು ಒಳ ಹರಿವು ನಿರ್ವಹಣೆಗೆ ಸಮಗ್ರವಾಗಿ ಚರಂಡಿ ನಿರ್ಮಿಸಬೇಕು. ಗುಡ್ಡ ಕುಸಿತ ಸಂಭವಿಸಬಹುದಾದ ಸ್ಥಳಗಳಲ್ಲಿ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಹರಿಯುವ ನೀರಿನಿಂದ ಆಗುವ ಮಣ್ಣಿನ ಸವೆತಗಳನ್ನು ನಿಯಂತ್ರಿಸಬೇಕು. ಇಳಿಜಾರುಗಳಲ್ಲಿ ಕಾಡು ರಕ್ಷಣೆ ಮಾಡಬೇಕು. ಅದರಲ್ಲೂ ಆಳವಾಗಿ ಬೇರು ಬೀಡುವ ಜಾತಿಯ ಸಸ್ಯೆಗಳನ್ನು ಬೆಳೆಸಲು ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಿದೆ.

ಗುಡ್ಡಕುಸಿತ ಉಂಟಾಗಬಹುದಾದ ಗುಡ್ಡಗಳ ಮೇಲೆ ನಿರಂತರವಾಗಿ ಪರಿಶೀಲನೆ ನಡೆಸಬೇಕು. ಸಾಧ್ಯತೆ ಕಂಡುಬಂದರೆ ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ವರದಿ ಹೇಳಿ‌ದೆ.

5 ಕಡೆ ಜನವಸತಿ ಸ್ಥಳಾಂತರಕ್ಕೆ ಶಿಫಾರಸು

ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಗುಡ್ಡಕುಸಿತ ಪ್ರದೇಶಗಳನ್ನು ಗುರುತಿಸಿರುವ ಭಾರತೀಯ ಭೂಸರ್ವೇಕ್ಷಣಾ ಇಲಾಖೆ 5 ಕಡೆಗಳಲ್ಲಿ ಜನವಸತಿ ಸ್ಥಳಾಂತರಕ್ಕೆ ಜಿಎಸ್‌ಐ ಶಿಫಾರಸು ಮಾಡಿದೆ. ಕೊಪ್ಪ ತಾಲ್ಲೂಕಿನ ಗುಡ್ಡೇತೋಟ ಬಸರಿಕಟ್ಟೆ ಶೃಂಗೇರಿ ತಾಲ್ಲೂಕಿನ ಕೆರೆದಂಡೆ ಹೊರನಾಡು ಸಮೀಪದ ಸೋಮನಕಟ್ಟೆ ಚನ್ನಹಡ್ಲು ಪ್ರದೇಶದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶದಲ್ಲೇ ಜನ ವಾಸವಿದ್ದಾರೆ. ಕುಟುಂಬಗಳನ್ನು ಮಳೆಗಾಲದ ವೇಳೆಗೆ ಸ್ಥಳಾಂತರ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ. ಅದರಲ್ಲೂ ಗುಡ್ಡೇತೋಟ ಸಮೀಪದ ಕಡಿದಾದ ಗುಡ್ಡದಲ್ಲಿ ಜನವಸತಿಗಳಿದ್ದು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.